Wednesday, March 4, 2026

ಸತ್ಯ | ನ್ಯಾಯ |ಧರ್ಮ

ಖಮೇನಿ ಹತ್ಯೆ ಖಂಡಿಸದ ಭಾರತ: ಯುದ್ಧದ ತೀವ್ರತೆ ಬಗ್ಗೆ ಮಾತ್ರ ಕಳವಳ

ಇರಾನ್-ಅಮೆರಿಕ ಯುದ್ಧದ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಕೊನೆಗೂ ತನ್ನ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿದೆ. ಪಶ್ಚಿಮ ಏಷ್ಯಾದಾದ್ಯಂತ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿದ್ದು, ಪರಿಸ್ಥಿತಿ ಬಿಗಡಾಯಿಸುತ್ತಿರುವ ಸಮಯದಲ್ಲಿ ಮಂಗಳವಾರ ವಿದೇಶಾಂಗ ಸಚಿವಾಲಯವು ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಯುದ್ಧವು ದಿನೇ ದಿನೇ ತೀವ್ರಗೊಳ್ಳುತ್ತಿರುವುದು ಮತ್ತು ಇತರ ದೇಶಗಳಿಗೂ ಹರಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಭಾರತ ಹೇಳಿದೆ.

ಸಂಘರ್ಷದಿಂದಾಗಿ ಸಾವಿನ ಸಂಖ್ಯೆ ಏರುತ್ತಿರುವುದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿರುವುದು ಮತ್ತು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರ ಬಗ್ಗೆ ಸರ್ಕಾರವು ಕಳವಳ ವ್ಯಕ್ತಪಡಿಸಿದೆ. ಈ ಪ್ರದೇಶದ ಭದ್ರತೆ ಮತ್ತು ಸ್ಥಿರತೆಯಲ್ಲಿ ಭಾರತವು ಪ್ರಮುಖ ಹಿತಾಸಕ್ತಿ ಹೊಂದಿರುವ ನೆರೆಯ ರಾಷ್ಟ್ರವಾಗಿರುವುದರಿಂದ, ಈ ಬೆಳವಣಿಗೆಗಳು ಅತ್ಯಂತ ಗಂಭೀರವಾಗಿವೆ ಎಂದು ತಿಳಿಸಲಾಗಿದೆ.

ಆದರೆ, ಈ ಯುದ್ಧಕ್ಕೆ ಕಾರಣವಾದ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಭಾರತ ಸರ್ಕಾರವು ಇದುವರೆಗೆ ನೇರವಾಗಿ ಖಂಡಿಸಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಕೇವಲ ದೌತ್ಯ ಮಾರ್ಗಗಳ ಮೂಲಕ ಮತ್ತು ಮಾತುಕತೆಯ ಮೂಲಕ ಮಾತ್ರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಸರ್ಕಾರವು ಒಂದು ಔಪಚಾರಿಕ ಅಥವಾ ಮೊಕ್ಕುಬಡಿ ಹೇಳಿಕೆ ನೀಡಿ ಸುಮ್ಮನಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಸುರಕ್ಷತೆಯೇ ನಮಗೆ ಈಗ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿರುವ ವಿದೇಶಾಂಗ ಇಲಾಖೆಯು, ಭಾರತೀಯ ವಾಣಿಜ್ಯ ನೌಕೆಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಾನು ಬಲವಾಗಿ ವಿರೋಧಿಸುವುದಾಗಿ ಹೇಳಿದೆ.

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿರುವಾಗಲೂ ಭಾರತವು ಇಷ್ಟು ದಿನ ಮೌನವಾಗಿದ್ದುದ್ದರ ಬಗ್ಗೆ ದೇಶದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಯುದ್ಧವು ಭೀಕರ ಸ್ವರೂಪ ಪಡೆದಿದ್ದರೂ ಸರ್ಕಾರವು ತಡವಾಗಿ ಸ್ಪಂದಿಸಿರುವುದನ್ನು ಮತ್ತು ಖಮೇನಿ ಹತ್ಯೆಯ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸದೆ ಇರುವುದನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ.

ಕೇಂದ್ರ ಸರ್ಕಾರವು ಕೂಡಲೇ ಈ ಬಗ್ಗೆ ಸಂಸತ್ತಿನಲ್ಲಿ ಅಥವಾ ಅಧಿಕೃತವಾಗಿ ಸಮಗ್ರ ಹೇಳಿಕೆ ನೀಡಬೇಕು ಎಂದು ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page