ದೆಹಲಿ: ದೇಶವ್ಯಾಪಿ ಸಂಚಲನ ಮೂಡಿಸಿದ್ದ 2005-06ರ ನಿಠಾರಿ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಈ ಘಟನೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ದೋಷಿಯಾಗಿ ಮರಣದಂಡನೆ ಎದುರಿಸುತ್ತಿದ್ದ ಸುರೇಂದರ್ ಕೋಲಿಯನ್ನು ನ್ಯಾಯಾಲಯವು ನಿರ್ದೋಷಿ ಎಂದು ತೀರ್ಮಾನಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯ್, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ವಿಕ್ರಮನಾಥ್ ಅವರನ್ನೊಳಗೊಂಡ ನ್ಯಾಯಪೀಠವು ಸುರೇಂದರ್ ಕೋಲಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ.
ನಿಠಾರಿ ಹತ್ಯೆ ಪ್ರಕರಣಗಳ ಪೈಕಿ ಒಂದಾದ 15 ವರ್ಷದ ಬಾಲಕಿಯ ಹತ್ಯೆ ಪ್ರಕರಣದಲ್ಲಿ ಸುರೇಂದರ್ ಕೋಲಿ ಪ್ರಸ್ತುತ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ. ಈ ಪ್ರಕರಣವನ್ನು ಮರು-ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್, ಕೇವಲ ಒಂದು ಚಾಕುವಿನ ಆಧಾರದ ಮೇಲೆ ಆತನನ್ನು ಆರೋಪಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈಗಾಗಲೇ 12 ಪ್ರಕರಣಗಳಲ್ಲಿ ಆತ ನಿರ್ದೋಷಿ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸುರೇಂದರ್ ಕೋಲಿಯನ್ನು ಬಿಡುಗಡೆ ಮಾಡಲು ಆದೇಶಿಸಿತು.
2006 ರಲ್ಲಿ, ನೋಯ್ಡಾದ ನಿಠಾರಿಯ ಬಳಿ ಮೊನಿಂದರ್ ಸಿಂಗ್ ಪಂಧೇರ್ ಅವರ ಮನೆಯ ಹಿಂದಿರುವ ಚರಂಡಿಯಲ್ಲಿ 16 ಮಕ್ಕಳ ಅಸ್ಥಿಪಂಜರಗಳು ಪತ್ತೆಯಾಗಿದ್ದು ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು.
ಈ ಪ್ರಕರಣಗಳ ತನಿಖೆ ಕೈಗೊಂಡ ಸಿಬಿಐ, ಪಂಧೇರ್ ಮತ್ತು ಅವರ ಮನೆಯ ಸಹಾಯಕ ಕೋಲಿಯನ್ನು ಬಂಧಿಸಿತು. ಈ ಸಂಬಂಧ ಒಟ್ಟು 19 ಪ್ರಕರಣಗಳನ್ನು 2007ರಲ್ಲಿ ದಾಖಲಿಸಲಾಗಿತ್ತು. ಅವುಗಳಲ್ಲಿ ಮೂರನ್ನು ಕ್ಲೋಸ್ ಮಾಡಲಾಗಿತ್ತು.
ಉಳಿದ 16 ಪ್ರಕರಣಗಳ ಪೈಕಿ ಹನ್ನೆರಡರಲ್ಲಿ ಕೋಲಿಯನ್ನು ನಿರ್ದೋಷಿ ಎಂದು ಅಲಹಾಬಾದ್ ಹೈಕೋರ್ಟ್ 2023ರ ಅಕ್ಟೋಬರ್ 16 ರಂದು ಘೋಷಿಸಿತ್ತು. ಆ ಸಮಯದಲ್ಲಿ ಪಂಧೇರ್ ವಿರುದ್ಧ ಉಳಿದಿದ್ದ ಮೂರು ಪ್ರಕರಣಗಳಲ್ಲಿ ಆತನನ್ನೂ ನಿರ್ದೋಷಿಯೆಂದು ಹೈಕೋರ್ಟ್ ತೀರ್ಮಾನಿಸಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಮತ್ತು ಮೃತರ ಸಂಬಂಧಿಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಈ ವರ್ಷದ ಜುಲೈನಲ್ಲಿ ಆ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತು. ಆದರೆ, ನಿಠಾರಿ ಹತ್ಯೆಗಳ ಪೈಕಿ 15 ವರ್ಷದ ಬಾಲಕಿಗೆ ಸಂಬಂಧಿಸಿದ ಹತ್ಯೆ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗದ ಕಾರಣ ಕೋಲಿ ಇತ್ತೀಚಿನವರೆಗೂ ಜೈಲಿನಲ್ಲಿ ಉಳಿದಿದ್ದ.
