2016 ರಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳ (CJI) ಕಚೇರಿಗೆ ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಒಟ್ಟು 8,600 ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಶುಕ್ರವಾರ ಲೋಕಸಭೆಗೆ ತಿಳಿಸಲಾಯಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನೀಡಿದ ಲಿಖಿತ ಉತ್ತರದಲ್ಲಿ, 2016 ಮತ್ತು 2025 ರ ನಡುವೆ ಹಾಲಿ ನ್ಯಾಯಮೂರ್ತಿಗಳ ವಿರುದ್ಧ 8,639 ದೂರುಗಳು ಬಂದಿವೆ ಎಂದು ವಿವರಿಸಿದ್ದಾರೆ. ಇದರಲ್ಲಿ 2024 ರಲ್ಲೇ ಅತ್ಯಧಿಕ ಅಂದರೆ 1,170 ದೂರುಗಳು ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ ಸಲ್ಲಿಕೆಯಾಗಿವೆ. ಉನ್ನತ ನ್ಯಾಯಾಂಗದ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬರುವ ಇಂತಹ ದೂರುಗಳನ್ನು ನ್ಯಾಯಾಂಗವು “ಆಂತರಿಕ ಕಾರ್ಯವಿಧಾನದ” (In-house mechanism) ಮೂಲಕ ನಿರ್ವಹಿಸುತ್ತದೆ.
ಈ ಕುರಿತು ಮಾಹಿತಿ ನೀಡಿದ ಸಚಿವರು, ಮೇ 1997 ರಲ್ಲಿ ಸುಪ್ರೀಂ ಕೋರ್ಟ್ ಎರಡು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿದ್ದನ್ನು ಸ್ಮರಿಸಿದರು. ಅದರಲ್ಲಿ ಮೊದಲನೆಯದಾದ “ನ್ಯಾಯಾಂಗ ಬದುಕಿನ ಮೌಲ್ಯಗಳ ಮರುಸ್ಥಾಪನೆ” (The Restatement of Values of Judicial Life), ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ಪಾಲಿಸಬೇಕಾದ ಕೆಲವು ನ್ಯಾಯಾಂಗ ಮಾನದಂಡಗಳು ಮತ್ತು ತತ್ವಗಳನ್ನು ರೂಪಿಸಿದೆ. ಎರಡನೆಯದಾದ “ಆಂತರಿಕ ಕಾರ್ಯವಿಧಾನವು” (In-house Procedure), ಈ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ನ್ಯಾಯಾಂಗ ಮೌಲ್ಯಗಳನ್ನು ಅನುಸರಿಸದ ನ್ಯಾಯಮೂರ್ತಿಗಳ ವಿರುದ್ಧ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ.
ಸ್ಥಾಪಿತ ಆಂತರಿಕ ಕಾರ್ಯವಿಧಾನದ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ದೂರುಗಳನ್ನು ಸ್ವೀಕರಿಸಲು ಭಾರತದ ಮುಖ್ಯ ನ್ಯಾಯಮೂರ್ತಿಗಳು ಅರ್ಹರಾಗಿರುತ್ತಾರೆ. ಅದೇ ರೀತಿ, ಹೈಕೋರ್ಟ್ ನ್ಯಾಯಮೂರ್ತಿಗಳ ನಡವಳಿಕೆಯ ವಿರುದ್ಧ ದೂರುಗಳನ್ನು ಸ್ವೀಕರಿಸಲು ಆಯಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಅಧಿಕಾರವಿರುತ್ತದೆ. ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CPGRAMS) ಅಥವಾ ಯಾವುದೇ ಇತರ ರೂಪದಲ್ಲಿ ಬರುವ ದೂರುಗಳನ್ನು ಸಂಬಂಧಪಟ್ಟ ಮುಖ್ಯ ನ್ಯಾಯಮೂರ್ತಿಗಳಿಗೆ ಮುಂದಿನ ಕ್ರಮಕ್ಕಾಗಿ ರವಾನಿಸಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
