Home ದೇಶ ಇಂತಹ ಚುನಾವಣಾ ಆಯೋಗವನ್ನು ಸಹಿಸಲು ಸಾಧ್ಯವಿಲ್ಲ: ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ಹೊರಗಿಟ್ಟಿರುವ ವಿಚಾರ ಪ್ರಸ್ತಾಪಿಸಿ...

ಇಂತಹ ಚುನಾವಣಾ ಆಯೋಗವನ್ನು ಸಹಿಸಲು ಸಾಧ್ಯವಿಲ್ಲ: ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ಹೊರಗಿಟ್ಟಿರುವ ವಿಚಾರ ಪ್ರಸ್ತಾಪಿಸಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಕಿಡಿ

0

ದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್ – SIR) ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತ ವಿವಾದ ತಾರಕಕ್ಕೇರಿರುವ ಹೊತ್ತಿನಲ್ಲೇ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಫಲಿ ನಾರಿಮನ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

“ಸರಿಯಾಗಿ ಕರ್ತವ್ಯ ನಿರ್ವಹಿಸದ ಅಥವಾ ಅಕ್ರಮವಾಗಿ ಕಾರ್ಯನಿರ್ವಹಿಸುವ ಇಂತಹ ಚುನಾವಣಾ ಆಯೋಗವನ್ನು ನಾವು ಸಹಿಸಲು ಸಾಧ್ಯವೇ ಇಲ್ಲ. ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿರುವ ಸಾಮಾನ್ಯ ನಾಗರಿಕರ ಮತದಾನದ ಹಕ್ಕು ಇಂದು ಗಂಭೀರ ಅಪಾಯದಲ್ಲಿದೆ,” ಎಂದು ಅವರು ಎಚ್ಚರಿಸಿದ್ದು, ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸಿ ಈ ಲೋಪಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಗುಜರಾತ್‌ನ ರಾಜಕೋಟ್‌ನಲ್ಲಿ ಆಯೋಜಿಸಲಾಗಿದ್ದ ಸಿಎ ಎಂ.ಜೆ. ರಿಂದಾನಿ ಶತಮಾನೋತ್ಸವ ಸ್ಮಾರಕ ಉಪನ್ಯಾಸದಲ್ಲಿ ‘ಸಂವಿಧಾನ ಮತ್ತು ಸಾಮಾನ್ಯ ಮನುಷ್ಯ’ ಎಂಬ ವಿಷಯದ ಕುರಿತು ಮಾತನಾಡಿದ ನ್ಯಾಯಮೂರ್ತಿ ನಾರಿಮನ್, ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಸ್ತಾಪಿಸಿದರು.

“ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 90 ಲಕ್ಷ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸಲಾಯಿತು. ಈ ಪೈಕಿ ಕೇವಲ 22 ಲಕ್ಷ ಮತದಾರರು ಮಾತ್ರ ಮೇಲ್ಮನವಿ ಸಲ್ಲಿಸಲು ಶಕ್ತರಾದರು; ಉಳಿದ ಬಡ ಜನರು ನ್ಯಾಯ ಪಡೆಯುವ ಶಕ್ತಿ ಅಥವಾ ಸಾಧನಗಳಿಲ್ಲದೆ ಸುಮ್ಮನಾದರು. ವಿಚಾರಣೆ ನಡೆದ ಸುಮಾರು ಒಂದು ಲಕ್ಷ ಮೇಲ್ಮನವಿಗಳಲ್ಲಿ ಶೇ. 93 ರಷ್ಟು ತೀರ್ಪುಗಳು ಮತದಾರರ ಪರವಾಗಿಯೇ ಬಂದಿವೆ. ಅಂದರೆ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಕಾನೂನುಬಾಹಿರವಾಗಿ ಮತದಾರರನ್ನು ತಡೆಹಿಡಿದಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ,” ಎಂದು ಅವರು ವಿಶ್ಲೇಷಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಉಳಿದ ಇಬ್ಬರು ಆಯುಕ್ತರು 14 ಬಾರಿ ಆಕ್ಷೇಪಣೆ ಸಲ್ಲಿಸಿದ್ದ ವರದಿಯನ್ನು ಉಲ್ಲೇಖಿಸಿದ ನಾರಿಮನ್, “2023 ರ ಕಾಯ್ದೆಯ ಸೆಕ್ಷನ್ 18 ರ ಪ್ರಕಾರ ಬಹುಮತದ ಆಧಾರದ ಮೇಲೆ ಸಿಇಸಿ ನಿರ್ಧಾರಗಳನ್ನು ತಡೆಹಿಡಿಯುವ ಅಧಿಕಾರ ಆ ಇಬ್ಬರು ಆಯುಕ್ತರಿಗೆ ಇತ್ತು. ಆದರೆ ಅವರೂ ಸರ್ಕಾರದಿಂದಲೇ ನೇಮಕಗೊಂಡವರಾಗಿದ್ದರಿಂದ ತಮ್ಮ ಹಕ್ಕನ್ನು ಬಳಸಲಿಲ್ಲ. ಇಂದು ಮೂವರೂ ಒಟ್ಟಾಗಿ ರಾಜಿ ಮಾಡಿಕೊಂಡು ಹಳೆಯ ಫಾರ್ಮ್ 6 ಕ್ಕೆ ಮರಳುತ್ತೇವೆ ಎಂದು ಜಂಟಿ ಹೇಳಿಕೆ ನೀಡಿರುವುದು ದೇಶಕ್ಕೆ ಮತ್ತಷ್ಟು ಹಾನಿಕಾರಕ,” ಎಂದು ಟೀಕಿಸಿದರು.

ಸಿಇಸಿ ನೇಮಕಾತಿಗೆ ಸಂಬಂಧಿಸಿದ 2023 ರ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವಹಿಸುವ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, “ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಿ ಮತ್ತು ಅವರ ಸಂಪುಟ ಸಚಿವರ ಜೊತೆಗೆ ಕೇವಲ ವಿಪಕ್ಷ ನಾಯಕರನ್ನು ಇಟ್ಟಿರುವುದು ಸರ್ಕಾರಕ್ಕೆ ಅನಗತ್ಯ ಮೇಲುಗೈ ನೀಡಿದೆ. 2023 ರ ಅನೂಪ್ ಬರನ್‌ವಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಪ್ರಧಾನಿ, ವಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಒಳಗೊಂಡ ಸ್ವತಂತ್ರ ಸಮಿತಿಯಿಂದಲೇ ಆಯುಕ್ತರ ನೇಮಕ ನಡೆಯಬೇಕಿದೆ. ಈ ಬಗ್ಗೆ ಸಂವಿಧಾನ ಪೀಠವು ಆದಷ್ಟು ಬೇಗ ತೀರ್ಮಾನ ಕೈಗೊಳ್ಳುವುದು ದೇಶದ ಭವಿಷ್ಯಕ್ಕೆ ಅತ್ಯಗತ್ಯ,” ಎಂದು ಪ್ರತಿಪಾದಿಸಿದರು.

You cannot copy content of this page

Exit mobile version