ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ವಕ್ಫ್ (ತಿದ್ದುಪಡಿ) ಮಸೂದೆಗೆ ಸೋಮವಾರ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸಂಸತ್ತಿನ ಮುಂದೆ ವಿಧೇಯಕ ತರುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು
ಅವರು ಆರೋಪಿಸಿದ್ದಾರೆ. ಮಮತಾ ಅವರು ಇಂದು ಬಂಗಾಳ ವಿಧಾನಸಭೆಯಲ್ಲಿ ಮಸೂದೆಯನ್ನು ವಿರೋಧಿಸಿ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದರು. ಈ ಮಸೂದೆ ಕುರಿತು ರಾಜ್ಯಗಳತ್ತ ಕೇಂದ್ರ ಗಮನಹರಿಸುತ್ತಿಲ್ಲ ಎಂದರು. ವಕ್ಫ್ ವಿಧೇಯಕಕ್ಕೆ ಸಂಬಂಧಿಸಿದಂತೆ ಕೇಂದ್ರ ತಮ್ಮನ್ನು ಸಂಪರ್ಕಿಸಿಲ್ಲ ಎಂದರು.
ಈ ಮಸೂದೆಗೆ ಸಂಬಂಧಿಸಿದಂತೆ ರಚಿಸಲಾದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಚರ್ಚೆಯಲ್ಲಿ ಬಿಜೆಪಿ ವಿರೋಧ ಪಕ್ಷದ ಸದಸ್ಯರನ್ನು ಮೌನವಾಗಿಸಿದೆ ಎಂದು ಟಿಎಂಸಿ ಮುಖ್ಯಸ್ಥರು ಆರೋಪಿಸಿದ್ದಾರೆ. ಜೆಪಿಸಿಯಲ್ಲಿ ವಿಪಕ್ಷ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ, ಅದಕ್ಕಾಗಿ ಬಹಿಷ್ಕಾರ ಹಾಕಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೇಂದ್ರವು ಮುಸ್ಲಿಮರನ್ನು ಪ್ರತ್ಯೇಕಿಸುವ ಮೂಲಕ ವಿಭಜಕ ಕಾರ್ಯಸೂಚಿಯನ್ನು ಮುಂದಿಡುತ್ತಿದೆ ಎಂದು ಅವರು ಆರೋಪಿಸಿದರು.
ಈ ವಕ್ಫ್ (ತಿದ್ದುಪಡಿ) ಮಸೂದೆಯ ಹೆಸರಿನಲ್ಲಿ ಒಂದೇ ಧರ್ಮವನ್ನು ಏಕೆ ಗುರಿಪಡಿಸುತ್ತಿದ್ದೀರಿ? ಮುಸ್ಲಿಮರನ್ನು ಏಕೆ ಗುರಿಯಾಗಿಸಲಾಗುತ್ತಿದೆ? ವಿವಿಧ ಹಿಂದೂ ದೇವಾಲಯ ಟ್ರಸ್ಟ್‌ಗಳು ಅಥವಾ ಚರ್ಚ್‌ಗಳ ಆಸ್ತಿಗಳ ವಿಷಯದಲ್ಲಿ ನೀವು ಅದೇ ರೀತಿ ಮಾಡಲು ಧೈರ್ಯ ಮಾಡುತ್ತೀರಾ? ಇದಕ್ಕೆ ನಿಮ್ಮಲ್ಲಿ ಉತ್ತರ ಇಲ್ಲ. ಆದರೆ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು ನಿಮ್ಮ ವಿಭಜಕ ಕಾರ್ಯಸೂಚಿಗೆ ಪುರಾವೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದರು. ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತ ಇಲ್ಲದಿರುವುದರಿಂದ ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಬಹುದೇ? ಎಂದು ಕೇಳಿದರು. ಬಾಂಗ್ಲಾದೇಶದ ಪರಿಸ್ಥಿತಿ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ನೆರೆಯ ದೇಶದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.