Home ಅಂಕಣ ಮತಗಳ್ಳತನಕ್ಕೆ ಅಡ್ಡದಾರಿ; ಅಧಿಕಾರವೊಂದೇ ಬಿಜೆಪಿ ಗುರಿ

ಮತಗಳ್ಳತನಕ್ಕೆ ಅಡ್ಡದಾರಿ; ಅಧಿಕಾರವೊಂದೇ ಬಿಜೆಪಿ ಗುರಿ

0

“..ಮುಖ್ಯಮಂತ್ರಿಗಳು ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾಯದೇ ಬಿಜೆಪಿಯ ಅಕ್ರಮ ಕಾರ್ಯಾಚರಣೆ ವಿರುದ್ದ ಸ್ವತಂತ್ರ ತನಿಖೆಯನ್ನು ತೀವ್ರಗೊಳಿಸಬೇಕಿದೆ. ತಪ್ಪಿತಸ್ತರು ಮತ್ತು ಅವರ ಹಿಂದಿರುವವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕಿದೆ..” ರಾಜಕೀಯ ವಿಶ್ಲೇಷಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

ಬಹುಷಃ ಇಷ್ಟೊಂದು ನಿರ್ಲಜ್ಜ ರಾಜಕೀಯ ಪಕ್ಷವನ್ನು ಕರ್ನಾಟಕ ಎಂದೂ ನೋಡಿರಲಾರದು. ಕನಿಷ್ಟ ಪಾಪಪ್ರಜ್ಞೆಯೂ ಇಲ್ಲದೇ ಅಧಿಕಾರಕ್ಕಾಗಿ ಅನೈತಿಕ ನೀಚ ಕುಕೃತ್ಯಗಳನ್ನು ಮಾಡಿ ಅದನ್ನು ಸಮರ್ಥಿಸಿಕೊಳ್ಳುವ ನಾಚಿಕೆ ಇಲ್ಲದ ರಾಜಕೀಯ ನಾಯಕರನ್ನು ಕನ್ನಡಿಗರು ಸಹಿಸಿಕೊಳ್ಳಬೇಕಾದದ್ದು ದೌರ್ಬಾಗ್ಯ. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಹಾಗೂ ಆರೆಸ್ಸೆಸ್ ಹಿನ್ನಲೆಯ ನಾಯಕರ ಕರ್ಮಕಾಂಡ ಬಯಲಾಗುತ್ತಲೇ ಇದೆ.

ವಿವಾದಿತ ವಿಶೇಷ ಮತದಾರರ ಪರಿಷ್ಕರಣೆ (SIR) ಯಲ್ಲಿ ಬಿಜೆಪಿ ಪಕ್ಷವು ಫಾರಂ 7 ನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡ ಅರೋಪಗಳು ಕೇಳಿ ಬರತೊಡಗಿದವು. ಬಿಜೆಪಿ ನಾಯಕರುಗಳು ತಮ್ಮ ಕಾರ್ಯಕರ್ತರನ್ನು ಬಳಸಿ ಅಹಿಂದ ಮತದಾರರ ಹೆಸರನ್ನು ಮತಪಟ್ಟಿಯಿಂದ ಅಳಿಸಿ ಹಾಕಲು ಪೂರ್ವ ಮುದ್ರಿತ ಫಾರಂ 7 ನ್ನು ರಾಜ್ಯಾದ್ಯಂತ ಸಲ್ಲಿಸಿರುವ ಪ್ರಕರಣಗಳು ಸುದ್ದಿಯಾಗ ತೊಡಗಿದವು. ಎಲ್ಲಿ ತನ್ನ ಬೆಂಬಲದ ಮತದಾರರು ಮತಪಟ್ಟಿಯಿಂದ ತೆಗೆದುಹಾಕಲ್ಪಡುತ್ತಾರೊ ಎಂಬ ಆತಂಕದಿಂದ ಕಾಂಗ್ರೆಸ್ ಪಕ್ಷ ಸಿಎಂ ಡಿಕೆ ಶಿವಕುಮಾರರ ನೇತೃತ್ವದಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಲಗ್ಗೆ ಇಟ್ಟಿತು. ಒತ್ತಡಕ್ಕೆ ಮಣಿದ ಆಯುಕ್ತರು ಫಾರಂ 7 ದುರುಪಯೋಗ ಮಾಡಿದವರ ಮೇಲೆ ಪ್ರಕರಣ ದಾಖಲಿಸಲು ಆದೇಶಿಸಿತು.

ಫಾರಂ 7 ಸಲ್ಲಿಸುವಾಗ ನಮೂದಿಸಿದ ಹೆಸರು ಎಫಿಕ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಆಧರಿಸಿ ಪೊಲೀಸರು FIR ದಾಖಲಿಸತೊಡಗಿದರು. ಇದರಿಂದ ಫಾರಂ 7 ಸಲ್ಲಿಸಿದ ಕಾರ್ಯಕರ್ತರುಗಳಲ್ಲಿ ಆತಂಕ ಶುರುವಾಯಿತು. “ಮತದಾರರನ್ನು ಪಟ್ಟಿಯಿಂದ ತೆಗೆಸಿ ಹಾಕಲಾಗುತ್ತಿದೆ ಎಂಬುದನ್ನು ಮುಚ್ಚಿಟ್ಟು ತಮ್ಮಿಂದ ಫಾರಂ ಗಳಿಗೆ ಬಿಜೆಪಿ ಕಾರ್ಯಾಲಯದವರು ಸಹಿ ಹಾಕಿಸಿಕೊಂಡರು” ಎಂದು ಬಿಜೆಪಿ ಕಾರ್ಯಕರ್ತರು ಅವಲತ್ತುಗೊಂಡರು. ನಮ್ಮನ್ನು ಪಕ್ಷದ ಕಚೇರಿಗೆ ಕರೆದು “ನಿಮ್ಮ ಮತಗಟ್ಟೆಯಲ್ಲಿ ಕೆಲವು ಮುಸ್ಲಿಮರು ಕೇರಳದಲ್ಲಿ ಹಾಗೂ ಕರ್ನಾಟಕದಲ್ಲಿ ಮತಚೀಟಿ ಹೊಂದಿದ್ದಾರೆ, ಅವುಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕಿದೆ, ನೀವು ಸಹಿ ಮಾಡಿ ಜನನ ಬಿಎಲ್ ಓ ಗಳಿಗೆ ಕೊಡಿ” ಎಂದು ಹಲವಾರು ಕಾರ್ಯಕರ್ತರು ತಮ್ಮ ನೋವು ತೋಡಿಕೊಂಡರು.

ಈ ಕಾರ್ಯಕರ್ತರಿಂದ ಅರ್ಜಿ ತುಂಬಿಸಿದರೆ ಪ್ರಶ್ನೆಗಳು ಬರಬಹುದು ಎಂದು ಊಹಿಸಿದ ಈ ಬಿಜೆಪಿಯ ಕಾಣದ ಕೈಗಳು ಫಾರಂ 7 ರಲ್ಲಿ ಎಲ್ಲವನ್ನು ಮೊದಲೇ ಮುದ್ರಿಸಿದ್ದರು. ಅರ್ಜಿದಾರರು ಕೇವಲ ಕೆಳಗೆ ಸಹಿ ಮಾಡಿದ್ದರು. ಇದೆಲ್ಲಾ ಬಿಜೆಪಿಯ ಪೂರ್ವಯೋಜಿತ ಸಂಚಾಗಿತ್ತು. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಬಿಜೆಪಿ ವಿರೋಧಿ ಮತದಾರರ ಹೆಸರನ್ನು ಮತಪಟ್ಟಿಯಿಂದ ಅಳಿಸಿ ಹಾಕಿದಂತೆ ಕರ್ನಾಟಕದಲ್ಲೂ ಮಾಡುವ ಪ್ರಯತ್ನವನ್ನು ಬಿಜೆಪಿ ಶುರು ಮಾಡಿಕೊಂಡಿತ್ತು. ಆ ಕಳ್ಳ ಅರ್ಜಿಗಳನ್ನು ಮಾನ್ಯ ಮಾಡುವಂತೆ ಬೂತ್ ಮಟ್ಟದ BLO ಹಾಗೂ ERO ಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಒಬ್ಬೊಬ್ಬ ಬಿಜೆಪಿ ಕಾರ್ಯಕರ್ತನೂ ಐವತ್ತರಿಂದ ಇನ್ನೂರು ಕಳ್ಳ ಅರ್ಜಿಗಳಿಗೆ ಸಹಿ ಮಾಡಿ ಸಲ್ಲಿಸಿಯಾಗಿತ್ತು. ಅಭಯ್ ಪಾಟೀಲ್ ಎನ್ನುವ ಬಿಜೆಪಿ ಶಾಸಕರೇ ಅರ್ಜಿಗಳನ್ನು ಮಾನ್ಯ ಮಾಡುವಂತೆ BLO ಗಳಿಗೆ ಪತ್ರ ಬರೆದಿದ್ದೂ ಬಯಲಾಯಿತು. ಹೀಗೆ 50 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಿಎಂ ಡಿಕೆಶಿ ಯವರು ಹೇಳಿದರೆ, 25 ಸಾವಿರ ಅರ್ಜಿಗಳು ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳುತ್ತಿದ್ದಾರೆ.

ಈ ಫಾರಂ 7 ಮತಗಳ್ಳತನದ ಹಗರಣ ಹೊರಗೆ ಬರುತ್ತಿದ್ದಂತೆ “ಸುಳ್ಳು ಅರ್ಜಿ ಸಲ್ಲಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ” ಎಂದು ಬಿಜೆಪಿ ಅಧ್ಯಕ್ಷರಾದಿಯಾಗಿ ನಾಯಕರು ಹೇಳಬಹುದಾಗಿತ್ತು. ಆದರೆ ಇವರೆಲ್ಲರೂ ಕಳ್ಳ ಅರ್ಜಿ ಸಲ್ಲಿಸಿದವರ ಸಮರ್ಥನೆಗೆ ಇಳಿದರೆ.‌ “ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಫಾರಂ 7 ಅರ್ಜಿ ಸಲ್ಲಿಸುವುದು ನಮ್ಮ ಹಕ್ಕು” ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರರವರೇ ಬಹಿರಂಗ ಹೇಳಿಕೆ ಕೊಟ್ಟು ಬಿಜೆಪಿ ಕಾರ್ಯಕರ್ತರ ಕುಕೃತ್ಯವನ್ನು ಸಮರ್ಥಿಸಿಕೊಂಡರು. ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ FIR ಹಾಕಲಾಗುತ್ತಿದೆ” ಎಂದು ಅರ್.ಅಶೋಕ್ ಗುಡುಗಿದರು. “ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದು ಹಾಗೂ ಕಿರುಕುಳ ನೀಡುವುದು ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು” ಎಂದು ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.

ರಾಜ್ಯ ಬಿಜೆಪಿ ನಾಯಕರೆಲ್ಲಾ ಸೇರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಸಲಿಂ ರವರಿಗೆ “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟಿದೆ, ಯಾವುದೇ ಕಾರಣಕ್ಕೂ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಆಗಬಾರದು. ಅವರನ್ನು ಬಂಧಿಸುವುದು, ಕಿರುಕುಳ ಕೊಡುವುದು, ಹಲ್ಲೆ ಮಾಡುವುದನ್ನು ಮಾಡಬಾರದು” ಎಂದು ಮನವಿ ಮಾಡಿಕೊಂಡು ಮಹಾನಿರ್ದೇಶಕರ ಕಚೇರಿ ಮುಂದೆ ದರಣಿಯನ್ನೂ ಮಾಡಿದರು.

ತಪ್ಪು ಮಾಡಿದವರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಬಾರದು? ಬಿಜೆಪಿ ಕಾರ್ಯಕರ್ತ ಅಂದರೆ ಅವರು ಕಾನೂನನ್ನು ಮೀರಿದವರಾ? SIR ಫಾರಂ ದುರ್ಬಳಕೆ ಮಾಡಿಕೊಂಡಿದ್ದು ಅಪರಾಧ ಅಲ್ವಾ? ಅಂತಹ ಗುರುತರ ಅಪರಾಧ ಮಾಡಿದವರನ್ನು ಸಮರ್ಥಿಸಿಕೊಳ್ಳುವುದೂ ಅಪರಾಧ ಅಲ್ವಾ? ತಪ್ಪುತಸ್ತರು ಬಿಜೆಪಿಗರು ಎನ್ನುವ ಕಾರಣಕ್ಕೆ ಬಂಧಿಸಬಾರದು ಎಂದರೆ ಈ ದೇಶದಲ್ಲಿ ಬಿಜೆಪಿಗರಿಗೊಂದು ಹಾಗೂ ಇತರರಿಗೊಂದು ಕಾನೂನು ಇದೆಯಾ?

ಫಾರಂ 7 ದುರ್ಬಳಿಕೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತರನ್ನು ಕಾನೂನು ಕುಣಿಕೆಯಿಂದ ಬಚಾವ್ ಮಾಡಲು ಬಿಜೆಪಿ ನಾಯಕರು ಹೋರಾಟ ಹಾರಾಟದ ಬೆದರಿಕೆ ಒಡ್ಡಲು ಕಾರಣಗಳಾದರೂ ಯಾವವು? ಬಿಜೆಪಿ ನಾಯಕರಿಗೆ ಈಗ ಅತೀವ ಆತಂಕ ಕಾಡುತ್ತಿದೆ. ಯಾಕೆಂದರೆ ಫಾರಂ 7 ನ್ನು ಪೂರ್ವ ಮುದ್ರಿತ ಮಾಡಿಸಿ ಕಾರ್ಯಕರ್ತರಿಗೆ ಕೊಟ್ಟು ಸಹಿ ಮಾಡಿಸಿದ್ದೇ ಈ ಬಿಜೆಪಿ ಕಚೇರಿ. ಈಗ ಸರಿಯಾಗಿ ವಿಚಾರಣೆ ಮಾಡಿದರೆ ಬಿಜೆಪಿ ಕಚೇರಿಯ ಹಾಗೂ ನಾಯಕರುಗಳ ಬಣ್ಣ ಬಯಲಾಗುತ್ತದೆ. ಯಾರು ಫಾರಂ 7 ಮೇಲೆ ಮತಪಟ್ಟಿಯಿಂದ ಅಳಿಸಲಾಗುವವರ ಹೆಸರನ್ನು ಮುದ್ರಣ ಮಾಡಿಸಿದ್ದು, ಎಲ್ಲಿ ಮುದ್ರಣ ಮಾಡಿಸಲಾಯ್ತು? ಯಾವ ಯಾವ ಬೂತ್ ಕ್ಷೇತ್ರಗಳಲ್ಲಿ ಹೇಗೆ ಕಾರ್ಯಕರ್ತರಿಗೆ ವಿತರಿಸಲಾಯ್ತು. ಈ ಅಪರಾಧ ಕೃತ್ಯದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಹೇಗೆ ದಾರಿ ತಪ್ಪಿಸಿ ಸಹಿ ಮಾಡಿಸಿಕೊಳ್ಳಲಾಯ್ತು. ಯಾವ್ಯಾವ BLO ಹಾಗೂ ERO ಗಳ ಮೇಲೆ ಒತ್ತಡ ಹೇರಲಾಯ್ತು? ಎನ್ನುವುದನ್ನೆಲ್ಲಾ ಸರಿಯಾದ ರೀತಿಯಲ್ಲಿ ತನಿಖೆ ಮಾಡಿದರೆ ಅದು ಬಿಜೆಪಿ ಪಕ್ಷದ ಬಾಗಿಲಿಗೆ ಬಂದು ನಿಲ್ಲುತ್ತದೆ. ಈಗ ತಪ್ಪಿತಸ್ತ ಕಾರ್ಯಕರ್ತರ ಸಮರ್ಥನೆಗಿಳಿದ ನಾಯಕರೆಲ್ಲಾ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. SIR ಹೆಸರಲ್ಲಿ ಬಿಜೆಪಿ ಕರ್ನಾಟಕದಲ್ಲಿ ಮಾಡುತ್ತಿರುವ ಹಾಗೂ ಬೇರೆ ರಾಜ್ಯಗಳಲ್ಲಿ ಮಾಡಲಾದ ಅಕ್ರಮಗಳೆಲ್ಲಾ ಬಯಲಾಗುತ್ತವೆ. ಮೊದಲೇ ದೇಶಾದ್ಯಂತ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಜನಹೋರಾಟಗಳು ತೀವ್ರಗೊಂಡಿವೆ. ಬಿಜೆಪಿ ಕರ್ನಾಟಕದಲ್ಲಿ ಮಾಡಿದ ಫಾರಂ 7 ಅಕ್ರಮ ಹಾಗೂ ಅದರಲ್ಲಿ ಬಿಜೆಪಿ ನಾಯಕರ ಭಾಗಿದಾರಿಕೆ ಬಟಾಬಯಲಾದರೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸಂಕಷ್ಟಕ್ಕೆ ಸಿಲುಕುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಕರ್ನಾಟಕದ ಬಿಜೆಪಿ ನಾಯಕರು ತನ್ನ ತಪ್ಪಿತಸ್ತ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳದಂತೆ ಪೊಲೀಸ್ ಕಮಿಷನರ್ ಮೇಲೆ ಒತ್ತಡ ಹೇರುತ್ತಿದೆ.

ಅನುಮಾನಾಸ್ಪದ ವ್ಯಕ್ತಿಗಳೆಂದು ಸುಳ್ಳು ಮಾಹಿತಿ ಬರೆದು ಫಾರಂ 7 ಸಲ್ಲಿಸಿದವರ ಮೇಲೆ ಸಂತ್ರಸ್ತರು ದೂರು ಕೊಡಬೇಕಿದೆ. ಸುಳ್ಳು ಅರ್ಜಿ ಸಲ್ಲಿಸಿದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಈ ಶಡ್ಯಂತ್ರದ ಹಿಂದಿರುವ ಕೈಗಳಿಗೆ ಕೊಳ ಹಾಕಬೇಕಿದೆ. ಯಾಕೆಂದರೆ ಇದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ಅರ್ಹ ಮತದಾರರನ್ನು ಸುಳ್ಳು ಅರ್ಜಿ ಮೂಲಕ ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದು ದೇಶದ್ರೋಹ. ಚುನಾವಣಾ ಆಯೋಗದ ಜೊತೆಗೆ ಶಾಮೀಲಾಗಿ ಇಂತಹ ದೇಶದ್ರೋಹವನ್ನು ಅವ್ಯಾಹತವಾಗಿ ಮಾಡಿದ್ದರಿಂದಲೇ ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು. ದಕ್ಷಿಣ ಭಾರತದಲ್ಲಿ ಗಟ್ಟಿ ನೆಲೆ ಇಲ್ಲದ ಬಿಜೆಪಿ ಕರ್ನಾಟಕದ ಮೂಲಕ ಬೇರು ಬಿಡಲು ಈ ರೀತಿ ಅಕ್ರಮ ಅನೈತಿಕ ಅಡ್ಡದಾರಿಗಳನ್ನು ಬಳಸುತ್ತಿದೆ.

ಮತಗಳ್ಳತನದ ಅಕ್ರಮ ಮಾಡಿದವರು ಹಾಗೂ ಅವರ ಹಿಂದಿರುವವರ ಮೇಲೆ ಚುನಾವಣಾ ಆಯೋಗದ ಆಯುಕ್ತರು ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಕರ್ನಾಟಕ ರಾಜ್ಯ ಸರಕಾರದ ನಿಲುವು. ಬಿಜೆಪಿ ಪಕ್ಷಪಾತಿಯಾಗಿರುವ ಚುನಾವಣಾ ಆಯೋಗದಿಂದ ತೀವ್ರತರವಾದ ವಿಚಾರಣೆ ತನಿಖೆ ಬಂಧನ ಅಸಾಧ್ಯವಾದ ಮಾತು.

ಬಿಜೆಪಿ ಪಕ್ಷದ ಮತಗಳ್ಳತನವನ್ನು ಬಯಲಿಗೆಳೆದು ಅದರ ನಾಯಕರ ಹುನ್ನಾರವನ್ಜು ಬಯಲಿಗೆಳೆದು ಬಂಧಿಸಲು ಕಾಂಗ್ರೆಸ್ ಪಕ್ಷದ ಸರಕಾರಕ್ಕೆ ಇದು ಸುವರ್ಣಾವಕಾಶ. ಆದರೆ ಮುಖ್ಯಮಂತ್ರಿಗಳು “ರಾಜ್ಯ ಸರಕಾರದಿಂದ ಸಧ್ಯಕ್ಕೆ ಪ್ರತ್ಯೇಕ ತನಿಖೆ ಇಲ್ಲಾ” ಎಂದಿದ್ದಾರೆ. ಈಗಲ್ಲದೇ ಇನ್ಯಾವಾಗ ತನಿಖೆ ಮಾಡಿಸುತ್ತಾರೆ? ಬಿಜೆಪಿಯ ಹೋರಾಟದ ಬ್ಲಾಕ್ ಮೇಲ್ ತಂತ್ರಕ್ಕೆ ಡಿಕೆಶಿ ಯವರು ಹೆದರಿದರಾ? ಕೇಂದ್ರ ತನಿಖಾಸಂಸ್ಥೆಗಳು ಡಿಕೆಶಿ ಮೇಲಿನ ಹಗರಣಗಳ ಹಿಂದೆ ಬೀಳಬಹುದು ಎಂಬ ಆತಂಕವಾ?

ಇಲ್ಲಿವರೆಗೂ ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಿದ ಉದಾಹರಣೆಗಳೇ ಇಲ್ಲ. 2023 ರಲ್ಲಿ ಆಳಂದದಲ್ಲಿ ಮತಗಳ್ಳತನ ಮಾಡಿದ್ದಕ್ಕೆ ಬೇಕಾದಷ್ಟು ಸಾಕ್ಷಿ ಪುರಾವೆಗಳಿದ್ದರೂ ಯಾರ ಮೇಲೂ ಕ್ರಮವನ್ನು ಆಯೋಗ ತೆಗೆದುಕೊಳ್ಳಲಿಲ್ಲ. ಈಗಲೂ ಹಾಗೆಯೇ ಆಗುವುದರಲ್ಲಿ ಸಂದೇಹವಿಲ್ಲ.

ಹೀಗಾಗಿ ಮುಖ್ಯ ಮಂತ್ರಿಗಳು ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾಯದೇ ಬಿಜೆಪಿಯ ಅಕ್ರಮ ಕಾರ್ಯಾಚರಣೆ ವಿರುದ್ದ ಸ್ವತಂತ್ರ ತನಿಖೆಯನ್ನು ತೀವ್ರಗೊಳಿಸಬೇಕಿದೆ. ತಪ್ಪಿತಸ್ತರು ಮತ್ತು ಅವರ ಹಿಂದಿರುವವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕಿದೆ. ಹೀಗಾದಾಗ ಮಾತ್ರ ಬಿಜೆಪಿ ಕಾರ್ಯಕರ್ತರಲ್ಲಿ ಕಾನೂನಿನ ಭಯ ಮೂಡುತ್ತದೆ. ಇಲ್ಲದೇ ಹೋದರೆ ಬಿಜೆಪಿ ನಾಯಕರುಗಳ ಬೆಂಬಲವಿದ್ದಾಗ ಕಾನೂನು ನಮಗೇನೂ ಮಾಡಲಾರದು ಎನ್ನುವ ಅಭಯ ಸಿಕ್ಕಿದರೆ ಮತ್ತೆ ಮತ್ತೆ ಇಂತಹ ಕಾನೂನು ವಿರೋಧಿ ಕೃತ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸುತ್ತಲೇ ಇರುತ್ತಾರೆ. ಬೇರೆ ಬೇರೆ ಆಯಾಮಗಳಲ್ಲಿ ಮತಗಳ್ಳತನ ನಡೆಯುತ್ತಲೇ ಇರುತ್ತದೆ. ಈ ದೇಶದ ಚುನಾವಣಾ ವ್ಯವಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ. ಈಗಲೂ ಸರಕಾರ ಅಕ್ರಮಕೋರರ ವಿರುದ್ದ ಕ್ರಮ ಕೈಗೊಳ್ಳದೇ ಸುಮ್ಮನಿದ್ದರೆ ಅದು ಬಿಜೆಪಿ ಗೆಲುವಿಗೆ ದಾರಿಯಾಗುತ್ತದೆ, ಕಾಂಗ್ರೆಸ್ ಸೋಲಿಗೆ ಕಾರಣವಾಗುತ್ತದೆ. ಈ ದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಎನ್ನುವುದು ಕನಸಿನ ಮಾತಾಗುತ್ತವೆ.

You cannot copy content of this page

Exit mobile version