Home ದೇಶ ಹಲವು ಕೇಂದ್ರ ಸಚಿವರು ನೇರವಾಗಿ ಉತ್ತರಿಸುತ್ತಿಲ್ಲ; ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ

ಹಲವು ಕೇಂದ್ರ ಸಚಿವರು ನೇರವಾಗಿ ಉತ್ತರಿಸುತ್ತಿಲ್ಲ; ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ

0

ದೆಹಲಿ: ಸಂಸದರು ಕೇಳುವ ಪ್ರಶ್ನೆಗಳಿಗೆ ಪ್ರಶ್ನೋತ್ತರ ಸಮಯದಲ್ಲಿ ಸರ್ಕಾರ ಉತ್ತರ ನೀಡುವುದು ಸಂಸದೀಯ ಪ್ರಜಾಪ್ರಭುತ್ವದ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಇತ್ತೀಚೆಗೆ ಕೇಂದ್ರದ ಮೋದಿ ಸರ್ಕಾರವು ಆ ಸಂಪ್ರದಾಯವನ್ನು ನಿರ್ಲಕ್ಷಿಸುತ್ತಿದೆ ಎಂದು ತೋರುತ್ತಿದೆ.

ಸಂಸದರು ಕೇಳುವ ಪ್ರಶ್ನೆಗಳಿಗೆ ಸಚಿವರು ನೇರ ಉತ್ತರಗಳನ್ನು ನೀಡದೆ, ಅಸಂಬದ್ಧ ಉತ್ತರಗಳನ್ನು ನೀಡುವುದು ಸಾಮಾನ್ಯವಾಗಿದೆ. ಪ್ರಮುಖ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ನೀಡದೆ, ಕೆಲ ಸಚಿವರು ಅಪೂರ್ಣ ವಿವರಗಳನ್ನು ನೀಡಿ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಪ್ರಶ್ನೆಗಳಂತೂ ಕಸದ ಬುಟ್ಟಿ ಸೇರುತ್ತಿವೆ ಎಂದು ಹಲವು ಸಂಸದರು ಆರೋಪಿಸಿದ್ದಾರೆ.

ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳಿಗೆ ‘ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್’ ಯೋಜನೆಯಡಿ ಕೇಂದ್ರ ಶಿಕ್ಷಣ ಸಚಿವಾಲಯವು 1,000 ಕೋಟಿ ರೂಪಾಯಿಗಳ ನಿಧಿ ಒದಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಈ ನಿಧಿಗಳನ್ನು ಬಳಸಿಕೊಂಡಿದೆಯೇ? ಬಳಸಿದ್ದರೆ, ಯಾವ ಕೆಲಸಗಳಿಗೆ ಬಳಸಲಾಗಿದೆ ಎಂಬುದರ ವಿವರಗಳನ್ನು ನೀಡಬೇಕೆಂದು ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ ಅವರು ಆಗಸ್ಟ್ 11ರಂದು ಲೋಕಸಭೆಯಲ್ಲಿ ಪ್ರಶ್ನಿಸಿದ್ದರು.

ಇದಕ್ಕೆ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್ ಅವರು ನೀಡಿದ ಉತ್ತರದಲ್ಲಿ, ಬಿಎಚ್‌ಯುಗೆ ನಿಧಿ ನೀಡಲಾಗಿದೆಯೇ ಅಥವಾ ಇಲ್ಲವೇ, ಹಾಗೂ ಅದನ್ನು ಯಾವ ಕೆಲಸಗಳಿಗೆ ಖರ್ಚು ಮಾಡಲಾಗಿದೆ ಎಂಬ ವಿವರಗಳನ್ನು ನೀಡದೆ, ಕೇವಲ ಆ ಯೋಜನೆಯ ಹಿನ್ನೆಲೆಯ ಬಗ್ಗೆ ಮಾತ್ರ ಹೇಳಿರುವುದು ಗಮನಾರ್ಹ. ಸಂಸದರು ಕೇಳುವ ಪ್ರಶ್ನೆಗಳಿಗೆ ಸಚಿವರು ಅಪೂರ್ಣ ಉತ್ತರಗಳನ್ನು ನೀಡುವುದು ರೂಢಿಯಾಗಿದೆ ಎಂದು ರಾಯ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಶ್ನೆಗಳ ತಿರಸ್ಕಾರ

ಸಿಪಿಐ ರಾಜ್ಯಸಭಾ ಸಂಸದ ಸಂತೋಷ್ ಕುಮಾರ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ‘ಆರ್‌ಎಸ್‌ಎಸ್‌ ಬಗ್ಗೆ ಸರ್ಕಾರದ ವ್ಯಾಖ್ಯಾನವೇನು ಮತ್ತು ಆ ಸಂಸ್ಥೆಯ ಚಟುವಟಿಕೆಗಳು ಯಾವುವು?’ ಎಂದು ಪ್ರಶ್ನಿಸಿದ್ದರು. ಇದು ಸಾಂಸ್ಕೃತಿಕ ಇಲಾಖೆಯ ವ್ಯಾಪ್ತಿಗೆ ಬರುವ ವಿಷಯ. ಆದರೂ, ಈ ಪ್ರಶ್ನೆಯನ್ನು ಸಂಸತ್ ವಿಭಾಗವು ತಿರಸ್ಕರಿಸಿದೆ.

ಸಿಪಿಎಂ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರು ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಎಷ್ಟು ಭಾರತೀಯ ನಾಗರಿಕರು ಮೃತಪಟ್ಟಿದ್ದಾರೆ?’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಯೂ ತಿರಸ್ಕೃತಗೊಂಡಿದೆ. ಅತ್ಯಂತ ಸಣ್ಣ ಕಾರಣಗಳನ್ನು ನೀಡಿ ತಮ್ಮ ಪ್ರಶ್ನೆಗಳನ್ನು ಸಂಸತ್ತು ಮತ್ತು ಸಂಬಂಧಪಟ್ಟ ಇಲಾಖೆಗಳು ತಿರಸ್ಕರಿಸುತ್ತಿವೆ ಎಂದು ಬ್ರಿಟ್ಟಾಸ್ ದೂರಿದ್ದಾರೆ.

‘2024ರ ಮಾರ್ಚ್ 31ರವರೆಗೆ ಕಳೆದ ಐದು ವರ್ಷಗಳಲ್ಲಿ, ಮತ್ತು 2024-25ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಫ್ಲೆಕ್ಸಿ ಫೇರ್, ತತ್ಕಾಲ್, ಪ್ರೀಮಿಯಂ ತತ್ಕಾಲ್, ಮತ್ತು ಟಿಕೆಟ್ ರದ್ದತಿಗಳ ಮೂಲಕ ರೈಲ್ವೆಗೆ ಎಷ್ಟು ಆದಾಯ ಬಂದಿದೆ?’ ಎಂದು ಬ್ರಿಟ್ಟಾಸ್ ಅವರು 2024ರ ಡಿಸೆಂಬರ್ 13ರಂದು ಸರ್ಕಾರಕ್ಕೆ ಪ್ರಶ್ನಿಸಿದ್ದರು.

ಇದಕ್ಕೆ ರೈಲ್ವೆ ಸಚಿವರು, ‘2018-19ರಿಂದ 2022-23ರ ಅವಧಿಯಲ್ಲಿ ಫ್ಲೆಕ್ಸಿ ಫೇರ್, ತತ್ಕಾಲ್, ಪ್ರೀಮಿಯಂ ತತ್ಕಾಲ್ ಮೂಲಕ ರೈಲ್ವೆಗೆ ಬಂದ ಆದಾಯವು ಪ್ರಯಾಣಿಕರ ಸೇವೆಗಳಿಂದ ಬಂದ ಒಟ್ಟು ಆದಾಯದ ಸುಮಾರು 5% ರಷ್ಟಿದೆ’ ಎಂದು ಉತ್ತರಿಸಿದ್ದಾರೆ. ಎಷ್ಟು ಆದಾಯ ಬಂದಿದೆ ಎಂಬ ನಿಖರವಾದ ಅಂಕಿ-ಅಂಶಗಳನ್ನು ಹೇಳದಿರುವುದು ವಿಚಿತ್ರ ಎಂದು ಬ್ರಿಟ್ಟಾಸ್ ಟೀಕಿಸಿದ್ದಾರೆ.

You cannot copy content of this page

Exit mobile version