Home ವಿದೇಶ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ಪೂರ್ತಿಯಾಗಿ ನಿಲ್ಲಿಸಿದೆ: ಟ್ರಂಪ್

ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ಪೂರ್ತಿಯಾಗಿ ನಿಲ್ಲಿಸಿದೆ: ಟ್ರಂಪ್

0

ವಾಷಿಂಗ್ಟನ್: ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ಕಾರಣಕ್ಕಾಗಿ, ತಾವು ಭಾರತದ ಮೇಲೆ ಹೇರಿರುವ ಸುಂಕವನ್ನು ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, “ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದ್ದ ಕಾರಣಕ್ಕಾಗಿಯೇ ಅದರ ಮೇಲೆ ಭಾರೀ ಸುಂಕವನ್ನು ವಿಧಿಸಲಾಗಿತ್ತು. ಆದರೆ, ಪ್ರಸ್ತುತ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಿದೆ. ಆದ್ದರಿಂದ, ಮುಂಬರುವ ದಿನಗಳಲ್ಲಿ ನಾವು ಅದರ ಮೇಲೆ ಹಾಕುವ ಆಮದು ಸುಂಕವನ್ನು ಹಂತ ಹಂತವಾಗಿ ಕಡಿತಗೊಳಿಸುತ್ತೇವೆ” ಎಂದು ತಿಳಿಸಿದ್ದಾರೆ. ಆದರೆ ಈ ವಿಚಾರವಾಗಿ ಭಾರತವು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇದೇ ಸಂದರ್ಭದಲ್ಲಿ, ಭಾರತದೊಂದಿಗೆ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕುವ ಭರವಸೆಯನ್ನು ಅಮೆರಿಕ ಅಧ್ಯಕ್ಷರು ಎರಡನೇ ಬಾರಿಗೆ ವ್ಯಕ್ತಪಡಿಸಿದರು. “ನಮ್ಮಲ್ಲಿ ಅನೇಕ ಅನ್ಯಾಯಪೂರ್ಣ ವ್ಯಾಪಾರ ಒಪ್ಪಂದಗಳಿವೆ. ಆದ್ದರಿಂದ, ಭಾರತದೊಂದಿಗೆ ನ್ಯಾಯಯುತವಾದ ಒಪ್ಪಂದ ಮಾಡಿಕೊಳ್ಳುತ್ತೇವೆ. ಇದು ಹಿಂದಿನ ಒಪ್ಪಂದಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಸದ್ಯಕ್ಕೆ ಅವರು ನನ್ನನ್ನು ಮೆಚ್ಚುತ್ತಿಲ್ಲ ಎಂದು ಅನಿಸುತ್ತದೆ, ಆದರೆ, ಶೀಘ್ರದಲ್ಲೇ ಅವರು ಮತ್ತೆ ನಮ್ಮನ್ನು ಪ್ರೀತಿಸುತ್ತಾರೆ” ಎಂದು ಅವರು ನುಡಿದರು.

You cannot copy content of this page

Exit mobile version