ದಾವಣಗೆರೆ: ಪರಿಸರ ಪ್ರೇಮಿ, ಸಾಲು ಮರದ ವೀರಾಚಾರಿ ಎಂದೇ ಖ್ಯಾತಿ ಪಡೆದಿದ್ದ ರಾಜ್ಯ ಪ್ರಶಸ್ತಿ ವಿಜೇತ ಮಿಟ್ಲಕಟ್ಟೆ ವೀರಾಚಾರಿ ಅವರು ಕಳೆದ ಮಧ್ಯರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕ ಜನರಿಗೆ ವಿತರಿಸುವ ಅಕ್ಕಿಯ ವಿಚಾರದಲ್ಲಿ ಅಕ್ರಮ ನಡೆಸುತ್ತಿದ್ದಾರೆ ಎಂದು ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಈ ಹಿನ್ನಲೆ ನ್ಯಾಯ ಸಿಗದ ಕಾರಣ ಮನನೊಂದು ವೀರಾಚಾರಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾಹಿತಿ ಪ್ರಕಾರ ಸೋಮವಾರ(ನಿನ್ನೆ) ರಾತ್ರಿ ಈ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯಬೆಲೆ ಅಂಗಡಿ ರದ್ದು ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಜನರಿಗೆ ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಅಕ್ರಮ ವಿರುದ್ಧದ ಹೋರಾಟದಲ್ಲಿ ನ್ಯಾಯ ಸಿಗದ ಕಾರಣ ತಮ್ಮ ಮಾತಿನಂತೆ ತಡರಾತ್ರಿ 2 ಗಂಟೆಯ ಸುಮಾರು ನೇಣುಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನಲೆ ಮಿಟ್ಲಕಟ್ಟೆ ಗ್ರಾಮದ ಜನರು ಯಾರು ಕೂಡ ಊರಿಗೆ ಬರದಂತೆ ರಸ್ತೆಗಳನ್ನು ಬಂದ್ ಮಾಡಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾಧಿಕಾರಿ ಆಹಾರ ಇಲಾಖೆ ಅಧಿಕಾರಿಗಳು ಬರುವರೆಗೂ ಶವವನ್ನು ಕುಣಿಕೆಯಿಂದ ಕೆಳಗಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದು, ಸಾವಿಗೆ ಸ್ಪಷ್ಟ ಕಾರಣ ತನಿಖೆಯಿಂದ ತಿಳಿಯಬೇಕಿದೆ ಎಂದು ಆಗ್ರಹಿಸಿದ್ದಾರೆ.