ದೆಹಲಿ: ಬೆಲೆ ಏರಿಕೆಯ ಬಿಸಿಯಲ್ಲಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರವು ಮತ್ತೊಂದು ಆಘಾತ ನೀಡಿದೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು (Import Duty) ಶೇ. 6 ರಿಂದ ಶೇ. 15 ಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹೆಚ್ಚಿಸಿರುವುದಾಗಿ ಹಣಕಾಸು ಸಚಿವಾಲಯವು ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಹೆಚ್ಚುತ್ತಿರುವ ಚಿನ್ನದ ಆಮದನ್ನು ನಿಯಂತ್ರಿಸುವುದು, ವಿದೇಶಿ ವಿನಿಮಯ ಮೀಸಲು ನಿಧಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ಹೊಸ ನಿಯಮದ ಪ್ರಕಾರ, ಶೇ. 10 ರಷ್ಟು ಮೂಲ ಕಸ್ಟಮ್ಸ್ ಸುಂಕ ಮತ್ತು ಶೇ. 5 ರಷ್ಟು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಸೇರಿದಂತೆ ಒಟ್ಟು ಶೇ. 15 ರಷ್ಟು ಸುಂಕ ಅನ್ವಯವಾಗಲಿದೆ.
ಈ ಹೆಚ್ಚುವರಿ ಸುಂಕವು ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಅವುಗಳಿಗೆ ಸಂಬಂಧಿಸಿದ ಆಭರಣಗಳ ಆಮದಿನ ಮೇಲೆ ಅನ್ವಯಿಸುತ್ತದೆ. ವಿಶೇಷವೆಂದರೆ, ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಒಂದು ವರ್ಷದವರೆಗೆ ಬಂಗಾರ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಅವರು ಜನರಲ್ಲಿ ಮನವಿ ಮಾಡಿದ ಮರುದಿನವೇ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ 2024ರಲ್ಲಿ ಕಳ್ಳಸಾಗಣೆಯನ್ನು ತಡೆಯುವ ಉದ್ದೇಶದಿಂದ ಆಮದು ಸುಂಕವನ್ನು ಶೇ. 15 ರಿಂದ ಶೇ. 6 ಕ್ಕೆ ಇಳಿಸಲಾಗಿತ್ತು. ಆದರೆ ಅಂದಿನಿಂದ ಚಿನ್ನದ ಆಮದು ಗಣನೀಯವಾಗಿ ಏರಿಕೆಯಾಗಿದ್ದು, ಸರ್ಕಾರದ ಚಾಲ್ತಿ ಖಾತೆ ಕೊರತೆಯ ಮೇಲೆ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಹಳೆಯ ದರವನ್ನೇ ಜಾರಿಗೆ ತಂದಿದೆ.
ಈ ಸುಂಕ ಹೆಚ್ಚಳದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಬೆಲೆ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಈ ಘೋಷಣೆಯ ಬೆನ್ನಲ್ಲೇ ಟೈಟನ್ ಸೇರಿದಂತೆ ಪ್ರಮುಖ ಜ್ಯುವೆಲ್ಲರಿ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.
ಕಳೆದ ಹಣಕಾಸು ವರ್ಷದಲ್ಲಿ ಭಾರತ ಸುಮಾರು 72 ಬಿಲಿಯನ್ ಡಾಲರ್ ಮೌಲ್ಯದ ಅಮೂಲ್ಯ ಲೋಹಗಳನ್ನು ಆಮದು ಮಾಡಿಕೊಂಡಿದ್ದು, ಆರ್‌ಬಿಐ ಮತ್ತು ಸರ್ಕಾರವು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
