Home ದೇಶ ರಾಮ ಮಂದಿರ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ: ಸುಪ್ರೀಂ ಕೋರ್ಟ್ ತನಿಖೆಗೆ ಅಖಿಲೇಶ್ ಯಾದವ್ ಆಗ್ರಹ!

ರಾಮ ಮಂದಿರ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ: ಸುಪ್ರೀಂ ಕೋರ್ಟ್ ತನಿಖೆಗೆ ಅಖಿಲೇಶ್ ಯಾದವ್ ಆಗ್ರಹ!

0

ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶ-ವಿದೇಶಗಳ ಕೋಟ್ಯಂತರ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.

ರಾಮ ಮಂದಿರದ ನಿಧಿಯಿಂದ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾಗಿದ್ದು, ಗಾಯಬ್ ಆಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಈ ಹಗರಣದ ಕುರಿತು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ವಿಶ್ವದಾದ್ಯಂತ ಇರುವ ಕೋಟ್ಯಂತರ ರಾಮಭಕ್ತರ ಭಾವನೆಗಳಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಷಯ ಇದಾಗಿದೆ. ಮಂದಿರದ ನಿಧಿ ನಾಪತ್ತೆಯಾಗಿರುವುದರ ಹಿಂದೆ ದೊಡ್ಡ ಪಿತೂರಿ ಅಡಗಿದೆ” ಎಂದು ಆಪಾದಿಸಿದ್ದಾರೆ.

ಇಷ್ಟು ದೊಡ್ಡ ಮಟ್ಟದ ಆಪಾದನೆಗಳು ಕೇಳಿಬರುತ್ತಿದ್ದರೂ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಏಕೆ ಮೌನ ವಹಿಸಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಹಗರಣದ ಕುರಿತು ಟ್ರಸ್ಟ್‌ನ ಯಾವುದೇ ಒಬ್ಬ ಸದಸ್ಯನೂ ಸಾರ್ವಜನಿಕವಾಗಿ ಬಂದು ವಿವರಣೆ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕೃತ ದಾಖಲೆಗಳ ಪ್ರಕಾರ, ರಾಮ ಮಂದಿರ ನಿರ್ಮಾಣಕ್ಕಾಗಿ ಜಗತ್ತಿನಾದ್ಯಂತ ಇರುವ ಭಕ್ತರಿಂದ ಸುಮಾರು ₹3,000 ಕೋಟಿಗೂ ಅಧಿಕ ಹಣ ದೇಣಿಗೆಯಾಗಿ ಹರಿದು ಬಂದಿದೆ.

ಪ್ರಸ್ತುತ ಮಂದಿರದಿಂದ ವಾರ್ಷಿಕವಾಗಿ ನೂರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಅಖಿಲೇಶ್ ಯಾದವ್ ಅವರ ಈ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ರಾಮ ಮಂದಿರ ಟ್ರಸ್ಟ್‌ನ ಸದಸ್ಯ ಮಹಂತ್ ದಿನೇಂದ್ರ ದಾಸ್, “ದೇಣಿಗೆ ಹಣದ ವಿಷಯದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಒಂದು ವೇಳೆ ಯಾರಿಗಾದರೂ ಅನುಮಾನವಿದ್ದರೆ ಈ ಬಗ್ಗೆ ಅಧಿಕೃತ ತನಿಖೆ ನಡೆಸಲಿ” ಎಂದು ಸವಾಲು ಹಾಕಿದ್ದಾರೆ.

You cannot copy content of this page

Exit mobile version