ಗಣಿನಾಡು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯ ವಿವಾದ ಮತ್ತೆ ಭುಗಿಲೆದ್ದಿದೆ. ಆಂಧ್ರಪ್ರದೇಶದ ಗಣಿಗಾರಿಕೆ ಪರ್ಮಿಟ್ ನೆಪದಲ್ಲಿ ಕರ್ನಾಟಕದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಇದೀಗ ಅಧಿಕೃತವಾಗಿ ಸಾಬೀತಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಹೈಟೆಕ್ ಡ್ರೋನ್ ಸರ್ವೇಯಲ್ಲಿ ಈ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಈ ವರದಿಯಿಂದ ಗಂಗಾವತಿ ಶಾಸಕ ಹಾಗೂ ಗಣಿ ಉದ್ಯಮಿ ಜನಾರ್ದನ ರೆಡ್ಡಿಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ನಿವೃತ್ತ ನ್ಯಾಯಾಧೀಶ ಸುಧಾಂಶ ಧುಲಿಯಾ ನೇತೃತ್ವದ ಅಧಿಕಾರಿಗಳ ತಂಡ ಕಳೆದ ತಿಂಗಳು ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮಕ್ಕೆ ತೆರಳಿ ಡ್ರೋನ್ ಮೂಲಕ ಸಮಗ್ರ ಸರ್ವೇ ನಡೆಸಿತ್ತು.
ಸರ್ವೇ ವೇಳೆ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್, ಸಿದ್ದಾಪುರದಲ್ಲಿನ ಬಿಐಒಸಿ ಕಂಪನಿಯ 27.12 ಹೆಕ್ಟೇರ್, ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ ಹೆಸರಿನ 20.24 ಹೆಕ್ಟೇರ್, ಒಬಳಾಪುರಂ ಗ್ರಾಮದ ಒಎಂಸಿ ಕಂಪನಿಯ 25.98 ಹೆಕ್ಟೇರ್ ಹಾಗೂ ಒಎಂಪಿ–2 ಹೆಸರಿನ 39.50 ಹೆಕ್ಟೇರ್ ಪ್ರದೇಶಗಳ ಗಣಿಗುತ್ತಿಗೆ ಮತ್ತು ಗಡಿ ರೇಖೆಗಳ ಪರಿಶೀಲನೆ ನಡೆಸಲಾಗಿದೆ.
ಈ ಪೈಕಿ ಜನಾರ್ದನ ರೆಡ್ಡಿ ಒಡೆತನದ ಒಎಂಪಿ–2 ಮತ್ತು ಅಂತರಗಂಗಮ್ಮ ಹೆಸರಿನ ಗಣಿಗುತ್ತಿಗೆ ಪ್ರದೇಶಗಳಲ್ಲಿ ಗಡಿ ಹೊಂದಾಣಿಕೆ ಇಲ್ಲದೆ ಕರ್ನಾಟಕ ರಾಜ್ಯದ ಭೂಮಿಗೆ ಅತಿಕ್ರಮಣ ನಡೆದಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಕರ್ನಾಟಕ–ಆಂಧ್ರಪ್ರದೇಶ ನಡುವಿನ ಅಂತಾರಾಜ್ಯ ಗಡಿ ನಾಶಪಡಿಸಿ ಅಕ್ರಮ ಗಣಿಗಾರಿಕೆ ನಡೆಸಲಾಗಿದೆ ಎಂಬ ಆರೋಪಗಳು ಈ ಮೂಲಕ ಮತ್ತೊಮ್ಮೆ ದೃಢಪಟ್ಟಿವೆ.
ಹಿಂದೆಯೇ ವಿಠಲಾಪುರ, ತುಮಟಿ ಸೇರಿದಂತೆ ಮೀಸಲು ಅರಣ್ಯ ಪ್ರದೇಶಗಳಲ್ಲಿ ಸುಮಾರು 28.90 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಹೊರತೆಗೆದು ಸಾಗಣೆ ಮಾಡಿದ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಅಮಿಕಸ್ ಕ್ಯೂರಿ ಹಾಗೂ ಆಂಧ್ರಪ್ರದೇಶದ ಸಮ್ಮಿರೆಡ್ಡಿ ಸಮಿತಿ ವರದಿ ಆಧಾರವಾಗಿ ಸುಪ್ರೀಂಕೋರ್ಟ್ ಈ ಹೊಸ ಸಮಿತಿಯನ್ನು ರಚಿಸಿತ್ತು.
ಇದೀಗ ನಿವೃತ್ತ ನ್ಯಾಯಾಧೀಶ ಧುಲಿಯಾ ಸಮಿತಿ ವರದಿಯಲ್ಲಿಯೂ ಅತಿಕ್ರಮಣ ನಡೆದಿದೆ ಎಂಬುದು ಸ್ಪಷ್ಟಗೊಂಡಿದ್ದು, ರೆಡ್ಡಿಗೆ ಮತ್ತಷ್ಟು ಕಾನೂನು ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಸಮಿತಿ ವರದಿಗೆ ಸಂಬಂಧಿಸಿದಂತೆ ಗಣಿಗುತ್ತಿಗೆ ಮಾಲೀಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, 2026ರ ಜನವರಿ 5ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ. ನಿಗದಿತ ಅವಧಿಯಲ್ಲಿ ದಾಖಲೆ ಸಲ್ಲಿಸದಿದ್ದರೆ, ಅಂತಿಮ ವರದಿ ಆಧಾರವಾಗಿ ಮುಂದಿನ ಮೂರು ತಿಂಗಳೊಳಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಇನ್ನೊಂದೆಡೆ, 29 ಲಕ್ಷ ಟನ್ ಅದಿರು ಮಾರಾಟದಿಂದ ಸರ್ಕಾರಕ್ಕೆ ಬರಬೇಕಾದ ಹಣ ವಸೂಲಿಗೆ ಆಗ್ರಹಿಸಿ ಗಣಿ ಉದ್ಯಮಿ ಟಪಾಲ್ ಗಣೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಸ್ಪಷ್ಟ ಕ್ರಮವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
