Tuesday, August 6, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಪಾದಯಾತ್ರೆಯಲ್ಲಿ ಯಡವಟ್ಟಿನ ಮೇಲೆ ಯಡವಟ್ಟು; ಯಾತ್ರೆಯುದ್ದಕ್ಕೂ ನೀರಸ ವಾತಾವರಣ

ಮುಡಾ ಹಗರಣ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಇಂದಿಗೆ ನಾಲ್ಕನೇ ದಿನ. ಪಾದಯಾತ್ರೆಯ ಶುರುವಿನಿಂದಲೂ ಒಂದಲ್ಲಾ ಒಂದು ಎಡರು ತೊಡರು ಕಾಣುತ್ತಲೆ ಬಂದಿದ್ದು, ಮೇಲ್ನೋಟಕ್ಕೆ ಸಿದ್ದರಾಮಯ್ಯ ಪದಚ್ಯುತಿಯ ಯಾತ್ರೆ ಇದು ಎಂದು ಹೇಳುತ್ತಿದ್ದರೂ ದಿನದಿಂದ ದಿನಕ್ಕೆ ಮೈತ್ರಿ ಧರ್ಮಕ್ಕೆ ಪೆಟ್ಟು ಬೀಳುತ್ತಿರುವುದು ಮಾತ್ರ ಸ್ಪಷ್ಟ.

ಜೆಡಿಎಸ್ ಮತ್ತು ಕಾಂಗ್ರೆಸ್‌ ಪಕ್ಷಗಳ ಪ್ರಾಬಲ್ಯ ಇರುವ ಹಳೆ ಮೈಸೂರು ಭಾಗದ ರಾಮನಗರ, ಮಂಡ್ಯ ಮತ್ತು ಮೈಸೂರಿನ ವರೆಗೂ ಪಾದಯಾತ್ರೆ ಬೆಳೆಸಲು ಹೊರಟ ಬಿಜೆಪಿ ಪಕ್ಷಕ್ಕೆ ಶುರುವಿನಲ್ಲೇ ತನ್ನ ಮೈತ್ರಿ ನಾಯಕ ಕೇಂದ್ರ ಮಂತ್ರಿ ಕುಮಾರಸ್ವಾಮಿಯೇ ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ನನ್ನ ಕ್ಷೇತ್ರದಲ್ಲೇ ಹಾದು ಹೋಗುವಾಗ ನನ್ನನ್ನೇ ವಿಶ್ವಾಸಕ್ಕೆ ತಗೆದುಕೊಂಡಿಲ್ಲ ಎಂಬ ತಗಾದೆ ತಗೆದು, ಬಿಜೆಪಿಯನ್ನು ಶುರುವಿನಲ್ಲೇ ಮುಜುಗರಕ್ಕೆ ಸಿಕ್ಕಿಸಿದ್ದು ಆ ಭಾಗದ ಜನರು ಮರೆತಿಲ್ಲ.

ಕುಮಾರಸ್ವಾಮಿಯಿಂದ ಸಿಪಿವೈ ಕಡೆಗಣನೆ :

ನಿನ್ನೆ, ಅಂದರೆ ಪಾದಯಾತ್ರೆಯ ಮೂರನೇ ದಿನ ಚನ್ನಪಟ್ಟಣದಲ್ಲೂ ಸಹ ಪಾದಯಾತ್ರೆಯಲ್ಲಿ ಯಡವಟ್ಟಿನ ಮೇಲೆ ಯಡವಟ್ಟು ಮಾಡಿಕೊಡ ಪಾದಯಾತ್ರೆ ನಾಯಕರು, ಸಿಪಿ ಯೋಗೇಶ್ವರ್ ಅವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಚನ್ನಪಟ್ಟಣದುದ್ದಕ್ಕೂ ಸಾಗಿದ ಪಾದಯಾತ್ರೆಯಲ್ಲಿ ಜೆಡಿಎಸ್ ನ ರಾಜ್ಯ ನಾಯಕರು ಬಿಟ್ಟರೆ ಸ್ಥಳೀಯರು ಯಾರೂ ಸಹ ಬಿಜೆಪಿ ಜೊತೆಗೆ ಹೆಜ್ಜೆ ಹಾಕಿಲ್ಲ ಎಂಬುದು ವಿಶೇಷ.

ಬಹುಶಃ ಇದೊಂದು ಬೆಳವಣಿಗೆ ಸಾಕು, ಮೈತ್ರಿ ಎಂಬುದು ಹೆಸರಿಗೆ ಮಾತ್ರ, ಎರಡೂ ಪಕ್ಷಗಳಲ್ಲಿನ ಒಳಬೇಗುದಿ ಸಧ್ಯದಲ್ಲೇ ಸ್ಪೋಟಗೊಳ್ಳುವುದು ಸ್ಪಷ್ಟ ಎಂದು. ಸಿಪಿ ಯೋಗೇಶ್ವರ್ ಗೆ ಇರುವ ಏಕಮಾತ್ರ ಕ್ಷೇತ್ರ ಚನ್ನಪಟ್ಟಣದಲ್ಲೇ ಮೈತ್ರಿ ಬಿರುಕು ಮೂಡಿದ್ದು, ದಾರಿಯುದ್ದಕ್ಕೂ ಕುಮಾರಸ್ವಾಮಿ ಪುತ್ರ ನಿಖಿಲ್ ನನ್ನೇ ಪಕ್ಷ ಹೈಲೈಟ್ ಮಾಡುತ್ತಾ ಬಂದಿದೆ. ಹೋದಲ್ಲಿ ಬಂದಲ್ಲಿ ಜನ ಇರುವ ಕಡೆಗಳಲ್ಲೆಲ್ಲ, ನಿಖಿಲ್ ಗೆ ಮೈಕ್ ಕೊಡುತ್ತಿರುವ ಕುಮಾರಸ್ವಾಮಿ ಯೋಗೇಶ್ವರ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.

ಇದೇ ಕಾರಣಕ್ಕೆ ಎರಡು ದಿನಗಳ ಕಾಲ ಪಾದಯಾತ್ರೆಯಲ್ಲಿ ಖಾಸಗಿ ಕಾರಣಕ್ಕಾಗಿ ಗೈರಾಗಿದ್ದ ಸಿಪಿ ಯೋಗೇಶ್ವರ್ ಸೋಮವಾರ ಪಾದಯಾತ್ರೆಯಲ್ಲಿ ಕಾಣಿಸಿಕೊಂಡರು. ಆದರೆ, ಕೇವಲ ಆರಂಭದಲ್ಲಿ ಮಾತ್ರ ಅವರು ಪಾದಯಾತ್ರೆಯಲ್ಲಿ ಕಾಣಿಸಿಕೊಂಡರು. ಆದರೆ ಬಳಿಕ ಅವರು ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವೇದಿಕೆಯಲ್ಲಿ ಕಾಣಿಸಿಕೊಂಡರೂ ಸಿಪಿ ಯೋಗೇಶ್ವರ್ ಅವರು ಮಾತ್ರ ವೇದಿಕೆಯಲ್ಲಿ ಇರಲಿಲ್ಲ.

ಮೈತ್ರಿ ಅಭ್ಯರ್ಥಿಯಾಗಿ ಸುಲಭ ಗೆಲುವಿನ ಆಸೆಯಲ್ಲಿದ್ದ ಯೋಗೇಶ್ವರ್ ಗೆ ಇದು ಅರಗಿಸಿಕೊಳ್ಳಲಾಗದ ಬೆಳವಣಿಗೆ ಎಂದರೂ ತಪ್ಪಿಲ್ಲ. ಈ ನಡುವೆ ಬಿಜೆಪಿ ಕೂಡ ಸದ್ದಿಲ್ಲದೇ ‘ಮೂಡಾ’ದಲ್ಲಿ ದೇವೇಗೌಡರ ಕುಟುಂಬಗಳ ಅಕ್ರಮಗಳ ಬಗ್ಗೆ ತೆರೆಮರೆಯಲ್ಲಿ ಪ್ರಸ್ತಾಪಿಸುತ್ತಾ ಬಂದಿದ್ದು, ಸರ್ಕಾರ ಯಾವ ಕ್ಷಣಕ್ಕಾದರೂ ದೇವೇಗೌಡರ ಕುಟುಂಬದ ಹಗರಣವೂ ಬಯಲಿಗೆ ಬರಲಿ ಎಂದೇ ಆಶಿಸುತ್ತಿದೆ.

ಬಿಜೆಪಿಯಿಂದಲೇ ದೊಡ್ಡ ಗೌಡರ ಅಕ್ರಮಗಳ ಪಟ್ಟಿ ಅನಾವರಣ :

ದೊಡ್ಡ ಗೌಡರ ಕುಟುಂಬ ಮೈಸೂರಿನಲ್ಲಿ ಎಷ್ಟು ಅಕ್ರಮವಾಗಿ ಸೈಟ್ ಹೊಡೆದಿದೆ ಎಂದು ಬಹಿರಂಗಪಡಿಸಿದ ಬಿಜೆಪಿ ಸುದ್ದಿ ಪತ್ರಿಕೆಯಲ್ಲಿ ಜಾಹೀರಾತು ನೀಡಿತ್ತು. ಇದೇ ಬಿಜೆಪಿ ಇಂದು ಜೆಡಿಎಸ್ ಜೊತೆಗೂಡಿ ಯಾತ್ರೆ ಮಾಡುವುದು ನಪಾಟಲಿನ ವಿಚಾರವಾಗಿ ಮಾರ್ಪಟ್ಟಿದೆ.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ 2007ರ ಸೆಪ್ಟೆಂಬರ್- ಅಕ್ಟೋಬರ್ ಎರಡೇ ತಿಂಗಳಿನಲ್ಲಿ ‘ಜಿ’ ಪ್ರವರ್ಗದಡಿಯಲ್ಲಿ ಮೈಸೂರು ನಗರ ಒಂದರಲ್ಲಿ ತನ್ನ ಆಪ್ತರಾಗಿದ್ದು, ಹಿತೈಷಿಗಳಿಗೆ 46 ನಿವೇಶನ ಹಂಚಿಕೆ ಮಾಡಿದ ಬಗ್ಗೆಯೂ ಬಿಜೆಪಿ ಮಾಡಿದ ಆರೋಪವಿದೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಪಕ್ಕ ಹಾಗೂ ರಿಂಗ್ ರೋಡ್ ಬಳಿ ಚಿನ್ನದಷ್ಟೇ ಬೆಲೆ ಬಾಳುವ 153 ಎಕರೆ ಭೂಮಿಯನ್ನು 2006- 2007ರಲ್ಲಿ ಡಿ-ನೋಟಿಫೈ ಮಾಡಿದ್ದಾರೆ. ಈ ಜಮೀನಿನ ಈಗಿನ ಬೆಲೆ ಸುಮಾರು 450 ಕೋಟಿ ರೂ. ಆಗಿದ್ದು ಇದನ್ನು ನೆರೆ ರಾಜ್ಯಗಳ ಮೂರು ಮಂದಿ ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಾಗಿ ಡಿ-ನೋಟಿಫೈ ಮಾಡಿದ್ದಾರೆ ಎಂಬ ಆರೋಪ ಸೇರಿದಂತೆ ಮೈಸೂರು ನಗರವೊಂದರಲ್ಲೇ 36 ನಿವೇಶನ ಹಂಚಿಕೆ- ಇದರಲ್ಲಿ 20 ನಿವೇಶನ ಕುಟುಂಬದ ಸದಸ್ಯರ ಪಾಲಿನ ಬಗ್ಗೆಯೂ ಬಿಜೆಪಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು. ಇವೆಲ್ಲವೂ ನೇರವಾಗಿ ಬಿಜೆಪಿಯೇ ದೇವೇಗೌಡರ ಕುಟುಂಬದ ಮೇಲೆ ಮಾಡಿರುವ ಆರೋಪವಾಗಿದೆ. ಇದನ್ನು ಕಾಂಗ್ರೆಸ್ ಪಕ್ಷ ತನ್ನ ಜನಾಂದೋಲನ ಕಾರ್ಯಕ್ರಮದುದ್ದಕ್ಕೂ ಬಿಜೆಪಿ ಜಾಹೀರಾತುಗಳನ್ನು ಪ್ರದರ್ಶನ ಮಾಡಿದೆ. ಈ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ಈ ವರೆಗೂ ತುಟಿ ಬಿಚ್ಚಿ ಉತ್ತರಿಸಿಲ್ಲ ಎಂಬುದು ವಿಶೇಷ.

ಪಾದಯಾತ್ರೆಯಲ್ಲಿ ‘ಶವಯಾತ್ರೆ ವಾಹನ’

ಇನ್ನು ಪಾದಯಾತ್ರೆ ಇಂದು ಚನ್ನಪಟ್ಟಣ ಭಾಗದಲ್ಲಿ ಸಾಗುತ್ತಿದ್ದು, ಸೋಮವಾರ ಪಾದಯಾತ್ರೆ ತಂಡ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಚನ್ನಪಟ್ಟಣದಲ್ಲಿ ಅಂತಿಮ ಯಾತ್ರೆ (ಶವಯಾತ್ರೆ) ಮಾಡುವ ವಾಹನವನ್ನು ಪಾದಯಾತ್ರೆಯ ಪ್ರಚಾರಕ್ಕೆ ಬಳಸಿಕೊಂಡಿದೆ. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಒಳಗಾಗಿದೆ. ಹಾಗೆಯೇ ಇದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಅಂತಿಮ ಯಾತ್ರೆ ಎಂದೂ ಟ್ರೋಲ್ ಗೆ ಒಳಗಾಗಿದೆ.

ಪಾದಯಾತ್ರೆ ನೇತೃತ್ವ ವಹಿಸಿದವರಿಗೆ ಶವಯಾತ್ರೆ ವಾಹನ ಬಳಸಿಕೊಳ್ಳದೆ ರುವಂತೆ ಒಂದು ಸಾಮಾನ್ಯ ಜ್ಞಾನ ಇಲ್ಲವೇ ಎಂಬ ಮಾತುಗಳೂ ಕೇಳಿ ಬಂದಿದ್ದು, ವಿರೋಧಿಗಳಿಗೆ ಇದೊಂದು ಬೆಳವಣಿಗೆ ಆಹಾರವಾಗಿ ಮಾರ್ಪಟ್ಟಿದೆ.

ಒಟ್ಟಾರೆ ಪಾದಯಾತ್ರೆ ಮುಗಿಯುವುದರ ಒಳಗೆ ಸರ್ಕಾರ ಬೀಳುತ್ತೋ ಇಲ್ಲವೋ.. ಮೈತ್ರಿ ನಾಯಕರ ಕಚ್ಚಾಟ ಇನ್ನಷ್ಟು ಹೆಚ್ಚಾಗಬಹುದು. ಜೊತೆಗೆ ಯಾವ ಇಮೇಜ್ ಹೆಚ್ಚಿಸಿಕೊಳ್ಳುವ ಭರದಲ್ಲಿ ತಮ್ಮದೇ ವರ್ಚಸ್ಸು ಕುಗ್ಗುವುದರಲ್ಲಿ ಎರಡು ಮಾತಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page