ಬೆಂಗಳೂರು : ರಾಜ್ಯದಲ್ಲಿ ಭೂ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣ (Digitalise) ಮಾಡಲಾಗುತ್ತಿದೆ. ಕಳೆದ ವರ್ಷ ಜನವರಿಯಲ್ಲಿ ಎಲ್ಲಾ ತಾಲೂಕು ಕಚೇರಿಗಳ ಮೂಲ ಭೂ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿತ್ತು. ಇದೀಗ ಉಪ ವಿಭಾಗಾಧಿಕಾರಿ (AC Office) ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ (DC Office) ದಾಖಲೆಗಳ ಸ್ಕ್ಯಾನಿಂಗ್ಗೂ ಇಂದಿನಿಂದ ಚಾಲನೆ ನೀಡಲಾಗಿದೆ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ತಿಳಿಸಿದರು.
ಬೆಂಗಳೂರು ಉತ್ತರ ಮತ್ತು ದಕ್ಷಿಣ ಉಪವಿಭಾಗಾಧಿಕಾರಿಗಳ ಕಚೇರಿಯ ಕಂದಾಯ ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಯನ್ನು ಬೆಂಗಳೂರು ಕಂದಾಯ ಭವನದಲ್ಲಿ ಇಂದು ಉದ್ಘಾಟಿಸಿ ಮಾತನಾಡಿದ ಅವರು, ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿಗಳು ಹಾಗೂ ಸುಳ್ಳು ದಾಖಲೆಗಳ ಸೃಷ್ಟಿಯನ್ನು ತಡೆಯುವ ಸಲುವಾಗಿ ಭೂ ದಾಖಲೆಗಳ ಡಿಜಿಟಲೀಕರಣ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕಂದಾಯ ಇಲಾಖೆ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಶಾಶ್ವತವಾಗಿ ಸಂರಕ್ಷಿಸಲಾಗುತ್ತಿದೆ. ಈ ಅಭಿಯಾನಕ್ಕೆ ಕಳೆದ ಜನವರಿಯಲ್ಲಿ ಚಾಲನೆ ನೀಡಲಾಗಿತ್ತು. ಇದೀಗ 240 ತಾಲೂಕುಗಳ ಪೈಕಿ 70 ತಾಲೂಕುಗಳಲ್ಲಿ ಗಣಕೀಕರಣ ಸಂಪೂರ್ಣವಾಗಿ ಮುಗಿಸಲಾಗಿದೆ. ರಾಜ್ಯಾದ್ಯಂತ 100 ಕೋಟಿ ಪುಟಗಳಷ್ಟು ಭೂ ದಾಖಲೆ ಇದ್ದು, 62 ಕೋಟಿ ಪುಟಗಳನ್ನು ಈಗಾಗಲೇ ಸ್ಕ್ಯಾನ್ ಮಾಡಿ ಮುಗಿಸಲಾಗಿದೆ. ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಎಲ್ಲಾ ಪುಟಗಳನ್ನೂ ಸಂಪೂರ್ಣ ಸ್ಕ್ಯಾನ್ ಮಾಡಲಾಗುವುದು ಎಂದರು.
ತಾಲೂಕು ಕಚೇರಿಗಳ ಮೂಲ ದಾಖಲೆ ಸ್ಕ್ಯಾನಿಂಗ್ ಪ್ರಗತಿಯ ಹಾದಿಯಲ್ಲಿರುವಾಗಲೇ ಭೂ ಸುರಕ್ಷಾ ಯೋಜನೆಯ ಅಡಿಯಲ್ಲಿ ಉಪ ವಿಭಾಗ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಮೂಲ ಭೂ ದಾಖಲೆಗಳನ್ನೂ ಸ್ಕ್ಯಾನ್ ಮಾಡುವ ಕೆಲಸಕ್ಕೂ ಮುಂದಾಗಿ ಈಗಾಗಲೇ ಕಳೆದ ತಿಂಗಳಿನಿಂದ ಕೆಲಸ ಆರಂಭಿಸಿದ್ದು, ಇಂದು ಎಸಿ ಕಚೇರಿಗಳ ಸ್ಕ್ಯಾನಿಂಗ್ ಗೆ ಸಾಂಕೇತಿಕವಾಗಿ ಚಾಲನೆ ನೀಡುವ ಮೂಲಕ ಇಡೀ ರಾಜ್ಯಾದ್ಯಂತ ಎಸಿ ಡಿಸಿ ಕಚೇರಿಗಳ ಕಂದಾಯ ದಾಖಲೆಗಳ ಗಣಕೀಕರಣಕ್ಕೆ ಸಾಂಕೇತಿಕ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಹೊರ ಬಂದಿರುವ ನಕಲಿ ದಾಖಲೆಗಳ ಸೃಷ್ಟಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರತಿಯೊಂದು ಅನುಮಾನಾಸ್ಪದ ಪ್ರಕರಣಗಳನ್ನು ಕುಲಂಕೂಷವಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಿ ದಾಖಲೆಗಳ ನೈಜತೆ ಕುರಿತು ವರದಿಯನ್ನು ಪಡೆದು ಸೂಕ್ತ ಕ್ರಮ ವಹಿಸಲಾಗುವುದು ಎಂದರು
