Home ಅಪರಾಧ ವಿವಾದಿತ ಕೇಂದ್ರವಾದ ಬೆಂಗಳೂರು ‘ಪ್ರೆಸ್ ಕ್ಲಬ್ ಕಟ್ಟಡ’ : ನ್ಯಾಯಾಲಯದಿಂದ ‘ಪ್ರೆಸ್ ಕ್ಲಬ್’ ಮ್ಯಾನೇಜ್ಮೆಂಟ್‌ಗೆ ನಾನ್‌ಬೇಲಬಲ್...

ವಿವಾದಿತ ಕೇಂದ್ರವಾದ ಬೆಂಗಳೂರು ‘ಪ್ರೆಸ್ ಕ್ಲಬ್ ಕಟ್ಟಡ’ : ನ್ಯಾಯಾಲಯದಿಂದ ‘ಪ್ರೆಸ್ ಕ್ಲಬ್’ ಮ್ಯಾನೇಜ್ಮೆಂಟ್‌ಗೆ ನಾನ್‌ಬೇಲಬಲ್ ವಾರೆಂಟ್ ಜಾರಿ

0
ಕೋಗಿಲು ಡೆಮಾಲಿಶನ್ನಿನ ಕಾನೂನು, ಅಕ್ರಮವಾಗಿ ನಿರ್ಮಾಣಗೊಂಡ ಪ್ರೆಸ್ ಕ್ಲಬ್ ಕಟ್ಟಡಕ್ಕೆ ಯಾಕಿಲ್ಲ?

ಬೆಂಗಳೂರು: ನಗರದ ಕೋಗಿಲು ಪ್ರದೇಶದಲ್ಲಿ ನಡೆದ ಡೆಮಾಲಿಶನ್ ಕಾರ್ಯಾಚರಣೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಇದೀಗ ನಗರದ ಕೇಂದ್ರ ಭಾಗದಲ್ಲಿರುವ ಪ್ರೆಸ್ ಕ್ಲಬ್ ಕಟ್ಟಡದ ಕಾನೂನಾತ್ಮಕ ಸ್ಥಿತಿಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

ಕರ್ನಾಟಕ ಭೂ ಕಬಳಿಕೆ ನಿವಾರಣಾ ವಿಶೇಷ ನ್ಯಾಯಾಲಯ, ಬೆಂಗಳೂರು (L.C.C.(B) No.388/2023) ಪ್ರಕರಣಕ್ಕೆ ಸಂಬಂಧಿಸಿ ನಾನ್ ಬೇಲಬಲ್ ವಾರಂಟ್ (NBW) ಜಾರಿಗೊಳಿಸಿರುವ ನ್ಯಾಯಾಲಯದ ಆದೇಶವು ಈ ಚರ್ಚೆಗೆ ಹೊಸ ತಿರುವು ನೀಡಿದೆ. 70ನೇ ಪ್ರಕ್ರರಣ ಸಂಹಿತೆಯ ಅಡಿಯಲ್ಲಿ ಹೊರಡಿಸಲಾದ ಈ ಆದೇಶದಲ್ಲಿ, ಸರ್ಕಾರಿ ಜಾಗದ ಅತಿಕ್ರಮಣ ಮತ್ತು ನ್ಯಾಯಾಲಯದ ಸೂಚನೆಗಳನ್ನು ಪಾಲಿಸದ ಆರೋಪಗಳ ಕುರಿತು ಗಂಭೀರ ಉಲ್ಲೇಖಗಳಿವೆ.

ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟವಾಗಿ, ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗದೇ ಇರುವ ಹಿನ್ನೆಲೆಯಲ್ಲಿ 24.02.2026 ರಂದು ಬೆಳಿಗ್ಗೆ 11 ಗಂಟೆಗೆ ಹಾಜರುಪಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಸರ್ಕಾರಿ ಜಾಗದ ಅತಿಕ್ರಮಣ ಪ್ರಕರಣಗಳನ್ನು ನ್ಯಾಯಾಂಗವು ಎಷ್ಟು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ಹಿನ್ನೆಲೆ ನೋಡಿದರೆ, ಕೋಗಿಲು ಪ್ರದೇಶದಲ್ಲಿ ಬಡವರು ಬದುಕಿನ ಆಸರೆಯಾಗಿ ಸರ್ಕಾರಿ ಜಾಗದಲ್ಲಿ ಟೆಂಟ್ ಹಾಕಿಕೊಂಡಿದ್ದನ್ನು ‘ಅತಿಕ್ರಮಣ’ ಎಂದು ಗುರುತಿಸಿ ಜೆಸಿಬಿ–ಬುಲ್ಡೋಜರ್ ಮೂಲಕ ತೆರವುಗೊಳಿಸಲಾಗಿದೆ. ಆದರೆ ಇದೇ ಮಾನದಂಡವನ್ನು ನಗರದಲ್ಲಿನ ಪ್ರಭಾವಿ ವರ್ಗಗಳಿಗೆ ಅನ್ವಯಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ತೀವ್ರವಾಗಿದೆ.

ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ ಏನೆಂದರೆ, “ಬಡವರು ಟೆಂಟ್ ಹಾಕಿದರೆ ಅತಿಕ್ರಮಣ, ಪತ್ರಕರ್ತರು ಕುಡಿಯಲು ಕಟ್ಟಡ ಕಟ್ಟಿದರೆ ಅದು ಕ್ಲಬ್ ಆಗುತ್ತದೆಯೇ?” ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಜೆಸಿಬಿ ಮತ್ತು ಬುಲ್ಡೋಜರ್ ಕಾರ್ಯಾಚರಣೆಗಳನ್ನು ಸಂಭ್ರಮಿಸಿದ ಕೆಲವು ಮಾಧ್ಯಮ ವಲಯಗಳು, ಪ್ರೆಸ್ ಕ್ಲಬ್ ಕಟ್ಟಡದ ವಿಚಾರದಲ್ಲಿ ಮೌನ ವಹಿಸಿರುವುದೇಕೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಕಾನೂನು ಎಲ್ಲರಿಗೂ ಸಮಾನವಾಗಬೇಕೆ ಅಥವಾ ಅದು ಸಾಮಾಜಿಕ–ಆರ್ಥಿಕ ಸ್ಥಾನಮಾನಕ್ಕೆ ಅನುಗುಣವಾಗಿ ಬದಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿದೆ.

ನ್ಯಾಯಾಲಯದ ಆದೇಶಗಳು ಸ್ಪಷ್ಟವಾಗಿರುವಾಗ, ಅತಿಕ್ರಮಣ ಎನ್ನುವುದು ಅತಿಕ್ರಮಣವೇ — ಅದು ಬಡವರಿಂದ ಆಗಿರಲಿ ಅಥವಾ ಪ್ರಭಾವಿಗಳಿಂದ ಆಗಿರಲಿ ಎಂಬ ಧ್ವನಿ ಬಲವಾಗುತ್ತಿದೆ. ಪ್ರೆಸ್ ಕ್ಲಬ್ ಕಟ್ಟಡಕ್ಕೂ ಇದೇ ಕಾನೂನು ಅನ್ವಯವಾಗುತ್ತದೆಯೇ? ಅಲ್ಲಿಯೂ ಬುಲ್ಡೋಜರ್ ಕಾರ್ಯಾಚರಣೆ ನಡೆಯುತ್ತದೆಯೇ? ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಬೇಕಾದ ಒತ್ತಡ ಹೆಚ್ಚುತ್ತಿದೆ.

ಕಾನೂನು ಎಲ್ಲರಿಗೂ ಒಂದೇ ಎಂಬ ತತ್ವವು ಕಾಗದದಲ್ಲೇ ಉಳಿಯದೆ, ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

You cannot copy content of this page

Exit mobile version