Home ದೇಶ ಪೇಪರ್ ಲೀಕ್: ಅಪರಾಧಕ್ಕೆ 10 ವರ್ಷ ಜೈಲು, 10 ಕೋಟಿ ರೂ. ದಂಡ ವಿಧಿಸಲು ಕೇಂದ್ರ...

ಪೇಪರ್ ಲೀಕ್: ಅಪರಾಧಕ್ಕೆ 10 ವರ್ಷ ಜೈಲು, 10 ಕೋಟಿ ರೂ. ದಂಡ ವಿಧಿಸಲು ಕೇಂದ್ರ ಸರ್ಕಾರ ನಿರ್ಧಾರ

0

ನವದೆಹಲಿ: ನೀಟ್ ಪೇಪರ್ ಲೀಕ್ ವಿವಾದದ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದರು.

ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೊ ಒಂದನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿ ಈ ಮಾಹಿತಿ ನೀಡಿದ್ದರು. ಇದೀಗ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಯ ಜೊತೆಗೆ, ಅಪರಾಧಿಗಳಿಗೆ ವಿಧಿಸುವ ಜೈಲು ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಹಿಂದೆ ಪರೀಕ್ಷಾ ಅಕ್ರಮ ಹಾಗೂ ಪೇಪರ್ ಲೀಕ್ ಪ್ರಕರಣಗಳನ್ನು ‘ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ’ಯ (Public Examinations Act) ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಈಗ ಈ ಕಾಯ್ದೆಗೆ ಪ್ರಮುಖ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಹೊಸ ಪ್ರಸ್ತಾವನೆಯ ಪ್ರಕಾರ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು ಕೇವಲ ಮೂರು ತಿಂಗಳ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಬೇಕಾಗುತ್ತದೆ. ಪೇಪರ್ ಲೀಕ್ ಕೃತ್ಯದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 10 ಕೋಟಿ ರೂಪಾಯಿ ದಂಡ ವಿಧಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ಪ್ರಸ್ತುತ ಜಾರಿಯಲ್ಲಿರುವ ಕಾನೂನಿನ ಪ್ರಕಾರ, ಪೇಪರ್ ಲೀಕ್ ಪ್ರಕರಣದ ಆರೋಪಿಗಳಿಗೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಲು ಮಾತ್ರ ಅವಕಾಶವಿತ್ತು. ಅಲ್ಲದೆ, ಪರೀಕ್ಷಾ ಅಕ್ರಮವನ್ನು ಮುಚ್ಚಿಡಲು ಯತ್ನಿಸುವ ಸೇವಾ ಪೂರೈಕೆದಾರರಿಗೆ (ಸರ್ವಿಸ್ ಪ್ರೊವೈಡರ್) 1 ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಸಂಘಟಿತ ಅಪರಾಧಗಳಲ್ಲಿ (Organised Crime) ಭಾಗಿಯಾದವರಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿ ದಂಡದ ನಿಬಂಧನೆ ಇತ್ತು.

ಸಂಪುಟ ಸಭೆಯು ಈ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿದರೆ, ಮುಂಬರುವ ಸೋಮವಾರದಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 150 ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಬುಧವಾರ ರಾಹುಲ್ ಗಾಂಧಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

You cannot copy content of this page

Exit mobile version