Home ರಾಜಕೀಯ ದೆಹಲಿಯಲ್ಲಿ ಇಂದು ‘ಇಂಡಿಯಾ ಜನಬಂಧನ್’ ಮಹತ್ವದ ಸಭೆ: ಸಭೆಯಿಂದ ಅಂತರ ಕಾಯ್ದುಕೊಳ್ಳಲಿರುವ ಡಿಎಂಕೆ, ಆಪ್

ದೆಹಲಿಯಲ್ಲಿ ಇಂದು ‘ಇಂಡಿಯಾ ಜನಬಂಧನ್’ ಮಹತ್ವದ ಸಭೆ: ಸಭೆಯಿಂದ ಅಂತರ ಕಾಯ್ದುಕೊಳ್ಳಲಿರುವ ಡಿಎಂಕೆ, ಆಪ್

0

ದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಂಟಿ ಕಾರ್ಯತಂತ್ರ ರೂಪಿಸಲು ಮತ್ತು ಪ್ರತಿಪಕ್ಷಗಳ ಒಕ್ಕೂಟವನ್ನು ಬಲಪಡಿಸಲು ದೇಶ ರಾಜಧಾನಿ ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸೋಮವಾರ (ಜೂನ್ 8) ಪ್ರತಿಪಕ್ಷಗಳ ಮಹತ್ವದ ಸಭೆ ಆಯೋಜಿಸಲಾಗಿದೆ. ‘ಇಂಡಿಯಾ ಜನಬಂಧನ್’ ಹೆಸರಿನ ಈ ವಿಶೇಷ ಸಭೆಯಲ್ಲಿ ಒಟ್ಟು 23 ರಾಜಕೀಯ ಪಕ್ಷಗಳು ಭಾಗವಹಿಸಲಿವೆ.

ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೆಶ್ ಯಾದವ್ ಸೇರಿದಂತೆ ಹಲವು ಪ್ರಮುಖ ನಾಯಕರು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮುಂಬರುವ 2029ರ ಸಾರ್ವತ್ರಿಕ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಒಕ್ಕೂಟದ ಮುಂದಿನ ಭವಿಷ್ಯದ ಕಾರ್ಯಸೂಚಿಯನ್ನು ಸಿದ್ಧಪಡಿಸುವುದು ಹಾಗೂ ಬೆಲೆ ಏರಿಕೆ, ನಿರುದ್ಯೋಗ ಮತ್ತು ತನಿಖಾ ಸಂಸ್ಥೆಗಳ ದುರುಪಯೋಗದಂತಹ ರಾಷ್ಟ್ರೀಯ ವಿಷಯಗಳ ಕುರಿತು ಕೇಂದ್ರ ಸರ್ಕಾರವನ್ನು ಜಂಟಿಯಾಗಿ ಮುತ್ತಿಗೆ ಹಾಕಲು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.

ಒಕ್ಕೂಟದಲ್ಲಿ ಹೆಚ್ಚಿದ ಭಿನ್ನಮತ – ಸಭೆಯಿಂದ ಡಿಎಂಕೆ, ಆಪ್ ದೂರ: ಇಂಡಿಯಾ ಒಕ್ಕೂಟದಲ್ಲಿ ಒಳಗೊಳಗೇ ಹೊಗೆಯಾಡುತ್ತಿದ್ದ ಆಂತರಿಕ ಭಿನ್ನಮತ ಮತ್ತು ಕಾಂಗ್ರೆಸ್‌ನ ಏಕಪಕ್ಷೀಯ ಧೋರಣೆಯ ವಿರುದ್ಧ ಪ್ರತಿಪಕ್ಷಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಸಭೆ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ತಮಗೆ ‘ದ್ರೋಹ’ ಎಸಗಿದೆ ಎಂದು ಗಂಭೀರವಾಗಿ ಆರೋಪಿಸಿರುವ ಆಡಳಿತಾರೂಢ ಡಿಎಂಕೆ (DMK) ಪಕ್ಷವು ಇಂದಿನ ಸಭೆಗೆ ಗೈರುಹಾಜರಾಗುವುದಾಗಿ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ಆಮ್ ಆದ್ಮಿ ಪಕ್ಷವು (AAP) ಈಗಾಗಲೇ ಇಂಡಿಯಾ ಒಕ್ಕೂಟದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದೆ. ಕೆಲವು ಪಕ್ಷಗಳು ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದಾಗಿ ಈ ವಿಶೇಷ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಸಿಪಿಎಂ ತೀವ್ರ ಆಕ್ರೋಶ: ಕೇರಳದಲ್ಲಿ ಸಿಪಿಎಂ ಪಕ್ಷವು ಬಿಜೆಪಿಯೊಂದಿಗೆ ಶಾಮೀಲಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ನಾಯಕರು ಇತ್ತೀಚೆಗೆ ಮಾಡಿದ್ದ ಆರೋಪಗಳ ವಿರುದ್ಧ ಸಿಪಿಎಂ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಖಡಕ್ ಪತ್ರ ಬರೆದಿದ್ದು, ಸಾರ್ವಜನಿಕವಾಗಿ ಮಾಡಿರುವ ಆರೋಪಗಳಿಗೆ ತಕ್ಷಣದ ವಿವರಣೆ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಇಂತಹ ಆಧಾರರಹಿತ ಆರೋಪಗಳು ಪ್ರತಿಪಕ್ಷಗಳ ಒಕ್ಕೂಟದ ಮೂಲ ಆಧಾರವಾಗಿರುವ ಸಹಕಾರದ ತತ್ವಕ್ಕೆ ಸಂಪೂರ್ಣ ವಿರೋಧವಾಗಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದು, ಈ ಪತ್ರದ ಪ್ರತಿಯನ್ನು ಒಕ್ಕೂಟದ ಇತರ ಎಲ್ಲಾ ಪಕ್ಷಗಳ ನಾಯಕರಿಗೂ ರವಾನಿಸಿದ್ದಾರೆ.

ಈ ಎಲ್ಲಾ ಆಂತರಿಕ ಗೊಂದಲಗಳ ನಡುವೆಯೂ, ಭಾರತ ದೇಶದ ವೈವಿಧ್ಯತೆಯಂತೆ ‘ಇಂಡಿಯಾ ಜನಬಂಧನ್’ ಒಕ್ಕೂಟವು ಕೂಡ ತನ್ನ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಒಗ್ಗಟ್ಟಿನಿಂದ ಮುನ್ನಡೆಯಲಿದೆ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version