ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ನಿಯಂತ್ರಣದ ಕ್ಷೇತ್ರದಲ್ಲಿ ಭಾರತದ ಸಾಧನೆ ಮತ್ತೊಮ್ಮೆ ತೀವ್ರ ಟೀಕೆಗೆ ಗುರಿಯಾಗಿದೆ. 2026ರ ಪರಿಸರ ಸಂರಕ್ಷಣೆ ಸೂಚ್ಯಂಕ (Environment Performance Index – EPI) ನಲ್ಲಿ ಭಾರತವು 177 ದೇಶಗಳ ಪೈಕಿ 176ನೇ ಸ್ಥಾನ ಪಡೆದಿದ್ದು, ವಿಶ್ವದ ಅತ್ಯಂತ ಕಳಪೆ ಪರಿಸರ ಸಾಧನೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸ್ಪರ್ಧೆಯಲ್ಲಿದ್ದ ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳಲ್ಲೂ ಭಾರತವೇ ಕೊನೆಯ ಸ್ಥಾನದಲ್ಲಿರುವುದು ದೇಶದ ಪರಿಸರ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯೇಲ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯಗಳ ಸಂಶೋಧಕರು ಸೇರಿದಂತೆ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸಿರುವ ಈ ವರದಿಯಲ್ಲಿ 177 ರಾಷ್ಟ್ರಗಳನ್ನು ಪರಿಸರ ಆರೋಗ್ಯ, ಪರಿಸರ ವ್ಯವಸ್ಥೆಯ ಜೀವಂತಿಕೆ ಮತ್ತು ಹವಾಮಾನ ಬದಲಾವಣೆ ತಗ್ಗಿಸುವ ಕ್ರಮಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ. ಭಾರತವು 100 ಅಂಕಗಳಲ್ಲಿ ಕೇವಲ 22.4 ಅಂಕಗಳನ್ನು ಪಡೆದರೆ, ಅಗ್ರಸ್ಥಾನದಲ್ಲಿರುವ ಎಸ್ಟೋನಿಯಾ 74.79 ಅಂಕಗಳನ್ನು ಗಳಿಸಿದೆ.
ವರದಿಯ ಪ್ರಕಾರ, ಪರಿಸರ ಆರೋಗ್ಯ ವಿಭಾಗದಲ್ಲಿ ಭಾರತ 174ನೇ, ಪರಿಸರ ವ್ಯವಸ್ಥೆಯ ಜೀವಂತಿಕೆ ವಿಭಾಗದಲ್ಲಿ 171ನೇ ಹಾಗೂ ಹವಾಮಾನ ಬದಲಾವಣೆ ನಿಯಂತ್ರಣ ವಿಭಾಗದಲ್ಲಿ 130ನೇ ಸ್ಥಾನ ಪಡೆದಿದೆ. ದೇಶದಲ್ಲಿ ವಾಯು ಮಾಲಿನ್ಯ, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ಮೇಲಿನ ಅವಲಂಬನೆ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿನ ಕೊರತೆಗಳು ಭಾರತದ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ಉಲ್ಲೇಖಿಸಿದೆ.
ಸೂಕ್ಷ್ಮ ಕಣಗಳ (PM2.5) ಮಾಲಿನ್ಯ, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್‌ನಂತಹ ಅಪಾಯಕಾರಿ ವಾಯು ಮಾಲಿನ್ಯಕಾರಕಗಳಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳು ಭಾರತದಲ್ಲಿ ಇನ್ನೂ ಗಂಭೀರ ಮಟ್ಟದಲ್ಲಿವೆ ಎಂದು ವರದಿ ಎಚ್ಚರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮಾಲಿನ್ಯ ಹೆಚ್ಚುತ್ತಿರುವುದು ಮತ್ತು ಹಸಿರುಮನೆ ಅನಿಲಗಳ ಉತ್ಸರ್ಗ ಏರಿಕೆಯಾಗುತ್ತಿರುವುದು ದೇಶಕ್ಕೆ ದೀರ್ಘಕಾಲದ ಸವಾಲಾಗಿ ಪರಿಣಮಿಸಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಭಾರತ ಕೆಲವು ಸೂಚಕಗಳಲ್ಲಿ ಸುಧಾರಣೆ ದಾಖಲಿಸಿದ್ದರೂ, ಒಟ್ಟಾರೆ ಶ್ರೇಯಾಂಕದಲ್ಲಿ ವಿಶ್ವದ ಕೊನೆಯ ಭಾಗದಲ್ಲೇ ಉಳಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಮಾಧಾನ ಪಟ್ಟುಕೊಳ್ಳುವ ವಿಚಾರ ಏನೆಂದರೆ ಈ ಸ್ಪರ್ಧೆಯ ಪಟ್ಟಿಯಲ್ಲೇ ಇಲ್ಲದ ನೆರೆಯ ರಾಷ್ಟ್ರಗಳಾದ ಭೂತಾನ್, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕಿಂತ ಭಾರತ ಉತ್ತಮ ಸ್ಥಾನದಲ್ಲಿದೆ ಎನ್ನಬಹುದಷ್ಟೇ.
ಈ ಹಿಂದೆ 2022ರ ಇಪಿಐ ವರದಿಯಲ್ಲಿಯೂ ಭಾರತ ಕೊನೆಯ ಸ್ಥಾನ ಪಡೆದಿದ್ದಾಗ ಕೇಂದ್ರ ಪರಿಸರ ಸಚಿವಾಲಯ ವರದಿಯ ವಿಧಾನವನ್ನು ಪ್ರಶ್ನಿಸಿ ಅದರ ತೀರ್ಮಾನಗಳನ್ನು ತಿರಸ್ಕರಿಸಿತ್ತು. ಆದರೆ ಈ ಬಾರಿಯೂ ಭಾರತದ ಕಳಪೆ ಸಾಧನೆ ಮರುಕಳಿಸಿರುವುದು ಪರಿಸರ ಸಂರಕ್ಷಣೆ, ವಾಯು ಗುಣಮಟ್ಟ ಸುಧಾರಣೆ ಮತ್ತು ಹವಾಮಾನ ಕ್ರಮಗಳ ಬಗ್ಗೆ ದೇಶದ ಪ್ರಯತ್ನಗಳು ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂಬ ಚರ್ಚೆಗೆ ಕಾರಣವಾಗಿದೆ.
ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವದ ವಿಷಯವಾಗಿರುವ ಸಂದರ್ಭದಲ್ಲಿ, ಭಾರತದ ಈ ಕಳಪೆ ಶ್ರೇಯಾಂಕ ದೇಶದ ಪರಿಸರ ನಿರ್ವಹಣೆಯ ಮೇಲಿನ ಪ್ರಶ್ನೆಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಗೆ ಹೊಡೆತ ನೀಡುವ ಬೆಳವಣಿಗೆಯಾಗಿ ಪರಿಣಮಿಸಿದೆ.
