Home ಅಪಘಾತ ಸೂರತ್‌ನಲ್ಲಿ ಭೀಕರ ರಸ್ತೆ ಅಪಘಾತ: ಎರಡು ಬಸ್‌ಗಳ ನಡುವೆ ಡಿಕ್ಕಿ, ಬೆಂಕಿಗೆ ಆಹುತಿಯಾದ ಏಳು ಪ್ರಯಾಣಿಕರು

ಸೂರತ್‌ನಲ್ಲಿ ಭೀಕರ ರಸ್ತೆ ಅಪಘಾತ: ಎರಡು ಬಸ್‌ಗಳ ನಡುವೆ ಡಿಕ್ಕಿ, ಬೆಂಕಿಗೆ ಆಹುತಿಯಾದ ಏಳು ಪ್ರಯಾಣಿಕರು

0

ಗುಜರಾತ್‌ನ ಸೂರತ್ ಜಿಲ್ಲೆಯ ಬಾರ್ದೋಲಿ ತಾಲೂಕಿನ ಉವಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-53ರಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಜೀವ ದಹನವಾಗಿದ್ದು, ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (MSRTC) ಸೇರಿದ ಎರಡು ಸರ್ಕಾರಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ.

ಅಪಘಾತದ ಭೀಕರತೆಗೆ ಒಂದು ಬಸ್ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದು, ಕ್ಷಣಾರ್ಧದಲ್ಲಿ ಅದರಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ ಎಂದು ಸೂರತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಢಿಯಾ ತಿಳಿಸಿದ್ದಾರೆ.

​ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸೂರತ್‌ನಿಂದ ಧುಲೆ ಕಡೆಗೆ ತೆರಳುತ್ತಿದ್ದ ಎಸ್‌ಟಿ ಬಸ್ ಮೊದಲಿಗೆ ನೀರಿನ ಟ್ಯಾಂಕರ್ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ತಕ್ಷಣವೇ ರೋಡ್ ಡಿವೈಡರ್ ದಾಟಿ ವಿರುದ್ಧ ದಿಕ್ಕಿನಿಂದ ಚಾಲೀಸ್‌ಗಾಂವ್‌ನಿಂದ ಸೂರತ್ ಕಡೆಗೆ ಬರುತ್ತಿದ್ದ ಮತ್ತೊಂದು ಎಸ್‌ಟಿ ಬಸ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ.

ಈ ಪ್ರಬಲ ಘರ್ಷಣೆಯಿಂದಾಗಿ ಎರಡನೇ ಬಸ್ ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಉರುಳಿ ಬಿದ್ದಿದ್ದು, ಸಿಎನ್‌ಜಿ (CNG) ಅನಿಲ ಸೋರಿಕೆಯಿಂದಾಗಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಅಪಘಾತದಲ್ಲಿ ಮೃತಪಟ್ಟ ಏಳೂ ಜನ ಪ್ರಯಾಣಿಕರು ಬೆಂಕಿ ಹತ್ತಿಕೊಂಡ ಬಸ್‌ನಲ್ಲೇ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

​ಘಟನಾ ಸ್ಥಳಕ್ಕೆ ಬಾರ್ದೋಲಿ ಮತ್ತು ನವಸಾರಿ ಜಿಲ್ಲೆಗಳ ಅಗ್ನಿಶಾಮಕ ದಳ ಹಾಗೂ ಪೊಲೀಸರು ಧಾವಿಸಿದ್ದು, ಸ್ಥಳೀಯರ ನೆರವಿನೊಂದಿಗೆ ಬಸ್‌ನ ಕಿಟಕಿಗಳನ್ನು ಒಡೆದು ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಗಾಯಗೊಂಡ 40ಕ್ಕೂ ಹೆಚ್ಚು ಜನರನ್ನು ಬಾರ್ದೋಲಿ ಮತ್ತು ಸೂರತ್‌ನ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಇವರಲ್ಲಿ ನಾಲ್ವರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ.

You cannot copy content of this page

Exit mobile version