ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲ್ದೀಪ್ ಸೆಂಗಾರ್‌ಗೆ ಭಾರಿ ಹಿನ್ನಡೆಯಾಗಿದೆ. ಆತನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ತೀರ್ಪನ್ನು ಸವಾಲು ಮಾಡಿ ಸಿಬಿಐ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಅರ್ಜಿ (SLP) ಸಲ್ಲಿಸಿತ್ತು.
ಈ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಧರ್ಮಾಸನವು ಪ್ರಮುಖ ಆದೇಶಗಳನ್ನು ಹೊರಡಿಸಿದೆ. ಸಂತ್ರಸ್ತೆಯ ಭದ್ರತೆಗೆ ಸಂಬಂಧಿಸಿದಂತೆ ಸಿಬಿಐ ಮಂಡಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಪೀಠವು, ದೆಹಲಿ ಹೈಕೋರ್ಟ್ ತೀರ್ಪಿನ ಮೇಲೆ ತಡೆ ನೀಡಿದ್ದಲ್ಲದೆ, ಆರೋಪಿ ಕುಲ್ದೀಪ್‌ಗೆ ನೋಟಿಸ್ ಜಾರಿ ಮಾಡಿದೆ. ಜಾಮೀನು ರದ್ದು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೆಂಗಾರ್‌ಗೆ ನ್ಯಾಯಾಲಯ ಆದೇಶಿಸಿದೆ.
ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ 2017ರಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಾಲ್ಕು ಬಾರಿ ಶಾಸಕರಾಗಿದ್ದ ಅಂದಿನ ಬಿಜೆಪಿ ನಾಯಕ ಕುಲ್ದೀಪ್ ಸೆಂಗಾರ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಈ ಪ್ರಕರಣದ ವಿಚಾಣೆಯಲ್ಲಿ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು. ಪೊಲೀಸರಿಗೆ ದೂರು ನೀಡಿದರೂ ಆರೋಪಿಯನ್ನು ಬಂಧಿಸದಿದ್ದಾಗ, ಸಂತ್ರಸ್ತೆಯು ಸಿಎಂ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದಾಗಿ ಈ ಪ್ರಕರಣವು ಅತ್ಯಂತ ಪ್ರಮುಖ (ಹೈಪ್ರೊಫೈಲ್) ಪ್ರಕರಣವಾಗಿ ಗುರುತಿಸಿಕೊಂಡಿತು.
ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಸಂತ್ರಸ್ತೆಯ ತಂದೆಯು ಸೆಂಗಾರ್ ಬೆಂಬಲಿಗರ ಕೈಯಿಂದ ದಾರುಣವಾಗಿ ಹತ್ಯೆಗೀಡಾದರು. ಆನಂತರ ಸಂತ್ರಸ್ತೆಯು ಅನಿರೀಕ್ಷಿತವಾಗಿ ರಸ್ತೆ ಅಪಘಾತಕ್ಕೆ ಈಡಾಗಿದ್ದರು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಆಕೆಯ ಇಬ್ಬರು ಸಂಬಂಧಿಕರು ಆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಅಪಘಾತವನ್ನು ಕೂಡ ಸೆಂಗಾರ್ ಅವರೇ ಮಾಡಿಸಿದ್ದಾರೆ ಎಂಬ ಆರೋಪಗಳು ದಾಖಲಾಗಿದ್ದವು.
2018ರಲ್ಲಿ ಈ ಪ್ರಕರಣವು ಸಿಬಿಐ ಕೈಗೆ ಸೇರಿತ್ತು. ಪ್ರಕರಣದ ವಿಚಾರಣೆಯು ಯುಪಿ ವಿಚಾರಣಾ ನ್ಯಾಯಾಲಯದಿಂದ ದೆಹಲಿ ನ್ಯಾಯಾಲಯಕ್ಕೆ ವರ್ಗಾವಣೆಯಾಯಿತು. 2019ರ ಡಿಸೆಂಬರ್‌ನಲ್ಲಿ ಸೆಂಗಾರ್ ದೋಷಿ ಎಂದು ಸಾಬೀತಾದ ಕಾರಣ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಇತ್ತೀಚೆಗೆ ದೆಹಲಿ ಹೈಕೋರ್ಟ್, ಸೆಂಗಾರ್‌ಗೆ ಪೋಕ್ಸೋ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಕುಲ್ದೀಪ್ ಸಿಂಗ್ ಸೆಂಗಾರ್ ಅವರ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದ್ದಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಂತ್ರಸ್ತ ಕುಟುಂಬವು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗೆ ಇಳಿದಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಇದೇ ಸಮಯದಲ್ಲಿ, ಯುಪಿ ಚುನಾವಣೆಗಳ ಹಿನ್ನೆಲೆಯಲ್ಲಿ ಸೆಂಗಾರ್ ಸಮುದಾಯದ ಮತಗಳಿಗಾಗಿ ಅವರನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ರಾಜಕೀಯ ಟೀಕೆಗಳು ಎದ್ದವು. ಈ ಬೆಳವಣಿಗೆಗಳ ನಡುವೆ, ಸಿಬಿಐ ಮತ್ತು ಸಂತ್ರಸ್ತೆಯ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
