ಕಾರವಾರ: ಬಿಜೆಪಿಗೆ ಸೇರುವವರ ಮೇಲಿನ ಪ್ರಕರಣಗಳು ‘ವಾಷಿಂಗ್ ಮಿಷನ್’ಗೆ ಹೋದಂತೆ ಸ್ವಚ್ಛವಾಗುತ್ತವೆ ಎಂದು ವ್ಯಂಗ್ಯವಾಡಿರುವ ಬಿಜೆಪಿ ಉಚ್ಚಾಟಿತ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶಿವರಾಮ ಹೆಬ್ಬಾರ್ ಮೊದಲ ಬಾರಿಗೆ ಬಹಿರಂಗವಾಗಿ ಪಾಲ್ಗೊಂಡರು. ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು.
“ಯಾರೆಲ್ಲ ಬಿಜೆಪಿಗೆ ಹೋಗುತ್ತಾರೋ ಅವರನ್ನು ವಾಷಿಂಗ್ ಮಿಷನ್ಗೆ ಹಾಕಿದರೆ ಎಲ್ಲವೂ ಕ್ಲೀನ್ ಆಗುತ್ತದೆ. ನನ್ನನ್ನೂ ವಾಷಿಂಗ್ ಮಿಷನ್ನಲ್ಲಿ ಹಾಕಿದ್ದರು” ಎಂದು ಹೆಬ್ಬಾರ್ ವ್ಯಂಗ್ಯವಾಡಿದರು.
ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಿಜೆಪಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಚುನಾವಣಾ ಆಯೋಗದ ಕಾರ್ಯವೈಖರಿಯನ್ನೂ ಪ್ರಶ್ನಿಸಿದರು.
“ಸಿಬಿಐ, ಇಡಿ ಹಾಗೂ ಚುನಾವಣಾ ಆಯೋಗವನ್ನು ಬಿಜೆಪಿಯವರು ಜೇಬಿನಲ್ಲಿ ಇಟ್ಟುಕೊಂಡು ಕೆಲಸ ಮಾಡಿಕೊಂಡು ಹೋದರೆ, ದಬ್ಬಾಳಿಕೆ ಕಾಂಗ್ರೆಸ್ ಮೇಲೆಯೇ ಆಗುತ್ತದೆ. ಸತೀಶ್ ಸೈಲ್, ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ನ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ಮೇಲೆ ದಾಳಿಗಳು ನಡೆಯುತ್ತವೆ. ಬಿಜೆಪಿಗರು ಎಲ್ಲರೂ ಹರಿಶ್ಚಂದ್ರರು, ಕಾಂಗ್ರೆಸ್ನವರು ಮಾತ್ರ ಕಳ್ಳರು ಎನ್ನುವ ರೀತಿಯಾಗಿದೆ” ಎಂದು ಟೀಕಿಸಿದರು.
ಚುನಾವಣಾ ಆಯೋಗದ ಇತ್ತೀಚಿನ ಕಾರ್ಯವೈಖರಿಯನ್ನು ಪ್ರಜಾಪ್ರಭುತ್ವದ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದ ಹೆಬ್ಬಾರ್, ಚುನಾವಣಾ ಆಯೋಗದ ಅಧಿಕಾರಿಗಳ ಸಭೆ ಹಾಗೂ ಅದರ ನಿರ್ವಹಣೆಯ ಕುರಿತೂ ಆಕ್ಷೇಪ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿ: ಸಂಸದರಿಗೆ ಹೆಬ್ಬಾರ್ ತಿರುಗೇಟು
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿಯೂ ಸಂಸದರನ್ನು ಗುರಿಯಾಗಿಸಿಕೊಂಡು ಹೆಬ್ಬಾರ್ ವಾಗ್ದಾಳಿ ನಡೆಸಿದರು.
“ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಏಳು ಬಾರಿ ತಿರಸ್ಕರಿಸಿದೆ. ಈ ವಿಚಾರವನ್ನು ಕೇಂದ್ರದಲ್ಲಿ ಚರ್ಚಿಸಿ ಜಿಲ್ಲೆಯ ಜನರಿಗೆ ನ್ಯಾಯ ಕೊಡಿಸಬೇಕು. ಸಂಸದರು ಖಾಲಿ ಡಬ್ಬಿ ಹಾಗೂ ಚೊಂಬು ಹಿಡಿದು ಪಂಚಾಯಿತಿ ಮುಂದೆ ಕುಳಿತು ಪ್ರತಿಭಟನೆ ಮಾಡುವ ಮೂಲಕ ಇಲ್ಲಿನ ಜನರ ಶ್ರಮವನ್ನು ಹಾಳು ಮಾಡಬಾರದು. ದೆಹಲಿಗೆ ಹೋಗಿ ಸಂಸತ್ತಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಜಿಲ್ಲೆಯ ಜನರಿಗೆ ನ್ಯಾಯ ಕೊಡಿಸಲಿ” ಎಂದು ಹೇಳಿದರು.
ಮಲೆನಾಡಿನ ಜನರ ಜೀವನೋಪಾಯಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಜಾರಿಯ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸ್ಪಷ್ಟ ನಿಲುವು ಅಗತ್ಯವಿದೆ ಎಂಬ ಸಂದೇಶವನ್ನು ಹೆಬ್ಬಾರ್ ಅವರ ಹೇಳಿಕೆ ನೀಡಿದೆ.
ಕೇಂದ್ರ ಸರ್ಕಾರಿ ನೌಕರರ ಹೋರಾಟಕ್ಕೂ ಆಕ್ಷೇಪ
ದೇಶದಲ್ಲಿ ಬರ, ಅತಿವೃಷ್ಟಿ ಸೇರಿದಂತೆ ಹಲವು ಸಂಕಷ್ಟಗಳು ಎದುರಾಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿರುವುದಕ್ಕೂ ಶಿವರಾಮ ಹೆಬ್ಬಾರ್ ಆಕ್ಷೇಪ ವ್ಯಕ್ತಪಡಿಸಿದರು.
“ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುವುದು ಸರಿಯಲ್ಲ. ದೇವರು ರೈತರಿಗಿಂತ ನಿಮ್ಮನ್ನು ಸುಖದಲ್ಲಿ ಇಟ್ಟಿದ್ದಾನೆ. ಇಂತಹ ಸಂದರ್ಭದಲ್ಲಿ ನಿಮ್ಮ ಹೋರಾಟಕ್ಕೆ ಒಂದು ವರ್ಷ ವಿರಾಮ ನೀಡಿ. ನಾಡಿನ ರೈತರ ಬಗ್ಗೆ ಯೋಚಿಸಿ, ಮಾನವೀಯತೆಯಿಂದ ನಡೆದುಕೊಳ್ಳಿ. ದೇಶ ಹಾಗೂ ರಾಜ್ಯ ಸಂಕಷ್ಟದಲ್ಲಿದೆ” ಎಂದು ಅವರು ಮನವಿ ಮಾಡಿದರು.
ಬಿಜೆಪಿಯಿಂದ ಉಚ್ಚಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಆಯೋಜಿಸಿದ್ದ ಬಹಿರಂಗ ಪ್ರತಿಭಟನೆಯಲ್ಲಿ ಹೆಬ್ಬಾರ್ ಕಾಣಿಸಿಕೊಂಡಿರುವುದು ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಕಾಂಗ್ರೆಸ್ ವೇದಿಕೆಯಲ್ಲಿ ಬಿಜೆಪಿ ವಿರುದ್ಧ ಅವರು ನೀಡಿರುವ ನೇರ ಹೇಳಿಕೆಗಳು ಅವರ ಮುಂದಿನ ರಾಜಕೀಯ ನಡೆ ಬಗ್ಗೆಯೂ ಚರ್ಚೆಗೆ ಕಾರಣವಾಗಿವೆ.
