ಹಂಪೆಯನಾಡಿನೊಳ್ – 1: ಹೊಸ ಅಧ್ಯಯನದ ಪ್ರವೇಶ

“..ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಭೌತಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ. ಇಂತಹ ಕೆಲವು ಸಂಗತಿಗಳ ಕೆಲವು ಟಿಪ್ಪಣಿಗಳನ್ನು ಈ ಅಂಕಣದಲ್ಲಿ ಮಂಡಿಸುವ ಪ್ರಯತ್ನ ಮಾಡಲಾಗುತ್ತದೆ..” ಇತಿಹಾಸಕಾರು, ಲೇಖಕರಾದ ಡಾ. ಜಾಜಿ ದೇವೇಂದ್ರಪ್ಪ ಅವರ ಬರಹದಲ್ಲಿ

ಭಾರತದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಚರಿತ್ರೆ ರಚನೆಯಾಗಲು ಬಹುಮುಖ್ಯವಾದ ಆಕರಗಳೆಂದರೆ ಶಾಸನಗಳು. ಕರ್ನಾಟಕ ಚರಿತ್ರೆ ಮತ್ತು ಸಾಂಸ್ಕೃತಿಕ ಇತಿಹಾಸದ ನುಡಿ ನಿರೂಪಣೆಯೂ ಹೊಸಹಾತೀಕರಣದ ಫಲ. ಬಿ.ಎಲ್.ರೈಸ್, ಇ.ಪಿ.ರೈಸ್. ಕರ್ನಲ್ ಮೆಕೆಂಝಿ ಮುಂತಾದ ಬ್ರಿಟಿಷ್ ಮಿಷನರಿಗಳು ಸೇರಿದಂತೆ ಹಲವರು ಸಂಗ್ರಹ ಮಾಡಿದ ಬಹುಸಂಖ್ಯೆಯ ಶಾಸನಗಳು ಮತ್ತು ಹಸ್ತಪ್ರತಿಗಳು ಕನ್ನಡ ನಾಡಿನ ಗತಕಾಲದ ಚಾರಿತ್ರಿಕ ಚಹರೆಯ ಮುಖ್ಯವಾದ ಸಾಮಗ್ರಿಗಳು. ಬ್ರಿಟಿಷ್ ವಸಾಹತುಶಾಹಿ ರಚನೆಗಳು ಪರಂಪರೆಯೊಂದಿಗೆ ಶಾಸನ ಮತ್ತು ಹಸ್ತಪ್ರತಿಗಳನ್ನು ಮುಖಾಮುಖಿ ಮಾಡಿದವು. ಆದರೂ ಮೊದಲ ಅಧ್ಯಯನದ ಈ ಘಟ್ಟ ಸಂಗ್ರಹ, ಸಂಪಾದನೆ, ವಿವರಣೆ ನೆಲೆಯಲ್ಲಿ ತನ್ನ ಚಹರೆಯನ್ನು ಗುರುತಿಸಿಕೊಂಡಿತು. ಈ ಚರಿತ್ರೆಕಾರರ ಮಾದರಿಯಲ್ಲಿ ನಮ್ಮ ದೇಸಿ ವಿದ್ವಾಂಸರು ಎರಡನೇ ಕಾಲಘಟ್ಟದಲ್ಲಿ ಆಕರಮುಖಿ ಅಧ್ಯಯನಕ್ಕೆ ತೆರೆದುಕೊಂಡರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಭೌತಿಕ ಅಹಂಕಾರಗಳು ನಮ್ಮ ನೆಲದ ನಿಜ ಚರಿತ್ರೆಯನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಂಡವು. ಇದರ ಮುಂದುವರಿಕೆಯಾಗಿ ಕನ್ನಡದ ಅಕ್ಷರ ಕಲಿತುಕೊಂಡ ಇಂಗ್ಲೀಷ್ ಶಿಕ್ಷಣ ಪಡೆದ ದೇಸಿ ವಿದ್ವಾಂಸರ ಪಡೆಯು ಸಾಮ್ರಾಜ್ಯಶಾಹಿ ಬೌದ್ಧಿಕ ರಾಜಕಾರಣದ ಜೊತೆ ಒಳರಾಜಿ ಮಾಡಿಕೊಂಡಂತೆ ಮೇಲ್‌ಚಹರೆಯ ಚರಿತ್ರೆಯ ಬರಹಕ್ಕೆ, ಇಲ್ಲವೇ ಧರ್ಮಾಧಾರಿತ ಚರಿತ್ರೆಯ ರಚನೆಗೆ ಮುಂದಾದರು. ಇದೊಂದು ಬಗೆಯಲ್ಲಿ ಒಂದು ಕೋಮಿನ ಚರಿತ್ರೆ, ಒಂದು ವರ್ಗದ ಚರಿತ್ರೆ ಆಗಿದ್ದುಕೊಂಡು ಸಂಸ್ಕೃತಿಯ ರೂಪದಂತೆ ನಮ್ಮೆದುರಿಗೆ ಕಾಣುತ್ತಿದೆ ಅಷ್ಟೇ.

ಕರ್ನಾಟಕದ ಶಾಸನ, ಹಸ್ತಪ್ರತಿ, ನಾಣ್ಯ ಮತ್ತು ಸ್ಮಾರಕಗಳ ಸಂಶೋಧನೆ ಅಧ್ಯಯನಗಳು ವಿಭಿನ್ನ ಆಯಾಮಗಳಲ್ಲಿ ನಡೆದಿಲ್ಲ. ಬಹುತೇಕ ಕೆಳ ಚಲನೆಯ ಸತ್ಯಗಳು ಗೈರುಹಾಜರಿಯಲ್ಲಿವೆ. ಶಾಸನದಂತಹ ರಾಜಶಾಹಿ ಕಾನೂನು ಬರಹದ ಒಳಗಡೆ ಸಂಸ್ಕೃತಿ ರೂಪಿಸುವ ಜನ ಸಮುದಾಯದ ಇತಿಹಾಸ ಇದೆಯೆಂಬುದು ಮುಖ್ಯ. ಸಬಾಲ್ಟನ್ ನೆಲೆಯಲ್ಲಿ ಕೇವಲ ಸಾಹಿತ್ಯದ ಅಧ್ಯಯನವಾಗಿದೆಯೇ ಹೊರತು ಚರಿತ್ರೆಯ ಅಧ್ಯಯನವು ಈಗತಾನೆ ಆರಂಭವಾಗಿದೆ ಅಷ್ಟೇ. ಆದರೆ ಇದು ತೋರುಂಬ ಲಾಭ. ತಳಸಮುದಾಯ ಮತ್ತು ಹಿಂದುಳಿದ ವರ್ಗಗಳ ಲೋಕದಿಂದ ಬಂದ ಬೌದ್ಧಿಕ ಜಗತ್ತು ಶಾಸನ, ನಾಣ್ಯ, ಹಸ್ತಪ್ರತಿಗಳ ಸಬಾಲ್ಟನ್ ಮಾದರಿಯ ಫಲಿತಗಳನ್ನು ನಿರೂಪಿಸಬೇಕಾದ ತುರ್ತು ಇದೆ. ಶಾಸನದಂತಹ ಶಾಸ್ತ್ರೀಯ ಭೌತಿಕ ಆಕರಗಳಿಗೆ ಅಂತರ್‌ಶಿಸ್ತೀಯ ನೆಲೆಯಿಂದ ಅವುಗಳ ಆಂತರಿಕ ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಕಟ್ಟಿಕೊಡಬೇಕು.

ವೀರಗಲ್ಲು, ಮಾಸ್ತಿಗಲ್ಲು, ನಿಸಧಿಗಲ್ಲುಗಳನ್ನು ನಮ್ಮ ಪರಂಪರೆಯ ಚರಿತ್ರೆಯ ಹೆಮ್ಮೆ ಎಂದು ಕಳೆದ ಶತಮಾನದುದ್ದಕ್ಕೂ ಚರಿತ್ರೆ ಬರೆದವರು ಆಖ್ಯಾನ ಮಾಡಿದ್ದಾರೆ. ವೀರ ಮರಣವಾದವರು ಯಾವ ಸಾಮುದಾಯಿಕ ಹಿನ್ನಲೆಯಿಂದ ಬಂದವರು? ಅವರ ನೆಲೆ- ಹಿನ್ನಲೆಗಳೇನು? ಪ್ರಭುತ್ವದ ರಚನೆಗೆ ಅವರ ಕೊಡುಗೆ ಏನು? ಹಾಗೂ ಪ್ರಭುತ್ವದಲ್ಲಿ ಅವರಿಗಿದ್ದ ಸ್ಥಾನಮಾನಗಳೇನು? ಎಂಬ ಸತ್ಯಗಳು ಪರದೆಯ ಹಿಂದೆ ಉಳಿದಿವೆ. ಒಂದು ಪ್ರಭುತ್ವದ ರಚನೆಗೆ ಕಾರಣರಾದ ಈ ವೀರರ ಹೊಸ ಚರಿತ್ರೆಯನ್ನು ಕಟ್ಟಬೇಕಿದೆ. ನಾಡಿನ ತುಂಬ ಕಾಣುವ ಮಾಸ್ತಿಗಲ್ಲುಗಳು ಒಂದು ದೇಶದ ಹೆಮ್ಮೆ ಆಗಬಲ್ಲುವೇ? ಅದೆಷ್ಟೋ ಮಹಿಳೆಯರ ಪ್ರಾಣಗಳು ಆಹುತಿಯಾದ ನೆಲೆಗಳನ್ನು ಮತ್ತೆ ಮತ್ತೆ ವರ್ತಮಾನದ ಸಂದರ್ಭದಲ್ಲಿಟ್ಟು “ರಿಚೆಕ್” ಮಾಡಬೇಕಿದೆ. ಧರ್ಮದ ಚೌಕಟ್ಟಿನೊಳಗಡೆ ನಿಸಧಿ ಮರಣ ಹೊಂದಿದ ಅಮಾಯಕ ಧರ್ಮ ಅನುಸರಣೆಕಾರರ ಹಿಂದಿರುವ ಪ್ರಲೋಭನೆಗಳನ್ನು ಈ ಕಾಲದಲ್ಲಿ ಅಧ್ಯಯನ ಮಾಡಬೇಕಿದೆ. ವಾಸ್ತವವಾಗಿ ಇಂತಹ ಸ್ಮಾರಕಗಳ ಆಂತರಿಕ ಕವಾಟದಲ್ಲಡಗಿದ ಶೋಷಣೆಯ ಸ್ವರೂಪವನ್ನು ಪ್ರತಿಪಾದಿಸಬೇಕಾಗಿದೆ. ಈ ನೆಲದಲ್ಲಿ ಶಾಸ್ತ್ರೀಯ (ಕ್ಲಾಸಿಕಲ್) ಆಗಿರಲು ಯಾವ ಆಕರಕ್ಕೆ ಸಾಧ್ಯವಿದೆ? ನಿಜವಾಗಿಯೂ ಅದು ಮೊದಲು ದೇಸಿ, ಜನಪದ, ಜನರೂಪಿತ. ಇಂತಹ ಸೈದ್ಧಾಂತಿಕ ಸಂಶ್ಲೇಷಣೆಯನ್ನು ನಮ್ಮ ಪಂಡಿತಮಾನ್ಯ ಚರಿತ್ರೆಕಾರರು ಗಮನಿಸಲೇ ಇಲ್ಲ. ಅಥವಾ ಮುಸುಕು ಹಾಕಿಟ್ಟಿರುವುದು ನಿಚ್ಛಳವಾಗಿದೆ. ಶಾಸನ ಇತ್ಯಾದಿ ಚರಿತ್ರೆಯ ಆಕರಗಳು ಎಡೆಪಡೆಯುವ ಹಿಂದಣ ಹುನ್ನಾರಗಳನ್ನು ಹೊಸಾಹತು ಮತ್ತು ವಸಾಹತೋತ್ತರ ಸಾಮಾಜಿಕ ಸಂದರ್ಭಗಳ ಜೊತೆ ಹಾಜರುಪಡಿಸಬೇಕಾಗುತ್ತದೆ. ಆಕರ ಸಾಮಗ್ರಿಗಳ ಆಂತರಿಕ ಆರ್ತನಾದದ ಕ್ಷೀಣ ಸ್ವರವನ್ನು ಎಲ್ಲರಿಗೂ ಕೇಳಿಸುವಂತೆ ಮಾಡಬೇಕಿದೆ. ಪ್ರಭುತ್ವಶಾಹಿ, ಪುರೋಹಿತಶಾಹಿಗಳ ಒಡಲಾಗಿವೆಯೆಂಬಂತೆ ತೋರುವ ಆಕರಗಳ ಒಳಗೆ ಈ ನೆಲದ ಮಕ್ಕಳ, ಶ್ರಮಜೀವಿಗಳ ಬಹುಧ್ವನಿಗಳು ಅಡಗಿವೆ. ಇಲ್ಲಿಯವರೆಗೂ ಚರಿತ್ರೆಯ ಅಧ್ಯಯನಗಳನ್ನು “ಯಜಮಾನ ಮಾದರಿ”ಯಲ್ಲಿ ತಂದಿಟ್ಟ ಪಳಯುಳಿಕೆಯನ್ನೆ ವಿಶ್ವವಿದ್ಯಾಲಯಗಳು ಸಂಶೊಧನೆಯ ವೈಧಾನಿಕತೆಯನ್ನಾಗಿ ಮಾಡಿಕೊಂಡ ದುರಂತವು ನಮ್ಮೆದುರಿಗಿದೆ. ವರ್ತಮಾನದ ಸಂದರ್ಭದಲ್ಲಿ ಪರ್ಯಾಯವಾಗಿ ಧರ್ಮ, ವರ್ಗ, ವರ್ಣ, ಲಿಂಗ ನಿಯಂತ್ರಣದಲ್ಲಿರುವ ಮೀಡಿಯಾ ಕಂಟ್ರೋಲ್‌ನ್ನು ಕಳಚಿಕೊಂಡು ಹೊಸರೂಪ ಧರಿಸಬೇಕಿದೆ.

ವಿಕಾಸ ನಾಗರೀಕತೆ ಸಂಸ್ಕೃತಿಯನ್ನು ಈ ನೆಲದಲ್ಲಿ ಕಟ್ಟಿದ ಸಮುದಾಯಗಳ ಪ್ರಾತಿನಿಧಿಕ ಆಕರ ಸಾಮಗ್ರಿಗಳು ಕರ್ನಾಟಕದ ಬೆಟ್ಟ-ಗುಡ್ಡಗಳಲ್ಲಿ ಹೇರಳವಾಗಿವೆ. ಇವು ಅಡವಿ ಮಕ್ಕಳ ಚರಿತ್ರೆಗಳಲ್ಲವೇ? ಜೊತೆಗೆ ಈ ಸಮುದಾಯಗಳು ರೂಪಿಸಿಕೊಂಡ ಭಾಷಿಕ ಸಂಕಥನವು ರೋಚಕವಾಗಿದೆ. ಭಾಷೆಯು ಕ್ಲಾಸಿಕಲ್ ಎಂದು ಶಾಸನಗಳ ಮುಖೇನ ಹೇಳುವಾಗಲೂ ಜನ ಭಾಷೆಯ ಸ್ವರೂಪವನ್ನು ಮುಖ್ಯವಾಗಿ ಗಮನಿಸಬೇಕು. ಶಾಸನೋಕ್ತ ವೃತ್ತಿಗಳ ಸಮಗ್ರ ಅಧ್ಯಯನ ಮಾಡುವುದಿರಲೀ ಪ್ರಾಸ್ತಾವಿಕ ಬರಹಗಳೂ ಧರ್ಮ ನಿಯಂತ್ರಣವಾದಿ ಚೌಕಟ್ಟಿನಲ್ಲಿ ಬಂಧಿಸಲ್ಪಟ್ಟಿವೆ. ಭಾಷೆಯನ್ನು ಕಾಪಿಟ್ಟುಕೊಂಡು ಬಂದ ಅಕ್ಷರೋದ್ಯಮದ ಸಂವಹನಗಳಾದ ಹಸ್ತಪ್ರತಿ, ನಾಣ್ಯ, ಶಾಸನಗಳ ಹಿಂದಿನ ಜನರ ಶ್ರಮದ ನೆಲೆಯನ್ನು ಬಿಡಿಸಬೇಕು. ಹಾಗೆಯೇ ದೇವಾಲಯ ಮತ್ತು ರಥಗಳ ಮಹತ್ತರ ನಿರ್ಮಾಣ, ಕರಕುಶಲಗಾರಿಕೆ ಅಜ್ಞಾತ ಇಂಜನಿಯರಿಂಗ್ ಕುರಿತ ಯಾವ ಪಾಠಗಳನ್ನು ನಾವು ಕಲಿತಿದ್ದೇವೆ? ಹಾಗೆಯೇ ಕನ್ನಡ ರಾಜಮನೆತನಗಳ ಚರಿತ್ರೆಯಲ್ಲಿಯೂ ಕುಲದ ಕಾರಣಕ್ಕಾಗಿ ಪ್ರಸಿದ್ಧ ದೊರೆಗಳು ಅವರ ಲೋಕೋಪಯೋಗಿ ಕೆಲಸಗಳು ಪಠ್ಯಗಳಲ್ಲಿ ಗೈರುಹಾಜರಾದ ಕೆಲ ಪ್ರಸಂಗಗಳಿವೆ. ಇವೆಲ್ಲಾ ದೊಡ್ಡ ಪ್ರಶ್ನೆಗಳು. ಭೂತ ಮತ್ತು ವರ್ತಮಾನದ ಸಂಬಂಧಗಳನ್ನು ಬೆಸೆಯುವ ತಳಸಮುದಾಯಗಳ ವೃತ್ತಿಪರತೆಯನ್ನು ಕಟ್ಟಿಕೊಡುವುದು ಸಾಕಷ್ಟಿದೆ. ನಮ್ಮ ಗತಕಾಲದ ಕೇಳು ಮತ್ತು ಹೇಳು ಪರಂಪರೆಯು ಶಾಸ್ತ್ರೀಯವಾದದ್ದು ಯಾವ ಸಂದರ್ಭದಲ್ಲಿ? ಎಂಬುದನ್ನು ಹುಡುಕಬೇಕು. ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನೀಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಅವರ ಭೌತಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ. ಇಂತಹ ಕೆಲವು ಸಂಗತಿಗಳ ಕೆಲವು ಟಿಪ್ಪಣಿಗಳನ್ನು ಈ ಅಂಕಣದಲ್ಲಿ ಮಂಡಿಸುವ ಪ್ರಯತ್ನ ಮಾಡಲಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು