“..ಬರುವಾಗ ಇಲ್ಲಿ ಎಲ್ಲರು ಅಪರಿಚಿತರೆ. ರಕ್ತಸಂಬಂಧ, ಸ್ನೇಹ, ಪ್ರೀತಿ, ಇವುಗಳ ವಿಷಾದದ ದಾರಿಯಲಿ ನೂರಾರು ಮೈಲು ನಡೆಯಬೇಕು. ವ್ಯಕ್ತಿ ಹತ್ತಿರವಿದ್ದಾಗ ವಿಶೇಷವಾಗಿ ಕಾಣಲಾರ. ಆದರೆ ಅದೇ ವ್ಯಕ್ತಿ ನಮ್ಮಿಂದ ದೂರವಾದಾಗ ಮತ್ತೆ ಕಾಡಲು ಆರಂಭಿಸುತ್ತಾನೆ..” ಸಾಹಿತಿಗಳಾದ ಆನಂದ ಬೋವಿಯವರ ಬರಹದಲ್ಲಿ
ಕಣ್ಣಿಂಗೆ ಕಣ್ಣು ಕಣ್ಗಳು ಕಣ್ಣು ಕಣ್ಣೇ ನೇತ್ರ
ನೇತ್ರವೇ ಸೂತ್ರ ಸೂತ್ರವೇ ಲಿಂಗ ಲಿಂಗವೆ ಗುಹ್ಯ
ಗುಹ್ಯಕ್ಕೆ ಗುಹ್ಯ ಗೋಪಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ
ಈ ನೇತ್ರದ ಮಹಿಮೆಯ ಗುಹೇಶ್ವರ ಬಲ್ಲನಲ್ಲದೆ
ಕಣ್ಣು ಗೆಟ್ಟಣ್ಣಗಳತ್ತ ಬಲ್ಲು ನೋಡಯ್ಯ
- ಅಲ್ಲಮಪ್ರಭು
ಕಣ್ಣುಗಳಿಗೆ ಹುಡುಕುವ ಕಾತುರ. ತಳಮಳಿಸುವ ಮನಸ್ಸಿನೊಳಗೆ ಕಳೆದುಕೊಂಡು ಹುದುಗಿಹೋಗಿರುವ ಆ ರೂಪಗಳು ಮತ್ತೆ ಮತ್ತೆ ಕಾಡುತ್ತಲೆ ಇರುತ್ತವೆ. ದೂರ ಬಹುದೂರ ಹಬ್ಬಿರುವ ದಾರಿಯ ಧೂಳಿನಲಿ ಆ ರೂಪಗಳು ಧುತ್ತನೆ ಎದುರಿಗೆ ಬಂದು ಬಿಡಬಹುದೆಂಬ ಆ ಕಲ್ಪನೆಯೆ ಮಧುರವಾಗಿ ಒಂದಿಷ್ಟು ಖುಷಿ ನೀಡಿ ಮನಸ್ಸನ್ನು ಸಮಾದಾನಿಸುತ್ತದೆ.
ಕಳೆದು ಹೋದವರು ಮತ್ತೆ ಹೇಗೆ ಸಿಕ್ಕಾರು.? ಬದುಕಿನ ಸಂತೆಯಲಿ ಇರುವ ಚಿಂತೆಯ ಮರೆಸಿ ,ಅಣಕಿಸಿ, ಅಳಿಸಿ ಕದಲಿಸಿ ಸಂತಸಗೊಂಡವರ ಹಜ್ಜೆಗಳು ಅಳಕಿದ ಹೊತ್ತಲಿ,. ಹೆಗಲ ಮೇಲೆ ಕೈ ಇಟ್ಟು ಜೊತೆಗಿದ್ದ ಅವರ ನೆನಪು ಚುಚ್ಚಿ,ಚುಚ್ಚಿ ಕೊಲ್ಲುತ್ತಿರುವಾಗ, ಆ ಒಂದು ಪಿಸುಮಾತಿಗಾಗಿ ಮತ್ತೆ ಹೃದಯ ತಣ್ಣಗಾಗಿರುವುದು. ಸಂತ್ವಾನದ ದನಿ ಹುಡುಕಿ ಅಲೆಯುತಿರುವುದು.
ತಿರುಗಿ ನೋಡಿದರೆ ಇದು ದಣಿವರಿಯದ ಪಯಣ. ದುಃಖದ ಕತೆಗಳಿಗೆ ಆಯಾಸಗೊಂಡಿರಬಹುದು. ಜೊತೆ ಬಂದವರು ನಡುದಾರಿಯಲಿ ಅಪರಿಚಿತರಂತೆ ಮರೆತು ಮಾಯವಾದಾಗ ಬಿಕ್ಕಳಿಸಿ ಅತ್ತಿರಬಹುದು. ಇಲ್ಲಿ ಹೆಜ್ಜೆ ಹೆಜ್ಜೆಗೂ ನಿಲ್ದಾಣಗಳಿವೆ. ಇಳಿದು ಹೋದವರ ನೆನೆಯುತ ಜೊತೆಯಾದವರ ಕೈ ಹಿಡಿದು ನಡೆಯುತ್ತೇವೆ. ಹಳೆಯಬೇರು ಹೊಸ ಚಿಗಿರು ಹೀಗೆ ಸಾಗುತ್ತಲಿದ್ದೇವೆ. ನಮ್ಮ ನಿಲ್ದಾಣದ ಸ್ಥಳ ಅರಿಯದೆ ಓಡುತ್ತಿದ್ದೇವೆ. ಪ್ರೀತಿ ಹಂಬಲಿಸುತ ದ್ವೇಷದ ಅಮಲಿನಲಿ ಸ್ವಾರ್ಥದ ಅಹಂ ಕಟ್ಟುತ್ತಿದ್ದೇವೆ. ಇಲ್ಲಿ ಪ್ರೀತಿಸುವರಾರು.? ದ್ವೇಷಿಸುವರಾರು.? ಗುರುತಿಸಲಾಗದೆ ಗೊಂದಲಗಳಿಗೆ ಒಳಗಾಗಿದ್ದೇವೆ. ಆ ಕ್ಷಣದ ಸನ್ನಿವೇಶದ ಪಾತ್ರದಾರಿಗಳಾಗಿ ನಟಿಸುತ್ತಿದ್ದೇವೆ.
ಎಷ್ಟು ಹುಡಕಿದರು ಸಿಗದವರ ವಿಳಾಸಗಳನ್ನು ಮತ್ತೆ ಹುಡುಕಿ ಅಂಟಿಸುವ ಖಯಾಲಿಗೆ ಬಿದ್ದಿದ್ದೇವೆ. ಕದ ಮುಚ್ಚಿದರು ಬಾಗಿಲು ಬಡಿದು ಕದ ತೆರಯುವ ಗಳಿಗೆಯ ಆಸೆಯಲಿ ತೇಲುತ್ತಿದ್ದೇವೆ. ಇರುವವರ ನಡುವೆ ಕಳೆದು ಹೋದವರ ಮೋಹ ಆವರಿಸುತ್ತಲೆ ಇರುತ್ತದೆ.
ಬೆಚ್ಚನೆಯ ರಾತ್ರಿಯಲಿ ನೆನಪು ಹೊತ್ತು ತರುವ ತಂಗಾಳಿ ಸಮಾಧಾನಿಸುವ ದಾಟಿಯಲಿ ಸುಳಿದಾಡುತಿದೆ. ಮನಸ್ಸೊಂದು ಕಣ್ಮರೆಯಾದಾಗ ಕಳೆದುಕೊಂಡ ಎದೆಯ ನೋವು ವಿಲಿವಿಲಿ ನರಳುವ ಆ ಹೊತ್ತು ಕರಗಿ ಹೋಗಬಾರದೆ. ಭಗ್ನ ಪ್ರೇಮಿಯೊಬ್ಬ ಸಂಗಾತಿಯ ನೆರಳ ಚಾಟಿನಲಿ ಮುಗಿಲ ನೋಡುತ ಅಳುವಾಗ, ಸುರಿಯಲಾರದೆ ಹೋದ ಮಳೆ ಹನಿ, ಅವನ ಕಣ್ಣೀರಿನ ಕತೆಯ ಹೊತ್ತುಕೊಂಡು ಹೋಗಿದೆ. ಈ ಮಧುರ ಯಾತನೆಗೆ ಯಾವ ಹೆಸರಿದೆ. ಕಳೆದೋದ ಆ ದಿನಗಳ ಅಪ್ಪಿಕೊಳ್ಳಲು ತಡಬಡಿಸುವ ಮನಸ್ಸುಗಳು, ಸ್ಪರ್ಶದ ಸುಳಿಗಾಳಿಯ ಹೊಡೆತದಲಿ ಹಾರಿ ಹೋಗುತಿವೆ. ಕಾಲಸರಿದಂತೆ ಮರೆತಂತೆ ಅನಿಸಿದರು .ಆಗಾಗ ಎಡವಿ ಬೀಳುವ ಎದೆಸೆಳೆತ ಮುದ ನೀಡುವುದಂತು ಸತ್ಯ. ಮರೆಯಾದ ಆ ಜೀವದ ಉಸಿರು ಸುತ್ತಲು ತೇಲಾಡುತಿರುವ ಅನುಭವ ವರ್ಣಿಸಲು ಅಸಾಧ್ಯ. ಈ ಜೀವಗಳಿಗೆ ಮರೆವು ಇರದಿದ್ದರೆ ಎಷ್ಟೊಂದು ಖನ್ನತೆಗೆ ಒಳಗಾಗಿ ಕ್ಷಿಣಿಸಿ ಹೋಗುತ್ತಿದ್ದವೋ ಏನೋ..? ಮನಸ್ಸು ಬೀಜವಾಗಿ, ಕಾಂಡವಾಗಿ, ,ಎಲೆಯಾಗಿ, ಹೂವಾಗಿ,ಹಣ್ಣಾಗಿ ಇಳಿಸಂಜೆಯಲಿ ಬಿದ್ದು ಹೋಗುವ ತನಕ ಅನುಭವಿಸಿದ ಸಂಭ್ರಮ, ಸಂಕಟಗಳ ನಡುವೆ ಬಂದುಹೋದವರ ಪ್ರತಿಸ್ಪಂದನೆಗಳು ನೆನೆಯುತ ಸಾಗುವಾಗ ಅಪ್ಪಳಿಸುವ ಅಲೆಯಂತೆ ದಡ ಸೇರಿ ಮರಳುವ ಹೋಯ್ದಾಟವಾಗಿದೆ ಬದುಕು.
ಕೋಪ, ಮತ್ಸರ, ಅಸಮಾಧಾನ, ಟೀಕೆ ಟಿಪ್ಪಣೆ, ಅಪಮಾನ, ಅವಮಾನ , ನಂಬಿಕೆ ಮತ್ತು ಅಪನಂಬಿಕೆಗಳ ಮುಲಾಜಿನಲ್ಲಿ ಕಳೆದೋದ ಸಮಯ .ಕೆಲವೊಂದು ರಸನಿಮಿಷ ನೀಡಿರುದಂತು ನಿಜ. ನಾವು ಒಂಟಿಯಾಗಿದ್ದರೆ ಈ ಎಲ್ಲ ಮನಸ್ಸಿನ ತುಮಲಗಳ ಅನಭವಿಸುವುದು ಸಾಧ್ಯವಿತ್ತೆ. ಯಾವುದಾದರು ಒಂದು ಹಿತವಾದ ಮಾತು ಎದೆಗೆ ತಟ್ಟಿ ಮುದನೀಡಬಾರದೆ… ದುಃಖದ ಕಣ್ಣೀರನೆಲ್ಲಾ ಬೊಗಸೆ ಚಾಚಿ ಒರೆಸಿ ಸಂತೈಸಬಾರದೆ…. ಪ್ರತಿ ಮನಗಳಿಗೆ ಸ್ಫಂದನೆ ಸಿಗದಿದ್ದರೆ ಯಾರು ತಾನೇ ಉಸಿರಾಡುತ್ತಾರೆ. ಯಾವ ಸಂತ, ಅವಧೂತ ಮೌನಿಯಾಗಿ ನಡೆದಾಡಿದರು, ಜಪತಪದಲಿ ತೇಲಿಹೋದರು ಮಾತಿಗೆ ಮರುಳಾಗಿ ನೋವ ಮರೆತಿಲ್ಲ ಹೇಳಿ. ಇಲ್ಲಿ ಸ್ಪಂದಿಸಿದವರೆ ಗೆದ್ದಿದ್ದಾರೆ.
ಮನುಷ್ಯ ಮುಖವಾಡಗಳ ಕಣಜ. ಆಂತರಿಕ ಮತ್ತು ಬಾಹ್ಯ ತುಮಲಗಳ ನಡುವೆ ಒದ್ದಾಡುವ ಸಂಘರ್ಷ. ಮುಖವಾಡಗಳನ್ನು ಕಳಚಿದಷ್ಟು ಬೆತ್ತಲಾಗುತ್ತಲೆ ಸಾಗುತ್ತಾನೆ. ಯಾರೇ ಎಷ್ಟೇ ಪ್ರಾಮಾಣಿಕನಾದರೂ, ಅವರ ಆತ್ಮ ಮುಚ್ಚಿಟ್ಟುಕೊಂಡಿರುವ ಸಾವಿರಾರು ಸತ್ಯಗಳು ಅವರಲ್ಲಿಯೆ ಸಮಾಧಿಯಾಗುತ್ತವೆ. ಹಾಗೇ ಕಳೆದುಕೊಂಡ ಆತ್ಮಗಳ ಗಾಢವಾದ ನೆನಪುಗಳು ಅವರು ಇರುವಾಗ ಸಂಘರ್ಷಗಳಿಗೆ ಒಳಗಾಗಿ ನಮ್ಮ ಸಣ್ಣತನವನ್ನು ಕೆಲವೊಂದು ಸಾರಿ ಹಂಗಿಸಿರುವದಂತು ಸತ್ಯ. ಆದರೂ ಕೆಲವೊಂದು ಸಂಬಂಧಗಳಲ್ಲಿ ಬೆರೆತ ಆತ್ಮಿಯತೆಯನ್ನು ಅಲ್ಲಗಳೆಯಲಾಗದು.
ಬರುವಾಗ ಇಲ್ಲಿ ಎಲ್ಲರು ಅಪರಿಚಿತರೆ. ರಕ್ತಸಂಬಂಧ, ಸ್ನೇಹ, ಪ್ರೀತಿ, ಇವುಗಳ ವಿಷಾದದ ದಾರಿಯಲಿ ನೂರಾರು ಮೈಲು ನಡೆಯಬೇಕು. ವ್ಯಕ್ತಿ ಹತ್ತಿರವಿದ್ದಾಗ ವಿಶೇಷವಾಗಿ ಕಾಣಲಾರ. ಆದರೆ ಅದೇ ವ್ಯಕ್ತಿ ನಮ್ಮಿಂದ ದೂರವಾದಾಗ ಮತ್ತೆ ಕಾಡಲು ಆರಂಭಿಸುತ್ತಾನೆ. ಅರೇ… ಹೌದಲ್ಲವೇ …ಅವನ ಸಾಮಿಪ್ಯ ನಮಗೆಷ್ಟು ಅನಿವಾರ್ಯವಾಗಿತ್ತು ಎನ್ನುವ ಸಹಜತೆ ಮುಡದೆ ಇರಲಾರದು. ಹಂಚಿಕೊಂಡ ಭಾವಗಳು ,ಸ್ಪಂದಿಸಿದ ಒಲವುಗಳು ಕೈ ಹಿಡಿದ ಸ್ಪರ್ಶಗಳು ಸದಾ ನಮ್ಮನ್ನು ತಬ್ಬುತಿರುತ್ತವೆ. ನಮ್ಮ ವರ್ತನೆ ನಮ್ಮ ಹೆಜ್ಜೆಗಳ ಗುರುತಾಗಿದೆ. ಅಹಂ ಮುರಿದ ಸ್ನೇಹ, ನಂಬಿಕೆ ಮುರಿದ ಸಂಬಂಧ, ಸಮಯ ಮುರಿದ ಪ್ರೇಮ, ನಮ್ಮನ್ನ ಎಷ್ಟೊ ಸಾರಿ ಎಕಾಂಗಿಯಾಗಿಸಿವೆ. ಪರಸ್ಪರ ಗೌರವವಿಲ್ಲದೆ ಅಪಹಾಸ್ಯಕೂ ಒಳಗಾಗಿದ್ದೇವೆ. ಬೇರೆಯವರ ಅವನತಿಯನ್ನು ಸಂಭ್ರಮಿಸುವ ಮನಸ್ಥಿಯನ್ನು ರೂಡಿಸಿಕೊಂಡಿದ್ದೇವೆ. ನಮ್ಮನ್ನು ಸದಾ ಆವರಿಸಿದ ಮತ್ಸರ ಬಹಳಷ್ಟು ಹೃದಯಗಳ ದೂರಮಾಡಿದೆ. ಸಂತೋಷದ ತೃಪ್ತಿ ಹಂಚಿಕೊಳ್ಳಲಾದರು ಇನ್ನೊಂದು ಮನಸ್ಸು ಬೇಕಲ್ಲವೆ..? ಏನಾದರು ನಾವು ಹಿಯಾಳಿಸಲಿಕ್ಕಾದರೂ ಇನ್ನೊಂದು ಜೀವ ಎದುರಿಗೆ ಬರಬೇಕಲ್ಲವೇ…? ಮನುಷ್ಯ ಒಂಟಿ ಜೀವಿಯಾಗಲು ಸಾಧ್ಯವಿಲ್ಲ. ಅವನ ಬದುಕಿಗೆ ಪಿಸುದನಿಯೊಂದು ಯಾವಾಗಲೂ ಅಪ್ಪಳಿಸುತ್ತಲೆ ಇರಬೇಕು.ತಂತಿಯ ನಾದ ಗುನುಗುನುತ್ತಲೇ ಕೇಳುತಿರಬೇಕು. ಮನಸ್ಸೊಂದು ಕಾಯುತ್ತಲೆ ಚಡಪಡಿಸತಿರಬೇಕು. ಸಣ್ಣ ಕೋಪದಲಿ ಬಾಹುಬಳಿಸಿ ತಬ್ಬುತಿರಬೇಕು. ಮೋಡದಂತೆ ಸುರಿದು ಸುರಿದು ಹನಿಯಾಗಬೇಕು.
ಹೋದವರ ಗುಣಗಾನದಲ್ಲಿ ಎಲ್ಲರೂ ಪೈಪೋಟಿ ನಡುಸುವವರೆ, ಇರುವಾಗ ಪೀಡಿಸುವ ಮನ. ಮನಸ್ಸೊಂದು ದೂರಾದಾಗ ಚಡಪಡಿಸಲು ಆರಂಭಿಸುತ್ತದೆ. ವೈರಿ ಆಗಿದ್ದರು ಸಹ ಅವನ ಒಳ್ಳೆಯ ಗುಣಗಳ ಹುಡುಕಿ ತೆರೆಯಲು ಹಂಬಲಿಸುತ್ತೇವೆ. ಇದು ಮನುಷ್ಯನ ಸಹಜ ಗುಣ ಇರಬಹುದು. ಅದರಲ್ಲೂ ನಮ್ಮ ಸಮಾಜದಲ್ಲಿ ಬೆರೆತುಕೊಂಡಿರುವ ರಕ್ತ ಸಂಬಂಧದ ಬೇರು ಆಳವಾಗಿದೆ. ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ಸಿಗದಿದ್ದರು, ನಮ್ಮವರನ್ನು ಕಳೆದುಕೊಂಡ ನೋವು ನಾವು ಇರುವವರೆಗೂ ಕಾಡುವ ಕಪ್ಪು ಚುಕ್ಕೆಯಾಗಿ ಸದಾ ನೆರಳಿನಂತೆ ಇರುತ್ತದೆ.
ಚಾಚಿಕೊಳ್ಳುವ ನೀರವ ಮೌನ ತುಂಬಿಕೊಳ್ಳುವ ಅವರ ನೆನಪು. ಒಮ್ಮೊಮ್ಮೆ ಮನಸನ್ನು ಸಮಾಧಾನಿಸುವ ಔಷಧಿಯು ಹೌದು. ಸುಳಿದಾಡುವ ಹಾದಿಬೀದಿಯಲ್ಲಿ ಅವರಿಟ್ಟ ಹೆಜ್ಜೆಯ ಸಪ್ಪಳ ಕೇಳಿಸಿದ ಅನುಭವ ಘಲ್ಲೆಂದು ಆವರಿಸುತ್ತದೆ. ಸುಳಿಗಾಳಿಯು ತಬ್ಬಿ ದಾಟಿದಾಗ ಸೂಸುವ ಘಮ ಅವರನ್ನು ಹೊತ್ತುಕೊಂಡು ಸ್ಪರ್ಶಿಸುತ್ತದೆ.ಹೋದವರಾರು ಒಂಟಿಯಲ್ಲ, ಅವರ ನೆನಪುಗಳ ಮೊಟೆಯನ್ನು ಭಾರವಾಗದಂತೆ ಮುಡಿಸಿಹೋದ ಮಾಂತ್ರಿಕರು.ಶರಣರು ಹೇಳಿದಂತೆ ಸಾವಿರ ಮಾತನಾಡಿದರು ಕೊನೆಗೆ ಮೌನವಂದೆ ಉತ್ತರ ಎನ್ನುವಂತೆ, ಮೌನವಾದವರ ಮಾತಗಳ ಸೆಳೆತದಲಿ ಕಳೆದುಹೋಗುತ್ತಿದ್ದೇವೆ.
ಕಳೆದುಹೋದವರ ಹುಡುಕಾಟದ ವ್ಯರ್ಥ ಪ್ರಯತ್ನಕ್ಕೆ ಆಸೆಪಡುವುದು ಹುಚ್ಚುತನ. ಅವರ ಹೆಜ್ಜೆಯ ಜಾಡುಹಿಡಿದು ಸಾಗಿದರೆ ಸಾಕು.ಅಲ್ಲೊಂದು ಸಮಾಧಾನ ಸಿಗಬಹುದು. ಅನುಭವದ ಮೃಷ್ಟಾನ ದೊರೆಯಬಹುದು. ಅವರು ಉಳಿಸಿಹೋದ ಒಳ್ಳೆಯತನದ ಉಸಿರು ಉಸಿರಾಡಬಹುದು. ಅವರು ಬಿತ್ತಿದ ಬೀಜ ಮರವಾಗಿ ಫಲ ನೀಡಬಹುದು. ಆ ಮರದ ನೆರಳಿನಲ್ಲಿ ಗೂಡೊಂದು ಕಟ್ಟಿರಬಹುದು. ಹಕ್ಕಿ ಮರಿಹಕ್ಕಿಯ ಸಾಕುತಿರಬಹುದು.
ಮರಳಿ ಬಾರದ ಕಾಲವನ್ನು ಕೇವಲ ವರ್ಣೀಸಲು ಮಾತ್ರ ಸಾಧ್ಯ. ಮರೆತು ಮುಂದೆ ಸಾಗಲು, ಗಟ್ಟಿ ಮನಸ್ಸೊಂದಿದ್ದರೆ ಸಾಕು. ಅವರೆಲ್ಲಾ ನಮಗಾಗಿ ಕಾಯುತಿರಬಹುದು. ಕಾಣದ ಊರಲ್ಲಿ ಕೈ ತುತ್ತು ಹಿಡಿದು ಕಾತುರದಿಂದ ಹಂಬಲಿಸತಿರಬಹುದು. ನಮ್ಮ ಬರುವಿಕೆಗಾಗಿ ಕಾತುರಿಸತಿರಬಹುದು. ನಮ್ಮ ಪಯಣವು ಮುಗಿಯುತ್ತದೆ. ಹೋದವರ, ಇರುವವರ ನಡುವಿನ ಕೊಂಡಿಯಾಗಿ ನೆನಪುಗಳ ಬಂಢಾರ ಹೊತ್ತು ನಡೆಯಲೆಬೇಕು. ಹೋದವರ ಪಂಕ್ತಿಯಲಿ ಜಾಗ ಹುಡುಕಿ ಕುಳಿತುಕೊಳ್ಳಬೇಕು. ಆ ನಂಬಿಕೆ ಇದ್ದರೆ ಇಲ್ಲಿ ಮನುಷ್ಯತ್ವದ ಮನುಷ್ಯರಾಗಬಹುದು. ಸ್ವಾರ್ಥಗಳ ನಡುವೆ ಉಳಿಯುವ ನಿರಾಳತೆಯ ಬದುಕು ಸಾಗಿಸಬಹುದು.
ಹೋದವರೆಲ್ಲಾ ಒಳ್ಳೆಯರಿರಬಹುದು . ಆದರೂ ನೆನಪಿನಲ್ಲಿ ಉಳಿದು ಮರೆಯಾಗದೆ ಕಾಡುತಿರುವವರು ಕೆಲವರು ಮಾತ್ರ.
ಗಜಲ್
ಸದ್ದು ಗದ್ದಲದ ನಡುವೆ ಸುಮ್ಮನಾಗಿ ನಡೆದುಬಿಡು
ಸುಖ ದುಃಖ ಮರೆತು ಖಾಲಿಯಾಗಿ ನಡೆದುಬಿಡು
ನಿನ್ನನ್ನೆ ಹೊತ್ತು ದೂರದ ನಕ್ಷತ್ರದತ್ತ ಸಾಗುತಿರುವೆ
ಮೋಹದ ಭ್ರಮೆ ತೊರೆದು ಬರಿದಾಗಿ ನಡೆದುಬಿಡು
ಜಪ ತಪದ ಹಂಗಿನಲಿ ಅರಿವಿಲ್ಲದ ಧೂತನಾಗಿರುವೆ
ಬಯಲು ಬಾಚುತ ಶೂನ್ಯ ಬಿಂದುವಾಗಿ ನಡೆದುಬಿಡು
ನೆರಳ ಬೆನ್ನ ಬಿದ್ದು ಸಂಬಂಧದ ಬಂಧಿಯಾಗಿರುವೆ
ನನ್ನದೆಂಬ ಅಹಂ ಮುರಿದು ಬೆತ್ತಲಾಗಿ ನಡೆದುಬಿಡು
ಮಮಕಾರದ ಲೋಕದಲಿ ʼಆನಂದʼ ಮೈಮರೆತಿರುವೆ
ಭವದ ಸಾಗರದಿ ಮುಳುಗಿ ಹನಿಯಾಗಿ ನಡೆದುಬಿಡು.
ಆನಂದ ಭೋವಿ
