ಪೆಸಿಫಿಕ್ ಮಹಾಸಾಗರದಲ್ಲಿ ವೇಗವಾಗಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಇಡೀ ವಿಶ್ವವನ್ನು ಮತ್ತೊಂದು ದೊಡ್ಡ ನೈಸರ್ಗಿಕ ವಿಕೋಪದತ್ತ ತಳ್ಳುತ್ತಿವೆ. ಪ್ರಸ್ತುತ ಚಾಲ್ತಿಯಲ್ಲಿರುವ ‘ಲಾ ನಿನಾ’ ಪ್ರಭಾವವು ಮುಕ್ತಾಯದ ಹಂತ ತಲುಪಿದ್ದು, ಈ ವರ್ಷದ ದ್ವಿತೀಯಾರ್ಧದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ವಿನಾಶಕಾರಿ ‘ಎಲ್ ನಿನೋ’ ಪ್ರಭಾವ ಆರಂಭವಾಗಲಿದೆ ಎಂದು ಜಾಗತಿಕ ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಇದು ಸಾಮಾನ್ಯ ಎಲ್ ನಿನೋಗಿಂತ ಭಿನ್ನವಾಗಿದ್ದು, ದಾಖಲೆ ಮಟ್ಟದ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವುದರಿಂದ ಇದನ್ನು ‘ಸೂಪರ್ ಎಲ್ ನಿನೋ’ ಎಂದು ಕರೆಯಲಾಗಿದೆ. ಇದರ ಭೀಕರ ಪರಿಣಾಮಗಳು 2027ರವರೆಗೆ ಮುಂದುವರಿಯಲಿದ್ದು, ಜಗತ್ತಿನಾದ್ಯಂತ ತೀವ್ರ ಬಿಸಿಲು ಮತ್ತು ಹವಾಮಾನ ವೈಪರೀತ್ಯಗಳು ಸೃಷ್ಟಿಯಾಗಲಿವೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನವು ಸರಾಸರಿಗಿಂತ 0.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೆ ಅದನ್ನು ಎಲ್ ನಿನೋ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರಸ್ತುತ ಹವಾಮಾನ ಮಾದರಿಗಳ ಅನ್ವಯ, ಈ ತಾಪಮಾನವು ಭಾರಿ ಪ್ರಮಾಣದಲ್ಲಿ ಅಂದರೆ ಬರೋಬ್ಬರಿ 2 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಏರಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಕಳೆದ 150 ವರ್ಷಗಳ ಜಾಗತಿಕ ಇತಿಹಾಸದಲ್ಲಿ ಕೇವಲ 1982, 1998 ಮತ್ತು 2015 ರಲ್ಲಿ ಮಾತ್ರ ಇಂತಹ ಸೂಪರ್ ಎಲ್ ನಿನೋ ಪರಿಸ್ಥಿತಿಗಳು ಎದುರಾಗಿದ್ದವು. ಈಗ ಸುಮಾರು ಒಂದು ದಶಕದ ನಂತರ ಮತ್ತೆ ಅಂತಹದ್ದೇ ಮಹಾ ವಿಕೋಪ ಮುಂತಿರುವು ಧರಿಸಿರುವುದರಿಂದ ಪರಿಸರ ವಿಜ್ಞಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸೂಪರ್ ಎಲ್ ನಿನೋ ಪ್ರಭಾವದಿಂದಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ವಿಭಿನ್ನ ಹವಾಮಾನ ವಿಕೋಪಗಳು ಸಂಭವಿಸಲಿವೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾ ದೇಶಗಳಲ್ಲಿ ಮುಂಗಾರು ಮಳೆ ತೀವ್ರವಾಗಿ ಕ್ಷೀಣಿಸಿ ಭೀಕರ ಬರಗಾಲ ಎದುರಾಗುವ ಸಾಧ್ಯತೆಯಿದೆ.
ಇದು ನೇರವಾಗಿ ಕೃಷಿ ವಲಯವನ್ನು ಧ್ವಂಸಗೊಳಿಸಲಿದ್ದು, ಆಹಾರ ಭದ್ರತೆಗೆ ದೊಡ್ಡ ಕಂಟಕ ತರಲಿದೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಹಾಗೂ ಕಾಡ್ಗಿಚ್ಚಿನ ಅವಘಡಗಳು ಹೆಚ್ಚಾಗಲಿವೆ.
ಇದೇ ಸಮಯದಲ್ಲಿ ಜಗತ್ತಿನ ಮತ್ತೊಂದು ಬದಿಯಾದ ದಕ್ಷಿಣ ಅಮೆರಿಕಾದಂತಹ ದೇಶಗಳಲ್ಲಿ ಊಹಿಸಲಾಗದ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ.
ಮುಂದಿನ ತಿಂಗಳ ವೇಳೆಗೆ ಪೆಸಿಫಿಕ್ ಮಹಾಸಾಗರವು ತಟಸ್ಥ ಸ್ಥಿತಿಗೆ ತಲುಪಲಿದ್ದು, ತದನಂತರ ಬೇಸಿಗೆ ಮುಗಿಯುತ್ತಿದ್ದಂತೆ ಎಲ್ ನಿನೋ ತನ್ನ ರೌದ್ರರೂಪವನ್ನು ಪ್ರದರ್ಶಿಸಲು ಆರಂಭಿಸಲಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಸಂಸ್ಥೆ ತಿಳಿಸಿದೆ.
ಪೆಸಿಫಿಕ್ ಸಾಗರದಲ್ಲಿ ಇಷ್ಟೊಂದು ವೇಗವಾಗಿ ಉಷ್ಣಾಂಶ ಹೆಚ್ಚುತ್ತಿರುವುದು ಮಾನವ ಇತಿಹಾಸದಲ್ಲೇ ಅತ್ಯಂತ ಕಠಿಣ ಹವಾಮಾನ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ. ಈ ವಿಕೋಪವು ಕೇವಲ ಪರಿಸರಕ್ಕೆ ಮಾತ್ರವಲ್ಲದೆ ಜಾಗತಿಕ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುವುದರಿಂದ, ಎಲ್ಲಾ ದೇಶಗಳು ಈಗಿನಿಂದಲೇ ಮುಂಜಾಗ್ರತಾ ವಿಪತ್ತು ನಿರ್ವಹಣಾ ಯೋಜನೆಗಳೊಂದಿಗೆ ಸಜ್ಜಾಗಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
