ಅಸಲಿ ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹುಲಿ ಉಗುರು ಧರಿಸಿರುವವರ ಬಗ್ಗೆ ಹೆಚ್ಚು ಸದ್ದು ಕೇಳಿ ಬರುತ್ತಿದೆ.
ವರ್ತೂರು ಸಂತೋಷ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ನಡುವೆ ಹುಲಿ ಉಗುರು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಂಚಿಕೊಂಡ ಒಬ್ಬೊಬ್ಬರನ್ನೇ ಹುಡುಕಿ ಅರಣ್ಯ ಇಲಾಖೆ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದ್ದು, ಈಗ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚರ್ಚೆ ಶುರುವಾಗಿದೆ.
ಈಗ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರ ಮೇಲೆ ಹುಲಿ ಉಗುರು ಧರಿಸಿರುವ ಆರೋಪ ಕೇಳಿಬಂದಿದೆ. ನಟ ಜಗ್ಗೇಶ್ ಕೂಡ ತಮ್ಮ ಕೊರಳಿನಲ್ಲಿ ಹುಲಿ ಉಗುರಿನ ಸರ ಹಾಕಿಕೊಂಡಿದ್ದಾರೆ. ಈ ಬಗ್ಗೆ ಖುದ್ದಾಗಿ ಸ್ವತಃ ಜಗ್ಗೇಶ್ ನ್ಯೂಸ್ ಪಸ್ಟ್ ಕನ್ನಡ ಎಂಬ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಹಲವರು, ವರ್ತೂರ್ ಸಂತೋಷ್ಗೆ ಒಂದು ನ್ಯಾಯ ಜಗ್ಗೇಶ್ ಗೆ ಒಂದು ನ್ಯಾಯ. ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಬಂಧನ ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ.
ಸಂದರ್ಶನದಲ್ಲಿ ನಟ ಜಗ್ಗೇಶ್ “ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಅಂತ ಹೇಳಿ ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು” ಎಂದಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಷ್ಟೆ ಅಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಗ, ಜೆಡಿಎಸ್ ಯೂತ್ ವಿಂಗ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮದುವೆ ಕಾರ್ಯಕ್ರಮದಲ್ಲಿ ಧರಿಸಿರುವ ಒಡವೆಯಲ್ಲೂ ಹುಲಿ ಉಗುರು ಪತ್ತೆಯಾಗಿದೆ. ಈ ಬಗ್ಗೆಯೂ ಜಾಲತಾಣಗಳಲ್ಲಿ ‘ಇವರ ಬಂಧನ ಯಾವಾಗ’ ಎನ್ನುವ ಪ್ರಶ್ನೆ ಎದ್ದಿದೆ.

ಈಗಾಗಲೇ ಚಿತ್ರನಟ ದರ್ಶನ್ ಕೂಡಾ ಈ ಹಿಂದೆ ಹುಲಿ ಉಗುರು ಹೊಂದಿರುವ ಸರ ಧರಿಸಿದ್ದು, ಈ ಬಗ್ಗೆಯೂ ಜಾಲತಾಣಗಳಲ್ಲಿ ಚರ್ಚೆಯಾಗಿ ದರ್ಶನ್ ಮೇಲೆ ದೂರು ದಾಖಲಾಗಿದೆ.
ಅವಧೂತನ ಅವತಾರದಲ್ಲಿ ಬರುವ ಗೌರಿಗದ್ದೆ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ವಿನಯ್ ಗುರೂಜಿ ಮೇಲೂ ದೂರು ದಾಖಲಾಗಿದೆ. ಅರಣ್ಯ ಇಲಾಖೆ ಈಗಾಗಲೇ ದರ್ಶನ್, ವಿನಯ್ ಗುರೂಜಿ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.