Home ವಿದೇಶ 1948ರ ಬಳಿಕ ಮೊದಲ ಬಾರಿಗೆ ಸೌದಿ ಅರೇಬಿಯಾಗೆ ಮುಸ್ಲಿಮೇತರ ರಾಯಭಾರಿಯನ್ನು ನೇಮಿಸಿದ ಭಾರತ

1948ರ ಬಳಿಕ ಮೊದಲ ಬಾರಿಗೆ ಸೌದಿ ಅರೇಬಿಯಾಗೆ ಮುಸ್ಲಿಮೇತರ ರಾಯಭಾರಿಯನ್ನು ನೇಮಿಸಿದ ಭಾರತ

0
ವಿಪುಲ್ ಅವರು ಕೈರೋ, ಕೊಲಂಬೊ, ಜಿನೀವಾ ಮತ್ತು ದುಬೈಯಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಚಿತ್ರ: X@ani_digital

ಮೋದಿ ಸರ್ಕಾರವು ಸೌದಿ ಅರೇಬಿಯಾದಲ್ಲಿ ಭಾರತದ ಮುಂದಿನ ರಾಯಭಾರಿಯಾಗಿ ಆಯ್ಕೆ ಮಾಡಿದ ಅಧಿಕಾರಿ ಒಂದು ದೀರ್ಘಕಾಲದ ಸಂಪ್ರದಾಯಕ್ಕೆ ತೆರೆ ಎಳೆದಿದ್ದಾರೆ. ಇಂದಿನವರೆಗೆ ಸೌದಿ ಅರೇಬಿಯಾಗೆ ಸಾಮಾನ್ಯವಾಗಿ ಹಿರಿಯ ಮುಸ್ಲಿಂ ರಾಜತಾಂತ್ರಿಕರನ್ನೇ ರಾಯಭಾರಿಯಾಗಿ ನೇಮಿಸಲಾಗುತ್ತಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜೂನ್ 2ರಂದು 1998ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿ ವಿಪುಲ್ ಅವರನ್ನು ಸೌದಿ ಅರೇಬಿಯಾದ ಮುಂದಿನ ಭಾರತೀಯ ರಾಯಭಾರಿಯಾಗಿ ನೇಮಿಸಿರುವುದಾಗಿ ಘೋಷಿಸಿತು.

ಸ್ವಾತಂತ್ರ್ಯಾನಂತರ ಭಾರತವು ಸೌದಿ ಅರೇಬಿಯಾಗೆ ರಾಯಭಾರಿಗಳಾಗಿಯೂ, ಜೆದ್ದಾದಲ್ಲಿ ಕಾನ್ಸುಲ್ ಜನರಲ್‌ಗಳಾಗಿಯೂ ಹೆಚ್ಚಾಗಿ ಮುಸ್ಲಿಂ ರಾಜತಾಂತ್ರಿಕರನ್ನೇ ನೇಮಿಸುತ್ತಿತ್ತು. ಇದಕ್ಕೆ ಪ್ರಮುಖ ಕಾರಣ ಹಜ್ ಯಾತ್ರೆಯ ನಿರ್ವಹಣೆ. ಪ್ರತಿವರ್ಷ ಸಾವಿರಾರು ಭಾರತೀಯ ಯಾತ್ರಿಕರು ಇಸ್ಲಾಂ ಧರ್ಮದ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾಕ್ಕೆ ತೆರಳುವ ಹಜ್ ಯಾತ್ರೆಯ ಸಮನ್ವಯ ಕಾರ್ಯದಲ್ಲಿ ಭಾರತೀಯ ಮಿಷನ್ ಮಹತ್ವದ ಪಾತ್ರ ವಹಿಸುತ್ತಿತ್ತು.

ಆದರೆ ಇತ್ತೀಚಿನ ದಶಕಗಳಲ್ಲಿ ಈ ಹುದ್ದೆಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ಕಷ್ಟಕರವಾಗಿತ್ತು. ಸಾಕಷ್ಟು ಹಿರಿಯತೆ ಹೊಂದಿರುವ ಮುಸ್ಲಿಂ ರಾಜತಾಂತ್ರಿಕರ ಸಂಖ್ಯೆ ಕಡಿಮೆಯಾಗಿರುವುದಷ್ಟೇ ಅಲ್ಲದೆ, ಅವರಲ್ಲಿ ಎಲ್ಲರೂ ರಿಯಾದ್‌ನಲ್ಲಿ ಸೇವೆ ಸಲ್ಲಿಸಲು ಆಸಕ್ತಿ ತೋರಿಸುತ್ತಿರಲಿಲ್ಲ. ಇದರಿಂದ ಕೆಲವೊಮ್ಮೆ ಹೊಸ ಉತ್ತರಾಧಿಕಾರಿ ಸಿಗುವವರೆಗೆ ಹಾಲಿ ರಾಯಭಾರಿಗಳ ಅವಧಿಯನ್ನು ವಿಸ್ತರಿಸಬೇಕಾಗುತ್ತಿತ್ತು.

ಕೆಲ ಸಂದರ್ಭಗಳಲ್ಲಿ ಸರ್ಕಾರವು ವೃತ್ತಿಪರ ಐಎಫ್‌ಎಸ್ ಅಧಿಕಾರಿಗಳ ಹೊರಗೆಯೂ ಅಭ್ಯರ್ಥಿಗಳನ್ನು ಹುಡುಕಬೇಕಾಯಿತು. ಅದರ ಪ್ರಮುಖ ಉದಾಹರಣೆಯಾಗಿ, ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಅಹ್ಮದ್ ಜಾವೇದ್ ಅವರು 2016ರಿಂದ 2019ರವರೆಗೆ ಸೌದಿ ಅರೇಬಿಯಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಕತಾರ್‌ನಲ್ಲಿ ಭಾರತದ ರಾಯಭಾರಿಯಾಗಿರುವ ವಿಪುಲ್ ಅವರು, 1998ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಸುಹೇಲ್ ಅಜಾಜ್ ಖಾನ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಅರೇಬಿಕ್ ಭಾಷೆಯಲ್ಲಿ ಪರಿಣತಿ ಹೊಂದಿರುವ ಖಾನ್ ಅವರು ವಿದೇಶಾಂಗ ಸಚಿವಾಲಯದ ಗಲ್ಫ್ ವಿಭಾಗದ ಜಂಟಿ ಕಾರ್ಯದರ್ಶಿಯಾಗಿಯೂ, ದುಬೈಯಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದು, ಗಲ್ಫ್ ಪ್ರದೇಶದೊಂದಿಗೆ ದೀರ್ಘಕಾಲದ ನಂಟು ಹೊಂದಿದ್ದಾರೆ.

ವಿಪುಲ್ ಅವರು ಅಧಿಕಾರ ಸ್ವೀಕರಿಸುವ ಹೊತ್ತಿಗೆ ಸೌದಿ ಅರೇಬಿಯಾ ಮಹತ್ವದ ಪ್ರಾದೇಶಿಕ ಬದಲಾವಣೆಗಳನ್ನು ಎದುರಿಸುತ್ತಿದೆ. ಇರಾನ್‌ ಸಂಬಂಧಿತ ಉದ್ವಿಗ್ನತೆಗಳು ಮತ್ತು ಪ್ರಾದೇಶಿಕ ಭದ್ರತೆ ಕುರಿತ ಪ್ರಶ್ನೆಗಳ ನಡುವೆಯೇ, ಕಳೆದ ಕೆಲವು ವರ್ಷಗಳಲ್ಲಿ ಸೌದಿ ಅರೇಬಿಯಾ ಗಲ್ಫ್ ಪ್ರದೇಶದಲ್ಲಿ ಭಾರತದ ಆಪ್ತ ಪಾಲುದಾರ ರಾಷ್ಟ್ರವಾಗಿರುವ ಯುಎಇ ಜತೆ ಆರ್ಥಿಕ ಹಾಗೂ ರಾಜತಾಂತ್ರಿಕ ಪ್ರಭಾವಕ್ಕಾಗಿ ಹೆಚ್ಚು ಸ್ಪಷ್ಟವಾದ ಸ್ಪರ್ಧೆಗೆ ಇಳಿದಿದೆ.

ಈ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಭಾರತಕ್ಕೆ ಇಂಧನ ಭದ್ರತೆ, ವ್ಯಾಪಾರ, ಹೂಡಿಕೆ ಮತ್ತು ಅಲ್ಲಿ ವಾಸಿಸುವ ದೊಡ್ಡ ಭಾರತೀಯ ಸಮುದಾಯದ ಕಲ್ಯಾಣದ ದೃಷ್ಟಿಯಿಂದ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವಾಗಿಯೇ ಉಳಿದಿದೆ.

You cannot copy content of this page

Exit mobile version