ಬಿಸಿಯೂಟ ಯೋಜನೆ ಮೊಟ್ಟೆ ಖರೀದಿ ಸಬ್ಸಿಡಿ ಹೆಚ್ಚಳ – ಮಧು ಬಂಗಾರಪ್ಪ 

ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನೀಡಲಾಗುತ್ತಿರುವ ಮೊಟ್ಟೆಗಳ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಎಂಎಲ್‌ಸಿ ರಾಮೋಜಿಗೌಡ ಅವರು ಕೇಳಿದ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಉತ್ತರಿಸಿದರು.ಈ ಕುರಿತು ಶೀಘ್ರದಲ್ಲೇ ಹಣಕಾಸು ಇಲಾಖೆಯೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಸಬ್ಸಿಡಿ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಶಾಲಾ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆಗಳ ವೆಚ್ಚವನ್ನು ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಇದೇ ವೇಳೆ ಮೊಟ್ಟೆಗಳ ಮಾರುಕಟ್ಟೆ ದರ ಮತ್ತು ಸರ್ಕಾರ ನೀಡುತ್ತಿರುವ ಹಣದ ನಡುವೆ ಭಾರಿ ವ್ಯತ್ಯಾಸವಿದೆ ಎಂದು ರಾಮೋಜಿಗೌಡ ಅವರು ಸದನದ ಗಮನ ಸೆಳೆದರು.

ಪ್ರಸ್ತುತ ಪ್ರತಿ ವಿದ್ಯಾರ್ಥಿಗೆ ಒಂದು ಮೊಟ್ಟೆಗೆ ಸರ್ಕಾರ ರೂ.6 ಮಾತ್ರ ನೀಡುತ್ತಿದೆ. ಆದರೆ, ಕಳೆದ ಒಂದು ವರ್ಷದಿಂದ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ರೂ.8ಕ್ಕಿಂತ ಹೆಚ್ಚಾಗಿದೆ. ಸರ್ಕಾರ ಬಿಡುಗಡೆ ಮಾಡುವ ರೂ.6ರಲ್ಲಿ ಶಾಲಾ ಮಟ್ಟಕ್ಕೆ ಕೇವಲ ರೂ,5 ಮಾತ್ರ ತಲುಪುತ್ತಿದೆ. ಹೀಗಾಗಿ ಮೊಟ್ಟೆ ಖರೀದಿಸಲು ಶಿಕ್ಷಕರು ಮತ್ತು ಶಾಲಾ ಮೇಲ್ವಿಚಾರಣಾ ಸಮಿತಿಗಳು ತಮ್ಮ ಸ್ವಂತ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು