Home ರಾಜಕೀಯ ಮೋದಿ ಭಾರತವನ್ನು ಅಮೇರಿಕಾಕ್ಕೆ ಮಾರಿಬಿಟ್ಟಿದ್ದಾರೆ: ರಾಹುಲ್ ಗಾಂಧಿ ಕಿಡಿ

ಮೋದಿ ಭಾರತವನ್ನು ಅಮೇರಿಕಾಕ್ಕೆ ಮಾರಿಬಿಟ್ಟಿದ್ದಾರೆ: ರಾಹುಲ್ ಗಾಂಧಿ ಕಿಡಿ

0

ಪ್ರಧಾನಿ ಮೋದಿ ಅವರು ಭಾರತವನ್ನು ಮಾರಾಟ ಮಾಡಿದ್ದಾರೆ ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವು ಅಪಾಯಕಾರಿ ಹಂತವನ್ನು ಪ್ರವೇಶಿಸುತ್ತಿದೆ ಮತ್ತು ದೇಶದ ವ್ಯೂಹಾತ್ಮಕ ಹಾಗೂ ಆರ್ಥಿಕ ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು. ಆರ್ಥಿಕ ಸಮೀಕ್ಷೆಯ ಬಗ್ಗೆ ಪ್ರಸ್ತಾಪಿಸುತ್ತಾ, ವಿಶ್ವ ಕ್ರಮವು ಅಮೆರಿಕದ ಆಧಿಪತ್ಯದ ಏಕಧ್ರುವ ವ್ಯವಸ್ಥೆಯಿಂದ ಚೀನಾ ಮತ್ತು ರಷ್ಯಾ ಸವಾಲು ಹಾಕುವ ಬಹುಧ್ರುವ ವ್ಯವಸ್ಥೆಯತ್ತ ಸಾಗುತ್ತಿದೆ ಎಂದರು. ಈ ಒಪ್ಪಂದವು ಇಂಧನ ಮತ್ತು ಆರ್ಥಿಕ ಕ್ಷೇತ್ರಗಳಿಗೆ ಹಾನಿ ಉಂಟುಮಾಡುತ್ತಿದೆ ಹಾಗೂ ಡಾಲರ್ ಆಧಿಪತ್ಯವು ಒತ್ತಡದಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೃತಕ ಬುದ್ಧಿಮತ್ತೆ (AI) ಅಂತರಾಷ್ಟ್ರೀಯ ಸ್ಪರ್ಧೆಯ ಕೇಂದ್ರಬಿಂದುವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಎಐ ಭಾರತದ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಧಕ್ಕೆ ತರುತ್ತಿದೆ ಮತ್ತು ಇನ್ಫೋಸಿಸ್ ಹಾಗೂ ಇತರ ಕಂಪನಿಗಳಲ್ಲಿ ಹೆಚ್ಚಿನ ಸಂಖ್ಯೆಯ ಎಂಜಿನಿಯರ್‌ಗಳ ಉದ್ಯೋಗಕ್ಕೆ ಪರ್ಯಾಯವಾಗುತ್ತಿದೆ ಎಂದು ಎಚ್ಚರಿಸಿದರು. ಭಾರತದ ಶಕ್ತಿಯು ಅದರ 140 ಕೋಟಿ ಜನರು ಉತ್ಪಾದಿಸುವ ಡೇಟಾದಲ್ಲಿದೆ. ಡೇಟಾ ಮತ್ತು ಇಂಧನದ ಮೇಲೆ ನಿಯಂತ್ರಣವಿಲ್ಲದ ಎಐ ಬಗ್ಗೆ ಮಾತನಾಡುವುದು ಇಂಧನವಿಲ್ಲದ ದಹನಕಾರಿ ಇಂಜಿನ್ ಬಗ್ಗೆ ಮಾತನಾಡಿದಂತೆ ಎಂದು ಅವರು ಮಾರ್ಮಿಕವಾಗಿ ಹೇಳಿದರು. ಬಜೆಟ್ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳನ್ನು ಗುರುತಿಸಿದೆಯಾದರೂ, ಇಂಧನ ಭದ್ರತೆಯನ್ನು ಕಾಪಾಡಲು ಅಥವಾ ಆರ್ಥಿಕ ಸಂಪನ್ಮೂಲಗಳ ಮೇಲಾಗುವ ದಾಳಿಯನ್ನು ತಡೆಯಲು ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಹೊಂದಿಲ್ಲ ಎಂದು ಟೀಕಿಸಿದರು.

ಸುಂಕದ (Tariff) ಸರಾಸರಿ ದರಗಳು ಈ ಹಿಂದೆ ಶೇ. 3 ರಿಂದ ಈಗ ಶೇ. 18 ಕ್ಕೆ ಏರಿದೆ ಮತ್ತು ಅಮೆರಿಕದ ಸರಕುಗಳು ತಮಗೆ ಅನುಕೂಲಕರವಾದ ನಿಯಮಗಳೊಂದಿಗೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ ಎಂದು ಅವರು ಹೇಳಿದರು. ಭಾರತದಿಂದ ಅಮೆರಿಕಕ್ಕೆ ನಡೆಯುವ ರಫ್ತು 46 ಬಿಲಿಯನ್ ಡಾಲರ್‌ನಿಂದ 146 ಬಿಲಿಯನ್ ಡಾಲರ್‌ಗೆ ಹೆಚ್ಚಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಅಮೆರಿಕದಿಂದ ನಮಗೆ ತಕ್ಕುದಾದ ಬದ್ಧತೆ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು. ಹರಿಯಾಣ ಮತ್ತು ಗುರ್ಗಾಂವ್‌ನ ಕೈಗಾರಿಕೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸುಂಕದ ಬದಲಾವಣೆಗಳು ತಮ್ಮ ಉದ್ಯಮಗಳಿಗೆ ಹೇಗೆ ಹೊಡೆತ ನೀಡಲಿವೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ ಎಂದರು. ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಅಮೆರಿಕದ ಕೃಷಿ ಉತ್ಪನ್ನಗಳು ಜೋಳ, ಸೋಯಾಬೀನ್ ಮತ್ತು ಹತ್ತಿ ಬೆಳೆಯುವ ಭಾರತೀಯ ರೈತರಿಗೆ ನಷ್ಟ ಉಂಟುಮಾಡಲಿವೆ ಎಂದು ಹೇಳಿದರು.

ಪ್ರಧಾನಿ ಮೋದಿ ಭಾರತವನ್ನು ಮಾರಾಟ ಮಾಡಿದ್ದಾರೆ ಮತ್ತು ಭಾರತಾಂಬೆಯನ್ನು ನೀವು ಮಾರಿದ್ದೀರಿ ಎಂದು ಅವರು ಆಕ್ರೋಶ ಹೊರಹಾಕಿದರು. ಸಾಮಾನ್ಯ ಸಂದರ್ಭದಲ್ಲಿ ಪ್ರಧಾನಿ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ, ಆದರೆ ಒತ್ತಡಕ್ಕೆ ಮಣಿದು ಈ ರೀತಿ ಮಾಡಿದ್ದಾರೆ. ಅವರ ಕಣ್ಣಲ್ಲಿ ಈಗ ಭಯ ಕಾಣುತ್ತಿದೆ ಎಂದು ಹೇಳಿದ ರಾಹುಲ್ ಗಾಂಧಿ, ಅಮೆರಿಕದ ತನಿಖಾ ಕಡತಗಳಲ್ಲಿ ಕೆಲವು ಭಾರತೀಯರ ಹೆಸರಿರುವ ‘ಎಪ್‌ಸ್ಟೀನ್ ಫೈಲ್ಸ್’ ಕುರಿತು ಪ್ರಸ್ತಾಪಿಸಿದರು.

You cannot copy content of this page

Exit mobile version