ಬೆಂಗಳೂರು : ಸಾಫ್ಟ್ ವೇರ್ ( Software ) ಉದ್ಯಮದ ದೈತ್ಯ ಕಂಪನಿ ಇನ್ಫೋಸಿಸ್ (Infosys) ವಿರುದ್ಧ ಅಕ್ರಮವಾಗಿ ಭೂಮಿ ಮಾರಾಟದ ಆರೋಪ ಹಲವು ದಿನಗಳಿಂದಲೇ ಕೇಳಿಬಂದಿದ್ದು,ಇದೀಗ ಇನ್ಫೋಸಿಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಇ-ಸ್ವತ್ತಿನಲ್ಲಿ ಆಸ್ತಿಗಳ ದಾಖಲೆ ಲಭ್ಯವಿಲ್ಲದಿದ್ದರೂ ನ್ಯಾಯಾಲಯ ಆದೇಶದ ಸುಳ್ಳು ಕಾರಣ ನೀಡಿ ಕ್ರಯಪತ್ರಗಳನ್ನು ವಂಚನೆಗೈದು ನೋಂದಣಿ ಮಾಡಲಾಗಿತ್ತು. ಬರೋಬ್ಬರಿ ₹250 ಕೋಟಿ ಮೌಲ್ಯದ 53.5 ಎಕರೆ ಜಾಗವನ್ನು 40 ಸೇಲ್‌ಡೀಡ್‌ಗಳ ಮೂಲಕ ಪೂರ್ವ ಬ್ಲ್ಯೂ ಹೋಮ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಂದಣಿ ಮಾಡಿಕೊಡಲಾಗಿತ್ತು. ಇದೀಗ ತಮ್ಮ ಮೇಲೆ ಬಂದಿರುವ ಆರೋಪದ ಕುರಿತು ಇನ್ಫೋಸಿಸ್ ಪ್ರತಿಕ್ರಿಯೆ ನೀಡಿದ್ದು, ಅತ್ತಿಬೆಲೆಯಲ್ಲಿರುವ ಆಸ್ತಿಯನ್ನು ಎಲ್ಲಾ ನಿಯಮಗಳಿಗೆ ಅನುಸಾರವಾಗಿ ವ್ಯವಹಾರ ಮಾಡಿಸಲಾಗಿದೆ. ನಿಯಮಗಳ ಪ್ರಕಾರವಾಗಿ ಭೂಮಿಯನ್ನು ಮಾರಾಟ ಮಾಡಲಾಗಿದೆ. ಇನ್ನು,ಮಾರಾಟ ಮಾಡಲಾಗಿರುವ ಭೂಮಿ ಸರ್ಕಾರದಿಂದ ಹಂಚಿಕೆಯಾಗಿಲ್ಲ ಎಂದು ಇನ್ಫೋಸಿಸ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇನ್ನು, ಇನ್ಫೋಸಿಸ್ ನಿಂದ ಭೂಮಿ ಖರೀದಿಸಿರುವ ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. ನಮ್ಮ ಕಂಪನಿಯು ಶಿಸ್ತುಬದ್ಧ ವಿಧಾನ ಅನುಸರಿಸುವ ಮೂಲಕ ಇನ್ಫೋಸಿಸ್ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ ಸ್ಪಷ್ಟನೆ ನೀಡಿದ್ದಾರೆ.
