ಖಾಟ್ಮಂಡು: ಭಾರತದೊಂದಿಗಿನ ಗಡಿ ವಿವಾದದ ಕುರಿತು ನೇಪಾಳದ ಪ್ರಧಾನಮಂತ್ರಿ ಬಾಲೇಂದ್ರ ಶಾ (ಬಾಲೇನ್ ಶಾ) ಅವರು ಸಂಸತ್ತಿನಲ್ಲಿ ಮಾಡಿರುವ ಇತ್ತೀಚಿನ ಪ್ರಕಟಣೆಯು ಆ ದೇಶದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ.
ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳ ಮೇಲಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಮಾತನಾಡಿದ್ದ ಪ್ರಧಾನಿ ಬಾಲೇನ್ ಶಾ, ಕೇವಲ ಭಾರತ ಮಾತ್ರವಲ್ಲದೆ ನೇಪಾಳ ಕೂಡ ಕೆಲವು ಕಡೆಗಳಲ್ಲಿ ಭಾರತೀಯ ಭೂಭಾಗವನ್ನು ಅತಿಕ್ರಮಿಸಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ನೇಪಾಳದ ಇತಿಹಾಸದಲ್ಲೇ ದೇಶದ ಪ್ರಧಾನಿಯೊಬ್ಬರು ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲಾಗಿದ್ದು, ಇದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಧಾನಿಯವರ ಈ ವ್ಯಾಖ್ಯಾನವು ನೇಪಾಳದ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಜಾಗತಿಕವಾಗಿ ಬಲಹೀನಗೊಳಿಸಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು ಹಾಗೂ ಪ್ರಮುಖ ವಿದ್ಯಾರ್ಥಿ ಸಂಘಟನೆಗಳು ರಾಜಧಾನಿ ಖಾಟ್ಮಂಡುವಿನ ರಸ್ತೆಗಿಳಿದು ಭಾರಿ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ, ಪ್ರಧಾನಿ ಬಾಲೇನ್ ಶಾ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮೇ 31 ರಂದು ನಡೆದ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದ ಪ್ರಧಾನಿ ಬಾಲೇನ್ ಶಾ, “ನಾನು ಅಧಿಕಾರಕ್ಕೆ ಬಂದ ನಂತರವೇ ಈ ತಾಂತ್ರಿಕ ವಿಷಯಗಳು ನನ್ನ ಗಮನಕ್ಕೆ ಬಂದಿವೆ. ಗಡಿ ಭಾಗದಲ್ಲಿ ಕೇವಲ ಭಾರತ ಮಾತ್ರ ನಮ್ಮ ಭೂಮಿಯನ್ನು ಆಕ್ರಮಿಸಿಲ್ಲ, ಬದಲಿಗೆ ನೇಪಾಳ ಕೂಡ ಹಲವು ಕಡೆಗಳಲ್ಲಿ ಭಾರತದ ಗಡಿಯನ್ನು ಅತಿಕ್ರಮಿಸಿದೆ,” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಮುಂದುವರಿದು ಮಾತನಾಡಿದ್ದ ಅವರು, “ಇತಿಹಾಸಕಾರರು, ಭೂಮಾಪಕರು (ಸರ್ವೇಯರ್ಸ್) ಮತ್ತು ತಜ್ಞರ ಜಂಟಿ ತಂಡಗಳ ಮೂಲಕ ರಾಜತಾಂತ್ರಿಕವಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ. 1816 ರ ಐತಿಹಾಸಿಕ ಸುಗೌಲಿ ಒಪ್ಪಂದದ ಕಾಲದಿಂದಲೂ ಮುಂದುವರಿದಿರುವ ಈ ಗಡಿ ಸಮಸ್ಯೆಯ ಕುರಿತು ನಾವು ಭಾರತ ಮತ್ತು ಚೀನಾ ಮಾತ್ರವಲ್ಲದೆ, ಬ್ರಿಟನ್ ಸರ್ಕಾರದೊಂದಿಗೂ ಮಾತುಕತೆ ನಡೆಸುತ್ತಿದ್ದೇವೆ,” ಎಂದು ಹೇಳಿದ್ದರು.
ಪ್ರಧಾನಿಯವರ ಈ ಹೇಳಿಕೆಯಿಂದ ಸಂಸತ್ತಿನಲ್ಲಿ ತೀವ್ರ ಗದ್ದಲ ಉಂಟಾಗುತ್ತಿದ್ದಂತೆ ಎಚ್ಚೆತ್ತ ನೇಪಾಳದ ವಿದೇಶಾಂಗ ಸಚಿವಾಲಯವು ಪರಿಸ್ಥಿತಿಯನ್ನು ತಿಳಿಗೊಳಿಸಲು (ಡ್ಯಾಮೇಜ್ ಕಂಟ್ರೋಲ್) ತಕ್ಷಣದ ಸ್ಪಷ್ಟೀಕರಣ ನೀಡಿದೆ. ಪ್ರಧಾನಿ ಬಳಸಿದ ‘ಅತಿಕ್ರಮಣ’ ಎಂಬ ಪದವು ಕಾಲಾಪಾನಿ ಅಥವಾ ಲಿಪುಲೇಖ್‌ನಂತಹ ಮುಖ್ಯ ವಿವಾದಿತ ವಲಯಗಳನ್ನು ಉದ್ದೇಶಿಸಿ ಹೇಳಿದ್ದಲ್ಲ ಎಂದು ಸಚಿವಾಲಯ ಸಮರ್ಥಿಸಿಕೊಂಡಿದೆ.
ನದಿಗಳ ಪಾತ್ರ ಬದಲಾವಣೆ ಹಾಗೂ ಗಡಿ ಕಂಬಗಳು (Boundary Pillars) ನಾಶವಾಗಿರುವುದರಿಂದ ‘ನೋ-ಮ್ಯಾನ್ಸ್ ಲ್ಯಾಂಡ್’ (ದಸಗಜಾ) ಪ್ರದೇಶದಲ್ಲಿ ಇರಬೇಕಾದ ತಾಂತ್ರಿಕ ಗಡಿಯನ್ನು ಮೀರಿ, ಉಭಯ ದೇಶಗಳ ರೈತರು ಪರಸ್ಪರರ ಭೂಮಿಯಲ್ಲಿ ಕೃಷಿ ಮಾಡುತ್ತಿರುವುದನ್ನು ಮಾತ್ರ ಪ್ರಧಾನಿ ಉಲ್ಲೇಖಿಸಿದ್ದರು ಎಂದು ವಿದೇಶಾಂಗ ಇಲಾಖೆ ವಿವರಣೆ ನೀಡಿದೆ.
ಲಿಪುಲೇಖ್ ಪಾಸ್ ಮೂಲಕ ಕೈಲಾಶ್ ಮಾನಸಸರೋವರ ಯಾತ್ರೆಯ ರಸ್ತೆಯನ್ನು ಪುನರಾರಂಭಿಸಲು ಭಾರತ ಮುಂದಾದಾಗಿನಿಂದಲೂ ಇತ್ತೀಚಿನ ದಿನಗಳಲ್ಲಿ ಇರುದೇಶಗಳ ನಡುವೆ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಭ್ರಷ್ಟಾಚಾರ ವಿರೋಧಿ ಯುವ ಚಳವಳಿಯ ಅಲೆಯ ಮೂಲಕ ಕಳೆದ ಮಾರ್ಚ್ 2026 ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಅಧಿಕಾರಕ್ಕೆ ಬಂದಿದ್ದ ‘ರಾಷ್ಟ್ರೀಯ ಸ್ವತಂತ್ರ ಪಾರ್ಟಿ’ಯ ಯುವ ನಾಯಕ ಬಾಲೇನ್ ಶಾ, ಇದೀಗ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಅದೇ ಯುವ ಸಮೂಹ ಮತ್ತು ವಿರೋಧ ಪಕ್ಷಗಳಿಂದ ತೀವ್ರ ನಿರಸನ ಹಾಗೂ ರಾಜೀನಾಮೆ ಒತ್ತಡವನ್ನು ಎದುರಿಸುತ್ತಿದ್ದಾರೆ.
