ಕೆಲವೇ ಜನರು ಪ್ರಯಾಣಿಕರ ಜೀವ ರಕ್ಷಣೆಗೆ ಅಷ್ಟೊಂದು ಅರ್ಹತೆ, ವ್ಯಕ್ತಿತ್ವ, ಸಾಮರ್ಥ್ಯ, ಧೈರ್ಯ, ತ್ಯಾಗ, ತರಬೇತಿ ಬೇಕೆಂದಾದರೆ, ಕೋಟ್ಯಂತರ ಜನರ ಜೀವ, ಆಸ್ತಿ, ಹಕ್ಕುಗಳು, ಸ್ವಾತಂತ್ರ್ಯ ಇತ್ಯಾದಿಗಳ ರಕ್ಷಣೆಯ ಹೊಣೆ ಹೊತ್ತಿರುವ ನಾಯಕರಿಗೆ ಇವೆಲ್ಲವೂ ಇರಬೇಡವೇ ಎಂದು ನಾನು ಕೇಳುತ್ತೇನೆ! ದೇಶವೂ ಒಂದು ಬೃಹತ್ ವಿಮಾನದಂತೆಯೇ ಅಲ್ಲವೆ?
ಗೂಡುದೀಪದಂತಹ ಮೊದಲ ವಿಮಾನದ ಬಳಿಕ ವೈಮಾನಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಆವಿಷ್ಕಾರಗಳಾಗಿ, ಅತ್ಯಾಧುನಿಕ ತಂತ್ರಜ್ಞಾನದ ವಿಮಾನಗಳು ಬಂದಿವೆ. ಮೊದಲಿಗೆ ಅಟ್ಲಾಂಟಿಕ್ ಸಾಗರ ದಾಟಿ ನ್ಯೂಯಾರ್ಕ್‌ನಿಂದ ಪ್ಯಾರಿಸ್‌ಗೆ ಹಾರುವ ವಿಮಾನ ತಯಾರಿಸಿ, ಹಾರುವ ಸಾಹಸದಲ್ಲೇ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ (ಈ ಕುರಿತು ಮುಂದೊಮ್ಮೆ ಬರೆಯುವೆ). ನಂತರ ಎರಡು ಮಹಾಯುದ್ಧಗಳು ಈ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡಿ, ಅದು ಇನ್ನಿಲ್ಲದಂತೆ ಬೆಳೆಯಿತು. ಇಂದು ಸಾವಿರಾರು ಜನರನ್ನು ಕೊಲ್ಲಬಲ್ಲ, ಶಬ್ದದ ವೇಗಕ್ಕಿಂತ ನಾಲ್ಕು ಪಟ್ಟು (Mach 4) ವೇಗದಲ್ಲಿ ಹಾರಬಲ್ಲ ಸಮರ ವಿಮಾನಗಳೂ, ಭಾರೀ ಗಾತ್ರದ ಸಾರಿಗೆ ವಿಮಾನಗಳೂ, ನಿತ್ಯವೂ ಲಕ್ಷಾಂತರ ಜನರನ್ನು ಜಗತ್ತಿನ ಮೂಲೆ ಮೂಲೆಗೆ ಸಾಗಿಸುವ ಪ್ರಯಾಣಿಕ ವಿಮಾನಗಳೂ, ಶ್ರೀಮಂತರಿಗಾಗಿ, ಶೋಕಿಗಾಗಿ ಹಲವು ರೀತಿಯ ವಿಮಾನಗಳೂ ಬಂದಿವೆ. ವಿಮಾನಗಳು ಸುಧಾರಿಸಿದರೂ, ಹಲವಾರು ದೇಶಗಳು ಬಡತನದಲ್ಲೇ ಕೊಳೆಯುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನಗಳು ಅವುಗಳನ್ನು ಮುಟ್ಟಿಲ್ಲ. ಹಲವು ದೇಶಗಳೆಂಬ ವಿಮಾನಗಳ ಪೈಲಟ್ ಸೀಟುಗಳಲ್ಲಿ ಕುಳಿತವರೂ ಸರಿಯಿಲ್ಲ!
ಅದಿರಲಿ! ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನಗಳು ಬಂದರೂ, ಎಷ್ಟೇ ಜಾಗರೂಕತೆ ವಹಿಸಿದರೂ, ಅಪಘಾತಗಳು ನಡೆಯುತ್ತಲೇ ಇವೆ.
ಮೊದಲಾಗಿ ನಾವು ನೂರಾರು ವಿಮಾನ ಅಪಘಾತಗಳ ಪೈಕಿ ಕೆಲವೇ ಕೆಲವು ವಿಮಾನ ಅಪಘಾತಗಳನ್ನು ಉದಾಹರಣೆಗಾಗಿ ನೋಡೋಣ.
- ಮಲೇಷಿಯಾ ಏರ್‌ಲೈನ್ಸ್ ಫ್ಲೈಟ್ 370 ಬೋಯಿಂಗ್
777-200 ಆರ್ ಅತ್ಯಾಧುನಿಕ ವಿಮಾನವು ಮಾರ್ಚ್ 8, 2014ರಲ್ಲಿ ಕೌಲಾಲಂಪುರದಿಂದ ಬೀಜಿಂಗ್‌ಗೆ ಹೋಗುವಾಗ ರಾಡಾರ್‌ನಿಂದ ಮರೆಯಾಗಿ ನಿಗೂಢ ಕಾರಣಗಳಿಂದ ನಾಪತ್ತೆಯಾಗಿತ್ತು. ಈ ವಿಮಾನದಲ್ಲಿ 239 ಮಂದಿ ಇದ್ದರು. - ಈಜಿಪ್ಟ್ ಏರ್ ಫ್ಲೈಟ್
990 ಬೋಯಿಂಗ್ 767-366ಇಆರ್ ವಿಮಾನವು ಅಕ್ಟೋಬರ್ 31, 1991ರಂದು ಅಟ್ಲಾಂಟಿಕ್ ಸಾಗರಕ್ಕೆ ಬಿದ್ದು 217 ಮಂದಿ ಮೃತಪಟ್ಟಿದ್ದರು. - ಏರ್ ಇಂಡಿಯಾ ಫ್ಲೈಟ್ 855 ಬೋಯಿಂಗ್ 747-237ಬಿ ವಿಮಾನವು ಜನವರಿ 1, 1978ರಲ್ಲಿ ಅರಬೀ ಸಮುದ್ದಕ್ಕೆ ಬಿದ್ದು 213 ಮಂದಿ ಪ್ರಾಣ ಕಳೆದುಕೊಂಡಿದ್ದರು.
- ಟ್ಯುನೀಷಿಯಾ ಬಳಿಯ ಟೆನೆರೈಫ್ ವಿಮಾನ ನಿಲ್ದಾಣದಲ್ಲಿ ಮಂಜು ಕವಿದ ವಾತಾವರಣದಲ್ಲಿ ಟೇಕಾಫ್ ಮಾಡುತ್ತಿದ್ದ ಬೋಯಿಂಗ್ 747 ವಿಮಾನವು ರನ್‌ವೇಯಲ್ಲಿ ಪ್ರಮಾದದಿಂದ ಅಡ್ಡಕ್ಕೆ ಚಲಿಸುತ್ತಿದ್ದ ಇನ್ನೊಂದು ಬೋಯಿಂಗ್ 747 ವಿಮಾನಕ್ಕೆ ಡಿಕ್ಕಿ ಹೊಡೆದು 583 ಮಂದಿ ಮೃತಪಟ್ಟಿದ್ದರು. ಇದು ವಾಣಿಜ್ಯ ವಿಮಾನಯಾನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ದುರಂತ ಎನಿಸಿಕೊಂಡಿದೆ.
ಇವು ಕೆಲವು ಉದಾಹರಣೆಗಳು ಮಾತ್ರವಷ್ಟೇ. ಒಂದು ವಿಮಾನವು ಅಪಘಾತಕ್ಕೆ ಒಳಗಾಗುವುದಕ್ಕೆ ಹಲವಾರು ಕಾರಣಗಳು ಇರುತ್ತವೆ. ಕೆಲವು ನೈಸರ್ಗಿಕ ಮತ್ತು ಕೆಲವು ಮಾನವ ನಿರ್ಮಿತ.
ಇವುಗಳಲ್ಲಿ ಭಯೋತ್ಪಾದಕರಿಂದ ಅಪಹರಣವೂ ಸೇರಿದೆ. ಇಸ್ರೇಲಿಗಳೇ ಹೆಚ್ಚಾಗಿ ಇದ್ದು, ಟೆಲ್ ಅವೀವ್‌ಗೆ ಬರುತ್ತಿದ್ದ ಏರ್ ಫ್ರಾನ್ಸ್ ವಿಮಾನ ಒಂದನ್ನು ಉಗ್ರರು ಅಪಹರಿಸಿ ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣಕ್ಕೆ ಒಯ್ದದ್ದು, ಇಸ್ರೇಲಿ ಕಮಾಂಡೋಗಳು ಸಾವಿರಾರು ಮೈಲಿ ದೂರಕ್ಕೆ ಪ್ರಯಾಣಿಸಿ ಒತ್ತೆಯಾಳುಗಳ ಬಿಡುಗಡೆ ಮಾಡಿದ್ದು, ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಉಗ್ರರು ನೇಪಾಳದಲ್ಲಿ ಅಪಹರಿಸಿ ಕಂದಹಾರ್‌ಗೆ ಒಯ್ದದ್ದು, ಉಗ್ರರು ಬೇರೆ ಬೇರೆ ಕಡೆಗಳಲ್ಲಿ ಮೂರು ವಿಮಾನಗಳನ್ನು ಅಪಹರಿಸಿ ಎರಡನ್ನು ವರ್ಲ್ಡ್ ಟ್ರೇಡ್ ಸೆಂಟರಿಗೆ ಅಪ್ಪಳಿಸಿ ಸಾವಿರಾರು ಜನರು ಸಾವಿಗೀಡಾದ ಘಟನೆಗಳು ತಕ್ಷಣದಲ್ಲಿ ನೆನಪಿಗೆ ಬರುತ್ತವೆ.
ಅದಲ್ಲದೆ, ಉಗ್ರಗಾಮಿಗಳು ಬಾಂಬ್ ಇರಿಸಿ ವಿಮಾನಗಳನ್ನು ಸ್ಫೋಟಿಸಿದ ಘಟನೆಗಳೂ ಬಹಳಷ್ಟಿವೆ. ಅತ್ಯಂತ ದೊಡ್ಡ ಉದಾಹರಣೆಯೆಂದರೆ, ಕೆನಡಾದ ಮಾಂಟ್ರಿಯಲ್‌ನಿಂದ ಲಂಡನ್ ಮೂಲಕ ಹೊಸದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ಫ್ಲೈಟ್ 182 ಬೋಯಿಂಗ್ 747- 237ಬಿ ವಿಮಾನವು ಜೂನ್ 23, 1984ರಂದು ಅಯರ್ಲ್ಯಾಂಡ್ ಕರಾವಳಿಯಲ್ಲಿ 31,000 ಅಡಿ ಎತ್ತರದಲ್ಲಿ ಸ್ಫೋಟಗೊಂಡು ಅಟ್ಲಾಂಟಿಕ್ ಸಾಗರಕ್ಕೆ ಉರುಳಿತ್ತು. ಖಾಲಿಸ್ತಾನಿ ಉಗ್ರ ಸಂಘಟನೆ ಬಬ್ಬರ್ ಖಾಲ್ಸಾ ಈ ವಿಮಾನದಲ್ಲಿ ಬಾಂಬ್ ಇರಿಸಿತ್ತು. ಪರಿಣಾಮವಾಗಿ 268 ಕೆನಡಿಯನ್, 27 ಬ್ರಿಟಿಷ್, 24 ಭಾರತೀಯರೂ ಸೇರಿದಂತೆ 329 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಈ ಘಟನೆ ಜಾಗತಿಕ ತಲ್ಲಣ ಉಂಟುಮಾಡಿ, ವೈಮಾನಿಕ ಸುರಕ್ಷೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಲಾಯಿತು.
ಇದಲ್ಲದೇ ಕ್ಷುಲ್ಲಕ ಎನಿಸುವ ಕಾರಣಗಳಿಂದಾಗಿ ನೂರಾರು ವಿಮಾನಗಳು ಅಪಘಾತಕ್ಕೆ ಒಳಗಾಗಿವೆ. ಕೆಲವನ್ನಷ್ಟೇ ಇಲ್ಲಿ ನೋಡೋಣ.
- ಈಸ್ಟರ್ನ್ ಏರ್ಲೈನ್ಸ್ ಫ್ಲೈಟ್ 401 ಲಾಕ್‌ಹೀಡ್ ಟ್ರೈಸ್ಟಾರ್ ವಿಮಾನವು ಡಿಸೆಂಬರ್ 29, 1972ರಲ್ಲಿ ಎವರ್‌ಗ್ಲೇಡ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಲ್ಯಾಂಡಿಂಗ್ ಗಾಲಿಗಳು ಕೆಳಗಿಳಿದಿವೆ ಎಂದು ಸೂಚಿಸುವ ಇಂಡಿಕೇಟರ್ ಲೈಟಿನ ದೋಷದಿಂದ ರನ್‌ವೇಗೆ ಅಪ್ಪಳಿಸಿ 101 ಜನರು ಮೃತಪಟ್ಟಿದ್ದರು. ಗಾಲಿಗಳು ಕೆಳಗೆ ಇಳಿಯದಿದ್ದರೂ, ಇಳಿದಿವೆ ಎಂದು ಈ ಇಂಡಿಕೇಟರ್ ತೋರಿಸಿದ್ದುದರಿಂದ ಗಾಲಿಗಳಿಲ್ಲದೇ ಈ ವಿಮಾನ ಹೊಟ್ಟೆಯಲ್ಲೇ ನೆಲಕ್ಕಿಳಿದು ನುಚ್ಚುನೂರಾಗಿತ್ತು.
- ವಿಮಾನದಲ್ಲಿ ಗಾಳಿಯ ವೇಗದ ಆಧಾರದಲ್ಲಿ ವಿಮಾನದ ವೇಗ ತಿಳಿಸುವ ಸೆನ್ಸರ್‌ಗಳು ಎರಡೂ ಪಕ್ಕದಲ್ಲಿ ಇರುತ್ತವೆ. ಇವುಗಳ ಮೇಲೆ ತೀರಾ ಚಳಿಯಿದ್ದಾಗ ಐಸ್ ಕುಳಿತು ಮುಚ್ಚಿಹೋಗಿ ಅಪಘಾತಗಳು ಸಂಭವಿಸುತ್ತವೆ. ಒಂದು ಉದಾಹರಣೆ ಎಂದರೆ, ಬ್ರೆಜಿಲ್‌ನ ರಿಯೋ ಡಿ ಜನೈರೋದಿಂದ ಪ್ಯಾರಿಸ್‌ಗೆ ಹೋಗುತ್ತಿದ್ದ ಏರ್ ಫ್ರಾನ್ಸ್ ಫ್ಲೈಟ್ 447 ವಿಮಾನವು ಜೂನ್ 1, 2009ರಂದು ಅಟ್ಲಾಂಟಿಕ್ ಸಾಗರಕ್ಕೆ ಧುಮುಕಿ 228 ಮಂದಿ ಮೃತಪಟ್ಟಿದ್ದರು.
- ಅಕ್ಟೋಬರ್ 4, 2004ರಂದು ಎಲ್ ಅಲ್ ಸಂಸ್ಥೆಯ ಬೋಯಿಂಗ್ 747 ವಿಮಾನ ಉರುಳಿ 39 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಕಾರಣ: ಒಂದೇ ಒಂದು ಬಹುಮುಖ್ಯ ಬೋಲ್ಟ್ ಸವೆದು ಮುರಿದದ್ದು! ಇದು ನಿರ್ವಹಣಾ ಸಿಬ್ಬಂದಿಯ ಗಮನಕ್ಕೆ ಬಂದಿರಲಿಲ್ಲ.
- ಸಂಪೂರ್ಣವಾಗಿ ಪೈಲಟ್ ತಪ್ಪಿನಿಂದ ಹಲವು ವಿಮಾನ ಅಪಘಾತಗಳು ನಡೆದಿವೆ. ಒಂದು ಉದಾಹರಣೆಯೆಂದರೆ, ಟ್ಯುನೀಷಿಯಾದಿಂದ ಕೆನ್ಯಾದ ನೈರೋಬಿಗೆ ತೆರಳುತ್ತಿದ ಕೆನ್ಯಾ ಏರ್ ಬೋಯಿಂಗ್ 747 ವಿಮಾನ ನಡುವೆ ಕ್ಯಾಮರೂನ್‌ನಲ್ಲಿ ಇಳಿದು ಮತ್ತೆ ಹಾರುವಾಗ ಮುಂದೆ ಭಯಾನಕ ಚಂಡಮಾರುತವಿತ್ತು. ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಅನುಮತಿ ಪಡೆಯದೇ ಅತಿವಿಶ್ವಾಸದಿಂದ ಹಾರಿ, ಮುಂದೆ ಭಾರಿ ಚಂಡಮಾರುತಕ್ಕೆ ಸಿಲುಕಿ ಅಟೋ ಪೈಲಟ್ ಒತ್ತಿದರೂ, ಕಡ್ಡಾಯವಾಗಿ ಒತ್ತಬೇಕಾಗಿರುವ ಅಟೋ ಟಾರ್ಟಲ್ ಬಟನನ್ನು ಗಡಿಬಿಡಿಯಲ್ಲಿ ಒತ್ತದಿರುವುದರಿಂದ ಅಟೋ ಪೈಲಟ್ ಕೆಲಸಮಾಡದೇ ಸ್ವತಃ ಪೈಲಟ್‌ಗೆ ಅದೇ ಕಾರಣದಿಂದ ವಿಮಾನವನ್ನು ನಿಯಂತ್ರಿಸಲು ಆಗದೇ, ಸಂಪೂರ್ಣವಾಗಿ ಹೊಟ್ಟೆ ಮೇಲಾಗಿ ತಿರುಗಿ, ನೇರವಾಗಿ ನೆಲದತ್ತ ಧುಮುಕಿ ಅಪ್ಪಳಿಸಿತ್ತು. ಅನನುಭವಿ ಫಸ್ಟ್ ಆಫೀಸರ್ (ಕೋ ಪೈಲಟ್) ಈ ಅಹಂಕಾರಿಗೆ ಹೆದರುತ್ತಿದ್ದುದರಿಂದ ಏನನ್ನೂ ಮಾಡದೇ ಬಾಯಿಮುಚ್ಚಿ ಕುಳಿತಿದ್ದ! (ಕೆಲವು ದೇಶಗಳಲ್ಲೂ ಏನೂ ತಿಳಿಯದ ಅಹಂಕಾರಿ ಪೈಲಟ್‌ಗಳು ದೇಶ ಚಲಾಯಿಸುವುದರಿಂದ ಮತ್ತು ಅವರ ಸುತ್ತ ಇರುವವರೂ ಭಯದಿಂದ ತೆಪ್ಪಗೆ ಕುಳಿತು, ಪೈಲಟ್ ಮಾಡುತ್ತಿರುವುದೇ ಸರಿ ಎಂದು ನಂಬಿರುವುದರಿಂದ ಹಲವು ದೇಶಗಳೇ ವಿನಾಶಕ್ಕೆ ಈಡಾಗಿವೆ, ಈಡಾಗಲಿವೆ. ಮೈನೇ ನಾಮ್ ನಹೀಂ ಲಿಯಾ!)
- ಇಂಧನ ಮುಗಿದೂ ವಿಮಾನ ಅಪಘಾತಗಳು ನಡೆದಿವೆ. ವಿಮಾನ ಒಂದಕ್ಕೆ ಟನ್ನುಗಳ ಲೆಕ್ಕದಲ್ಲಿ ಇಂಧನ ತುಂಬಿಸಲಾಗುತ್ತದೆ. ಕೆಟ್ಟ ಹವಾಮಾನ ಸಂದರ್ಭದಲ್ಲಿ ಹೆಚ್ಚು ಕಾಲ ಆಗಸದಲ್ಲಿ ಇರಲು ಸಾಧ್ಯವಾಗುವಂತೆ ಹೆಚ್ಚುವರಿ ಇಂಧನ ಹಾಕಲಾಗುತ್ತದೆ. ಜುಲೈ 23, 1983ರಲ್ಲಿ ಏರ್ ಕೆನಡಾ ಫ್ಲೈಟ್ 143 ವಿಮಾನದಲ್ಲಿ ಇಂಧನ ಮುಗಿದಿತ್ತು. ಆದರೆ, ಜಾಗ್ರತ ಪೈಲಟ್‌ಗಳು ಚಾಕಚಕ್ಯತೆಯಿಂದ ವಿಮಾನವನ್ನು ಹತ್ತಿರದ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಿದುದರಿಂದ ಎಲ್ಲರೂ ಪಾರಾಗಿದ್ದರು. ಆಗ ಕಿ.ಗ್ರಾಂ. ಮತ್ತು ಪೌಂಡ್ ಲೆಕ್ಕಾಚಾರಗಳೆರಡೂ ಬೇರೆಬೇರೆ ದೇಶಗಳಲ್ಲಿ ನಡೆಯುತ್ತಿದ್ದವು. ಆದರೆ, ವಿಮಾನಗಳಿಗೆ 1,000 ಕೆ.ಜಿ.ಗಳ ಲೆಕ್ಕದಲ್ಲಿ ಇಂಧನ ತುಂಬಿಸಲಾಗುತ್ತದೆ. ಪೈಲಟ್ ಹೇಳಿದ ಕೆ.ಜಿ. ಲೆಕ್ಕದ ಇಂಧನದ ಪ್ರಮಾಣವನ್ನು- ಇಂಧನ ತುಂಬಿಸುವ ಲೋಡಿಂಗ್ ಮಾಸ್ಟರ್- ಪೌಂಡುಗಳಲ್ಲಿ ಲೆಕ್ಕ ಹಾಕಿ, ಬಹುತೇಕ ಅರ್ಧದಷ್ಟು ಇಂಧನ ಮಾತ್ರ ತುಂಬಿಸಿದ್ದ!
ಈ ರೀತಿಯಾಗಿ ವಿಮಾನ ಅಪಘಾತಗಳಿಗೆ ಏರ್ ಟ್ರಾಫಿಕ್ ಕಂಟ್ರೋಲರ್ ತಪ್ಪು, ನಿರ್ವಹಣಾ ಸಿಬ್ಬಂದಿಯ ತಪ್ಪು, ಇಂಜಿನ್ ಮತ್ತಿತರ ತಾಂತ್ರಿಕ ವೈಫಲ್ಯ, ಪಾನಮತ್ತ ಮತ್ತು ದಣಿದ ಪೈಲಟ್‌ಗಳು, ಚಿತ್ರವಿಚಿತ್ರವಾದ ಹವಮಾನ ವೈಪರೀತ್ಯಗಳು
… ಹೀಗೆ ನೂರಾರು ಕಾರಣಗಳಿವೆ. ಅದಕ್ಕಾಗಿಯೇ ಪೈಲಟ್‌ಗಳು, ಏರ್ ಟ್ರಾಫಿಕ್ ಕಂಟ್ರೋಲರ್‌ಗಳು, ನಿರ್ವಹಣಾ, ಕ್ಯಾಬಿನ್ ಮತ್ತಿತರ ಸಿಬ್ಬಂದಿಗಳು ಎಲ್ಲರನ್ನೂ ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತದೆ. ಅವರಿಗೆ ತೀವ್ರತರ ತರಬೇತಿಯನ್ನು ನಿಯಮಿತವಾಗಿ ಮತ್ತೆಮತ್ತೆ ನೀಡಲಾಗುತ್ತದೆ. ಪ್ರತಿಯೊಂದಕ್ಕೂ ಮತ್ತು ಪ್ರತೀ ತುರ್ತುಸಂದರ್ಭಕ್ಕೂ ಚೆಕ್ ಲಿಸ್ಟ್‌ಗಳಿವೆ. ಅವುಗಳನ್ನು ಪೂರೈಸದೇ ಯದ್ವಾತದ್ವಾ ಏನನ್ನೂ ಮಾಡುವಂತಿಲ್ಲ. ಕಠಿಣ ಶಿಸ್ತುಕ್ರಮಗಳಿವೆ. ಅವಘಡಗಳಾದರೆ ವರ್ಷಗಳ ಕಾಲವಾದರೂ ತನಿಖೆ ನಡೆಸದೇ, ತಪ್ಪಿತಸ್ಥರನ್ನು, ದೋಷಗಳನ್ನು ಕಂಡುಹಿಡಿಯದೇ ಬಿಡುವುದಿಲ್ಲ.
ಅದೆಲ್ಲಾ ಸರಿ, ಈ ವಿಮಾನಗಳ ಪೈಲಟ್‌ಗಳು ಮತ್ತು ದೇಶವಾಳುವ ನಾಯಕರ ಹೋಲಿಕೆ ಏಕೆ ಮಾಡಿದ್ದೇನೆ ಎಂದು ನೀವು ಕೇಳಬಹುದು. ಸರಳ ಉತ್ತರ ಎಂದರೆ: ಕೆಲವೇ ಜನರು ಪ್ರಯಾಣಿಕರ ಜೀವ ರಕ್ಷಣೆಗೆ ಅಷ್ಟೊಂದು ಅರ್ಹತೆ, ವ್ಯಕ್ತಿತ್ವ, ಸಾಮರ್ಥ್ಯ, ಧೈರ್ಯ, ತ್ಯಾಗ, ತರಬೇತಿ ಬೇಕೆಂದಾದರೆ, ಕೋಟ್ಯಂತರ ಜನರ ಜೀವ, ಆಸ್ತಿ, ಹಕ್ಕುಗಳು, ಸ್ವಾತಂತ್ರ್ಯ ಇತ್ಯಾದಿಗಳ ರಕ್ಷಣೆಯ ಹೊಣೆ ಹೊತ್ತಿರುವ ನಾಯಕರಿಗೆ ಇವೆಲ್ಲವೂ ಇರಬೇಡವೇ ಎಂದು ನಾನು ಕೇಳುತ್ತೇನೆ! ದೇಶವೂ ಒಂದು ಬೃಹತ್ ವಿಮಾನದಂತೆಯೇ ಅಲ್ಲವೆ? ಇವುಗಳ ಕುರಿತು ಸ್ವಲ್ಪ ವಿವರವಾಗಿ ಮುಂದೆ ನೋಡೋಣ.