ಗಾಂಧಿನಗರ: ಅದಾನಿ ಗ್ರೂಪ್ ಸಲ್ಲಿಸಿದ್ದ ಪಾರುವು ನಷ್ಟ (Defamation) ಪ್ರಕರಣದಲ್ಲಿ ಸ್ವತಂತ್ರ ಪತ್ರಕರ್ತ ರವಿ ನಾಯರ್ ಅವರಿಗೆ ಗುಜರಾತ್‌ನ ಮಾನ್ಸಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಒಂದು ವರ್ಷದ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಅದಾನಿ ಎಂಟರ್‌ಪ್ರೈಸಸ್ ನೀಡಿದ ದೂರಿನ ಮೇರೆಗೆ ದಾಖಲಾಗಿದ್ದ ಈ ಪ್ರಕರಣದಲ್ಲಿ, ಸೋಶಿಯಲ್ ಮೀಡಿಯಾ ವೇದಿಕೆ ‘ಎಕ್ಸ್’ (ಟ್ವಿಟ್ಟರ್) ಮೂಲಕ ಕಂಪನಿಯ ಘನತೆಗೆ ಧಕ್ಕೆ ತರುವಂತಹ ಸುಳ್ಳು ಆರೋಪಗಳನ್ನು ಹರಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ರವಿ ನಾಯರ್ ಅವರ ಟ್ವೀಟ್‌ಗಳು ನ್ಯಾಯಸಮ್ಮತವಾದ ವಿಮರ್ಶೆಯ ವ್ಯಾಪ್ತಿಗೆ ಬರುವುದಿಲ್ಲ; ಬದಲಾಗಿ ಹೂಡಿಕೆದಾರರು ಮತ್ತು ಸಾರ್ವಜನಿಕರಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸುವ ಉದ್ದೇಶವನ್ನು ಹೊಂದಿದ್ದವು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಈ ನಡುವೆ, ಕಾರ್ಪೊರೇಟ್ ಸಂಸ್ಥೆಗಳನ್ನು ಟೀಕಿಸುವ ಪತ್ರಕರ್ತರ ವಿರುದ್ಧ ಗುಜರಾತ್ ನ್ಯಾಯಾಲಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಆತಂಕ ಪತ್ರಕರ್ತರ ವಲಯದಲ್ಲಿ ವ್ಯಕ್ತವಾಗಿದೆ. ‘ದಿ ವೈರ್’ ಮತ್ತು ‘ನ್ಯೂಸ್‌ಕ್ಲಿಕ್’ ನಂತಹ ಸುದ್ದಿ ಸಂಸ್ಥೆಗಳಿಗೆ ಲೇಖನಗಳನ್ನು ಬರೆಯುವ ರವಿ ನಾಯರ್ ಅವರ ವಿರುದ್ಧ ಅದಾನಿ ಗ್ರೂಪ್ ಈ ಹಿಂದೆಯೂ ಕಾನೂನು ಕ್ರಮಗಳನ್ನು ಕೈಗೊಂಡಿತ್ತು. ಸದ್ಯದ ಈ ತೀರ್ಪನ್ನು ಪ್ರಶ್ನಿಸಿ ರವಿ ನಾಯರ್ ಅವರು ಉನ್ನತ ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ತಿಳಿದುಬಂದಿದೆ.
