ಬೆಂಗಳೂರು: ರಾಹುಲ್ ಗಾಂಧಿಯವರು, ಭಾರತ್ ಜೋಡೊ ನ್ಯಾಯ ಯಾತ್ರೆ ಸೇರಿದಂತೆ ಹಲವು ಭಾಷಣಗಳಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಹೆಸರು ಪ್ರಸ್ತಾಪಿಸಿ ಟೀಕಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಭಾರತೀಯರಿಂದ ಸತತ ನಿರಾಕರಣೆಗೆ ಒಳಗಾಗಿ ಹತಾಶರಾಗಿರುವ ರಾಹುಲ್ ಗಾಂಧಿ ಅವರು ಇದೀಗ ದೇಶದ ಹೆಮ್ಮೆಯ ನಟಿ ಐಶ್ವರ್ಯಾ ರೈ ಅವರನ್ನು ಅವಮಾನಿಸುವ ಮತ್ತೊಂದು ದುಸ್ಸಾಹಸ ಮಾಡಿದ್ದಾರೆ. ಶೂನ್ಯ ಸಾಧನೆಯ ನಾಲ್ಕನೇ ತಲೆಮಾರಿನ ರಾಜವಂಶಸ್ಥ ಇದೀಗ ಐಶ್ವರ್ಯ ರೈ ಅವರನ್ನು ನಿಂದಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಗಾಂಧಿ ಕುಟುಂಬಕ್ಕೆ ಹೋಲಿಸಿದರೆ ಐಶ್ವರ್ಯ ರೈ ದೇಶಕ್ಕೆ ಹೆಚ್ಚಿನ ಕೀರ್ತಿ ತಂದಿದ್ದಾರೆ ಎನ್ನುವುದು ನೆನಪಿರಲಿ ಎಂದು ರಾಜ್ಯ ಬಿಜೆಪಿ ಎಕ್ಸ್ನಲ್ಲಿ ಪೋಸ್ಟ್ ಹಾಕಿದೆ.ʼ
ಅಷ್ಟೇ ಅಲ್ಲದೇ ‘ಸಿದ್ದರಾಮಯ್ಯನವರೇ… ನಿಮ್ಮ ಬಾಸ್ ಕನ್ನಡಿಗರೊಬ್ಬರನ್ನು ಅಮಾನಿಸುವುದನ್ನು ಮುಂದುವರಿಸಿದರೆ, ನಿಮ್ಮ ಕನ್ನಡಾಭಿಮಾನವನ್ನು ಎತ್ತಿ ಹಿಡಿಯುತ್ತೀರಾ? ಅಥವಾ ಮುಖ್ಯಮಂತ್ರಿ ಕುರ್ಚಿಯನ್ನು ಕಾಪಾಡಲು ಮೌನವಾಗಿರುತ್ತೀರಾ?’ ಎಂದು ಸಿದ್ದರಾಮಯ್ಯ ಅವರನ್ನು ಕಿಚಾಯಿಸಿದೆ.
ನಟಿ ಐಶ್ವರ್ಯ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ತಮ್ಮನ್ನು ತಾವೇ ಅಧೋಗತಿಗೆ ದೂಡಿಕೊಂಡಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಯಾತ್ರೆ ವೇಳೆ ರಾಹುಲ್ ಹೇಳಿದ್ದೇನು?
ಉತ್ತರ ಪ್ರದೇಶದಲ್ಲಿ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ವೇಳೆ ರಾಮಮಂದಿರ ಉದ್ಘಾಟನೆ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಐಶ್ವರ್ಯ ರೈ ಅವರ ಹೆಸರನ್ನು ಪ್ರಸ್ಥಾಪಿಸಿದ್ದರು. ‘ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಐಶ್ವರ್ಯ ರೈನಂತಹ ಸೆಲೆಬ್ರೆಟಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಭಾಗವಹಿಸಿದ್ದರು. ಆದರೆ ಶೇ.73ರಷ್ಟು ಜನಸಂಖ್ಯೆ ಹೊಂದಿರುವ ದಲಿತ ಬುಡಕಟ್ಟು ಸಮುದಾಯಗಳ ಯಾರೊಬ್ಬರು ಅಲ್ಲಿ ಇರಲಿಲ್ಲ. ಮೋದಿ ಎಂಥವರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ ಎಂದಿದ್ದರು.
ರಾಮಮಂದಿರ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಮಗ ಅಭಿಷೇಕ್ ಭಾಗವಹಿಸಿದ್ದು, ಐಶ್ವರ್ಯಾ ರೈ ಭಾಗವಹಿಸಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು.