Home ದೆಹಲಿ ಪಾಕಿಸ್ತಾನದ ಮಧ್ಯಸ್ಥಿಕೆ ಯತ್ನಕ್ಕೆ ಭಾರತದ ಟೀಕೆ: ‘ಬ್ರೋಕರ್ ರಾಷ್ಟ್ರ’ ಎಂದ ಕೇಂದ್ರ ಸಚಿವ ಜೈಶಂಕರ್

ಪಾಕಿಸ್ತಾನದ ಮಧ್ಯಸ್ಥಿಕೆ ಯತ್ನಕ್ಕೆ ಭಾರತದ ಟೀಕೆ: ‘ಬ್ರೋಕರ್ ರಾಷ್ಟ್ರ’ ಎಂದ ಕೇಂದ್ರ ಸಚಿವ ಜೈಶಂಕರ್

0

ದೆಹಲಿ: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿಯ ನಡುವೆ ಪಾಕಿಸ್ತಾನ ಕೈಗೊಂಡಿರುವ ಮಧ್ಯಸ್ಥಿಕೆ ಪ್ರಯತ್ನಕ್ಕೆ ಭಾರತ ಕಠಿಣ ಪ್ರತಿಕ್ರಿಯೆ ನೀಡಿದೆ. ಜಾಗತಿಕ ರಾಜತಾಂತ್ರಿಕ ವೇದಿಕೆಯಲ್ಲಿ ಪಾತ್ರ ಹೆಚ್ಚಿಸಿಕೊಳ್ಳಲು ಇಸ್ಲಾಮಾಬಾದ್ ನಡೆಸುತ್ತಿರುವ ಯತ್ನವನ್ನು ನವದೆಹಲಿ ಲೇವಡಿ ಮಾಡಿದೆ.

ರಾಜಧಾನಿ ದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿ, ಪಾಕಿಸ್ತಾನವನ್ನು “ಮಧ್ಯವರ್ತಿ ರಾಷ್ಟ್ರ”ವೆಂದು ಗುರುತಿಸುವುದನ್ನು ತಳ್ಳಿ ಹಾಕಿದರೆಂದು ಮೂಲಗಳು ತಿಳಿಸಿವೆ. ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಸ್ವತಂತ್ರ ನಿಲುವು ಹೊಂದಿದ್ದು, ಯಾವುದೇ ಸಂಘರ್ಷದಲ್ಲಿ ‘ಬ್ರೋಕರ್’ ಪಾತ್ರವಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಇದಕ್ಕೂ ನಡುವೆ, ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಮಧ್ಯಸ್ಥಿಕೆ ವಹಿಸುವ ಪ್ರಯತ್ನ ಮಾಡುತ್ತಿದೆ. ಈ ಬೆಳವಣಿಗೆಗೆ ಸಂಬಂಧಿಸಿ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ ಅಭಿಪ್ರಾಯಗಳು ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಸಭೆಯಲ್ಲಿ ಸರ್ಕಾರ ಮಧ್ಯಪ್ರಾಚ್ಯದ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದಾಗಿ ವಿವರಿಸಿದೆ. ವಿವಿಧ ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದರ ಜೊತೆಗೆ ಸಂಕಷ್ಟದಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ವಾಪಸು ತರಲು ಕ್ರಮ ಕೈಗೊಳ್ಳಲಾಗಿದೆ. ಇರಾನ್‌ನಿಂದ ಲಕ್ಷಾಂತರ ಭಾರತೀಯರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದು ತಿಳಿಸಲಾಗಿದೆ. ಉಳಿದವರನ್ನು ಕರೆತರಲು ಕಾರ್ಯಾಚರಣೆ ಮುಂದುವರಿದಿದೆ.

ಇಂಧನ ಭದ್ರತೆ ಕುರಿತ ಆತಂಕಗಳನ್ನು ತಳ್ಳಿಹಾಕಿದ ಸರ್ಕಾರ, ಭಾರತದ ಕಚ್ಚಾ ತೈಲ ಸರಬರಾಜಿನಲ್ಲಿ ರಷ್ಯಾ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ. ಅದೇ ವೇಳೆ, ಅಮೆರಿಕ ಜೊತೆ ವ್ಯಾಪಾರ ಸಂಬಂಧಗಳು ಬಲವಾಗಿದ್ದು, ಇಸ್ರೇಲ್ ಜೊತೆಗೆ ಕಾರ್ಯತಂತ್ರದ ಸಹಕಾರ ಮುಂದುವರಿದಿದೆ ಎಂದು ಹೇಳಲಾಗಿದೆ.

ಸಭೆಯ ನಂತರ ಮಾತನಾಡಿದ ಕಿರಣ್ ರಿಜಿಜು, ಎಲ್ಲಾ ರಾಜಕೀಯ ಪಕ್ಷಗಳ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡಿದ್ದು, ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ಏಕತೆ ಪ್ರದರ್ಶಿಸುವ ನಿರ್ಧಾರ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

You cannot copy content of this page

Exit mobile version