ವಿವಾದಿತ ಕೋಗಿಲು ಲೇಔಟ್‌ನ ನಿರಾಶ್ರಿತರಿಗೆ ಸರ್ಕಾರಿ ಮನೆ ಮಂಜೂರು ಮಾಡುವ ಸಂಬಂಧ ಕಂದಾಯ ಸಚಿವ ಶ್ರೀ ಕೃಷ್ಣ ಬೈರೇಗೌಡ ಹಾಗೂ ವಸತಿ ಸಚಿವ ಶ್ರೀ ಜಮೀರ್ ಅಹಮದ್ ಅವರ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಸಚಿವರು, ಸರ್ಕಾರಿ ಜಮೀನಿನಲ್ಲಿ ಹಣ ನೀಡಿ ಒತ್ತುವರಿ ಮಾಡಿಸುವ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲೆಮಾರಿಗಳಿಗೆ ಭೂ ಒತ್ತುವರಿ ಅಗತ್ಯವಿಲ್ಲ; ಆದರೆ ಸಂಘಟಿತವಾಗಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರಿ ಜಮೀನಿನಲ್ಲಿ ಶೆಡ್ ಅಥವಾ ಗುಡಿಸಲು ಹಾಕಿ?ದ ತಕ್ಷಣವೇ ಮನೆ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುವಂತಾಗುತ್ತದೆ. ಇದರಿಂದ ಸರ್ಕಾರಿ ಜಮೀನು ಒತ್ತುವರಿಗೆ ಪರೋಕ್ಷ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಅನೇಕ ಅರ್ಹ ಬಡವರು ಸರ್ಕಾರಿ ಮನೆಗಾಗಿ ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವ ಸಂದರ್ಭದಲ್ಲಿ, ಏಕಾಏಕಿ ಒತ್ತುವರಿದಾರರಿಗೆ ಮನೆ ನೀಡುವುದು ಸರಿಯಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಆದರೂ, ಕೋಗಿಲು ಕ್ರಾಸ್ ಪ್ರಕರಣದಲ್ಲಿ ನಿಜವಾದ ಬಡವರಿಗೆ ಮಾನವೀಯತೆಯ ಆಧಾರದಲ್ಲಿ ಮನೆ ನೀಡಬೇಕೆಂಬ ಅಗತ್ಯವಿದೆ. ಆದರೆ ಈ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬದ್ಧವಾಗಿಯೇ ನಡೆಯಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ, ಗುಡಿಸಲು ಹಾಕಿರುವವರು ಎಲ್ಲಿಂದ ಬಂದಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಪ್ರಾಥಮಿಕ ಮಾಹಿತಿಯಂತೆ ಉತ್ತರ ಪ್ರದೇಶ ಹಾಗೂ ಬಿಹಾರದ ಐದಾರು ಕುಟುಂಬಗಳು ಕೋಗಿಲು ಲೇಔಟ್‌ನಲ್ಲಿ ಇರುವ ಸಾಧ್ಯತೆ ಇದೆ. ಆದರೆ ಅರ್ಹರಿಗೆ ಮಾತ್ರ ಮನೆ ನೀಡಬೇಕು ಎಂಬುದರ ಮೇಲೆ ಸಭೆ ಒತ್ತಾಯ ಹಾಕಿತು. ಕರ್ನಾಟಕದಿಂದ ಬೆಂಗಳೂರಿಗೆ ಬಂದು ನೆಲೆಸಿರುವವರಿಗೆ ಮೊದಲ ಆದ್ಯತೆ ನೀಡಬೇಕು. ಅಲ್ಲದೆ, ಕನ್ನಡಿಗರಾಗಿದ್ದು ಕೋಗಿಲು ಲೇಔಟ್‌ನಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿರುವವರನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ನಿರ್ಧರಿಸಲಾಯಿತು.
ಮಾತೃಭಾಷೆ ಬೇರೆ ಇದ್ದರೂ ತಲೆಮಾರಿನಿಂದ ಕರ್ನಾಟಕದಲ್ಲಿ ವಾಸವಾಗಿದ್ದು, ಬೆಂಗಳೂರಿಗೆ ವಲಸೆ ಬಂದವರಿಗೂ ಅವಕಾಶ ಕಲ್ಪಿಸಬೇಕು. ಆದರೆ ಅವರ ಮೂಲ ತಾಲೂಕು ಹಾಗೂ ಊರನ್ನು ದೃಢೀಕರಿಸಿ, ಅಲ್ಲಿನ ವಿಎ ಹಾಗೂ ದಫೇದಾರ್ ಮೂಲಕ ಪರಿಶೀಲನೆ ನಡೆಸಿದ ನಂತರವೇ ನಿರಾಶ್ರಿತರಿಗೆ ಮನೆ ಮಂಜೂರು ಮಾಡಬೇಕು ಎಂದು ಸೂಚನೆ ನೀಡಲಾಯಿತು. ವಸೀಂ ಕಾಲೋನಿಯಲ್ಲಿರುವವರು ಮಾತೃಭಾಷೆ ಬೇರೆ ಇದ್ದರೂ ಕರ್ನಾಟಕ ಮೂಲದವರಾಗಿದ್ದು, ರಾಜ್ಯದಲ್ಲೇ ನೆಲೆಸಿದ್ದರೆ ಅವರಿಗೆ ಮನೆ ನೀಡಬೇಕು ಎಂದು ಸಭೆ ನಿರ್ಧರಿಸಿದೆ.
“ಬಡವರು ಬಡವರೇ, ಭಾರತೀಯರು ಭಾರತೀಯರೆ. ಆದರೆ ಕನ್ನಡಿಗರಿಗೆ ಮೊದಲ ಆದ್ಯತೆ,” ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು. ಕರ್ನಾಟಕ ಮೂಲದವರಾಗಿದ್ದು ಕನ್ನಡಿಗರು ಅಲ್ಲದವರು ಐದು ವರ್ಷಗಳ ಕಾಲ ರಾಜ್ಯದಲ್ಲಿ ನೆಲೆಸಿದ್ದರೆ, ಅವರು ಸರ್ಕಾರದ ‘ಒಂದು ಲಕ್ಷ ಮನೆ’ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ ಮನೆ ಪಡೆಯಬೇಕು ಎಂದು ತಿಳಿಸಿದರು.
ಒಂದೇ ಕುಟುಂಬದಿಂದ ಮನೆಗಾಗಿ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಒಂದೇ ರೇಷನ್ ಕಾರ್ಡ್ ಆಧಾರದ ಮೇಲೆ ಒಂದೇ ಮನೆ ನೀಡಬೇಕು ಎಂದು ನಿರ್ಧರಿಸಲಾಯಿತು. ಹೊರ ರಾಜ್ಯದವರ ಪರಿಶೀಲನೆಗಾಗಿ ನೆಪವಿಟ್ಟು ಕನ್ನಡಿಗರಿಗೆ ಮನೆ ನೀಡುವ ಪ್ರಕ್ರಿಯೆ ವಿಳಂಬವಾಗಬಾರದು. ಅರ್ಹರಿಗೆ ಮೊದಲ ಹಂತದಲ್ಲೇ ಮನೆ ನೀಡುವ ಕಾರ್ಯ ಆರಂಭಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಪಕೀರ್ ಕಾಲೋನಿಯಲ್ಲಿ ಒಟ್ಟು 35 ಮನೆಗಳಿದ್ದು, ಬಹುಪಾಲು ಜನ ಅರ್ಹರಾಗಿದ್ದಾರೆ. ಈ ಪೈಕಿ ಗುರುವಾರದೊಳಗೆ 25ರಿಂದ 30 ಜನರಿಗೆ ಮನೆ ಮಂಜೂರು ಮಾಡಬೇಕು. ಉಳಿದ ಅರ್ಹರಿಗೆ ಹಂತ ಹಂತವಾಗಿ ಮನೆ ನೀಡುವ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
