ಭಾರತವು ತನ್ನ ದಶಕಗಳ ಕಾಲದ ಸಾಂಪ್ರದಾಯಿಕ ಅಣ್ವಸ್ತ್ರ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದ್ದು, ಇದೇ ಮೊದಲ ಬಾರಿಗೆ ಕಾರ್ಯಾಚರಣೆಗೆ ಸಿದ್ಧವಿರುವ 12 ಅಣುಬಾಂಬುಗಳನ್ನು (ವಾರ್‌ಹೆಡ್‌ಗಳು) ಪ್ರಮುಖ ಉಡಾವಣಾ ಕೇಂದ್ರಗಳಲ್ಲಿ ನಿಯೋಜಿಸಿದೆ ಎಂದು ಜಾಗತಿಕ ರಕ್ಷಣಾ ವಿದ್ಯಮಾನಗಳ ಮೇಲೆ ನಿಗಾ ಇಡುವ ಪ್ರತಿಷ್ಠಿತ ಸಂಸ್ಥೆ ‘ಸಿಪ್ರಿ’ (SIPRI – ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್) ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗಪಡಿಸಿದೆ.
ಅಣ್ವಸ್ತ್ರಗಳನ್ನು ಮತ್ತು ಅವುಗಳನ್ನು ಉಡಾವಣೆ ಮಾಡುವ ಕ್ಷಿಪಣಿ ಅಥವಾ ಯುದ್ಧವಿಮಾನಗಳಂತಹ ವ್ಯವಸ್ಥೆಗಳನ್ನು ಬೇರೆ ಬೇರೆ ಉಗ್ರಾಣಗಳಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿಡುವುದು ಭಾರತದ ದಶಕಗಳ ಕಾಲದ ರಕ್ಷಣಾ ನೀತಿಯಾಗಿತ್ತು. ಆದರೆ, ಈಗಿನ ಬದಲಾದ ಜಾಗತಿಕ ಮತ್ತು ಪ್ರಾದೇಶಿಕ ಭದ್ರತಾ ಸನ್ನಿವೇಶದಲ್ಲಿ ಈ ನೀತಿಯನ್ನು ಬದಲಾಯಿಸಲಾಗಿದ್ದು, ಭಾರತದ ಅಣ್ವಸ್ತ್ರಗಳನ್ನು ಕೇವಲ ‘ದಾಸ್ತಾನು’ ಎಂದು ಪರಿಗಣಿಸದೆ ‘ಕಾರ್ಯಾಚರಣೆಗೆ ಸಿದ್ಧವಾಗಿರುವ ನಿಯೋಜನೆ’ ಎಂದು ವರ್ಗೀಕರಿಸಿರುವುದು ಇತಿಹಾಸದಲ್ಲೇ ಇದೇ ಮೊದಲು ಎಂದು ಸಿಪ್ರಿ ವರದಿ ತಿಳಿಸಿದೆ.
ಭೂಗರ್ಭ ಕ್ಷಿಪಣಿ ನೆಲೆಗಳು ಹಾಗೂ ಹೊಸ ಪರಮಾಣು ಜಲಾಂತರ್ಗಾಮಿ ನೌಕೆಗಳಲ್ಲಿ (SSBN) ತಕ್ಷಣದ ಪ್ರಯೋಗಕ್ಕೆ ಸಿದ್ಧವಿರುವಂತೆ ಅಣ್ವಸ್ತ್ರಗಳನ್ನು ಜೋಡಿಸಿಟ್ಟಿರುವುದು ಭಾರತೀಯ ರಕ್ಷಣಾ ಪಡೆಗಳ ಉನ್ನತ ಮಟ್ಟದ ಸನ್ನದ್ಧತೆಯನ್ನು ಸೂಚಿಸುತ್ತದೆ. ಹೊಸದಾಗಿ ನಿಯೋಜಿಸಲಾದ ಈ 12 ಅಣುಬಾಂಬುಗಳನ್ನು ಅವುಗಳ ಉಡಾವಣಾ ಕ್ಷಿಪಣಿ ವ್ಯವಸ್ಥೆಗಳೊಂದಿಗೆ ನೇರವಾಗಿ ಜೋಡಿಸಲಾಗಿದೆ ಅಥವಾ ಕಾರ್ಯಾಚರಣಾ ಪಡೆಗಳಿರುವ ಮುಂಚೂಣಿಯ ನೆಲೆಗಳಲ್ಲಿ ಇರಿಸಲಾಗಿದೆ. ಶತ್ರು ದೇಶಗಳ ಸಂಭಾವ್ಯ ದಾಳಿಯನ್ನು ತಡೆಯಲು ಮತ್ತು ಸಮುದ್ರ ಮಾರ್ಗದ ಗಸ್ತನ್ನು ಬಲಪಡಿಸಲು ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳ ಮೇಲೆ ಕಡಿಮೆ ಸಂಖ್ಯೆಯ ವಾರ್‌ಹೆಡ್‌ಗಳನ್ನು ನಿಯೋಜಿಸುವುದರ ಜೊತೆಗೆ, ಕಳೆದ ಒಂದು ವರ್ಷದಲ್ಲಿ ಭಾರತದ ಒಟ್ಟು ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹದಲ್ಲೂ ಅಲ್ಪ ಪ್ರಮಾಣದ ಹೆಚ್ಚಳ ದಾಖಲಾಗಿದೆ ಎಂದು ಸಿಪ್ರಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
