ದೆಹಲಿ: ಭಾರತದ ಜನಸಂಖ್ಯಾ ಬೆಳವಣಿಗೆಯ ಇತಿಹಾಸದಲ್ಲೇ ಇದೀಗ ಮೊದಲ ಬಾರಿಗೆ ದೇಶದ ಒಟ್ಟು ಸಂತಾನೋತ್ಪತ್ತಿ ದರವು (TFR – Total Fertility Rate) ‘ರೀಪ್ಲೇಸ್‌ಮೆಂಟ್ ಮಟ್ಟ’ಕ್ಕಿಂತ ತಳಕ್ಕೆ ಕುಸಿದಿದೆ. ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯು ಪ್ರಕಟಿಸಿರುವ ‘ಶಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ಸ್ಟ್ಯಾಟಿಸ್ಟಿಕಲ್ ರಿಪೋರ್ಟ್ 2024’ ಈ ಆತಂಕಕಾರಿ ಸತ್ಯವನ್ನು ಬಹಿರಂಗಪಡಿಸಿದೆ.
ಮುಂದಿನ ಕೆಲವು ವರ್ಷಗಳ ಕಾಲ ದೇಶದ ಒಟ್ಟಾರೆ ಜನಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಅಂದಾಜಿಸಲಾಗಿದ್ದರೂ, ಸಂತಾನೋತ್ಪತ್ತಿ ದರವು ಕನಿಷ್ಠ 2.15 ರ ಬೆಂಚ್‌ಮಾರ್ಕ್ ದಾಟದಿದ್ದರೆ ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿ ತೀವ್ರ ಕುಸಿತ ಕಾಣಿಸಲಿದೆ. ಭಾರತದ ರೀಪ್ಲೇಸ್‌ಮೆಂಟ್ ಮಟ್ಟವು ಪ್ರಸ್ತುತ 2.1 ರ ನಿಗದಿತ ಗುರಿಗಿಂತ ಕೆಳಗೆ ಬಂದಿದೆ ಎಂದು ವರದಿ ಹೇಳಿದೆ. ‘ರೀಪ್ಲೇಸ್‌ಮೆಂಟ್ ಲೆವೆಲ್’ ಎಂದರೆ ದೇಶದ ಜನಸಂಖ್ಯೆಯು ಹೆಚ್ಚಾಗದೆ ಅಥವಾ ಕಡಿಮೆಯಾಗದೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಮತೋಲನ ಕಾಯ್ದುಕೊಳ್ಳಲು ಪ್ರತಿ ಮಹಿಳೆಯು ಹೊಂದಿರಬೇಕಾದ ಸರಾಸರಿ ಮಕ್ಕಳ ಸಂಖ್ಯೆಯಾಗಿದೆ.
ಯಾವುದೇ ಒಂದು ದೇಶದಲ್ಲಿ ಸಂತಾನೋತ್ಪತ್ತಿ ದರವು ದೀರ್ಘಕಾಲದವರೆಗೆ ಈ ಮಟ್ಟಕ್ಕಿಂತ ಕಡಿಮೆ ಇದ್ದರೆ, ಅಲ್ಲಿನ ಜನಸಂಖ್ಯೆ ಕ್ರಮೇಣ ಕ್ಷೀಣಿಸುತ್ತಾ ಹೋಗುತ್ತದೆ. ವಾಷಿಂಗ್ಟನ್‌ನ ‘ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆಂಡ್ ಇವ್ಯಾಲ್ಯೂಯೇಷನ್’ ತಜ್ಞರ ಅಂದಾಜಿನ ಪ್ರಕಾರ, ಭಾರತದ ಜನಸಂಖ್ಯೆಯು ಇನ್ನು 21 ವರ್ಷಗಳಲ್ಲಿ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ. ಆದರೆ ಆ ನಂತರ ದೇಶದಲ್ಲಿ ಭೀಕರ ಜನಸಂಖ್ಯಾ ಕುಸಿತ ಆರಂಭವಾಗಲಿದೆ.
ಈ ಶತಮಾನದ ಅಂತ್ಯದ ವೇಳೆಗೆ (ವರ್ಷ 2100) ಭಾರತದ ಜನಸಂಖ್ಯೆಯು ಕೇವಲ ಒಂದು ಬಿಲಿಯನ್ (100 ಕೋಟಿ) ಆಸುಪಾಸಿಗೆ ಬಂದು ನಿಲ್ಲಲಿದೆ. ಅಂದರೆ ಪ್ರಸ್ತುತ ಇರುವ ಜನಸಂಖ್ಯೆಗಿಂತ ಸುಮಾರು ಅರ್ಧ ಬಿಲಿಯನ್ (50 ಕೋಟಿ) ಜನಸಂಖ್ಯೆ ಕಡಿಮೆಯಾಗಲಿದೆ. ಪ್ರಸ್ತುತ ದೇಶಾದ್ಯಂತ ಕೇವಲ ಆರು ರಾಜ್ಯಗಳು ಮಾತ್ರ ರೀಪ್ಲೇಸ್‌ಮೆಂಟ್ ಮಟ್ಟಕ್ಕಿಂತ ಹೆಚ್ಚಿನ ಜನನ ದರ ಹೊಂದಿವೆ.
ರಾಷ್ಟ್ರ ರಾಜಧಾನಿ ದೆಹಲಿ ದೇಶದಲ್ಲೇ ಅತ್ಯಂತ ಕಡಿಮೆ ಅಂದರೆ 1.2 ಟಿಎಫ್‌ಆರ್ ದಾಖಲಿಸಿದೆ. ಇದು ವಿಶ್ವದ ಪ್ರಸಿದ್ಧ ದೇಶ ಫಿನ್‌ಲ್ಯಾಂಡ್‌ನ (1.3 TFR) ಜನನ ದರಕ್ಕಿಂತಲೂ ಕಡಿಮೆಯಾಗಿದೆ.
ಜನನ ಪ್ರಮಾಣ ಕುಸಿಯಲು ಪ್ರಮುಖ ಕಾರಣಗಳೇನು?
- ಬದಲಾಗುತ್ತಿರುವ ದಂಪತಿಗಳ ಆಶಯ ಮತ್ತು ಕೃಷಿ/ಜೀವನ ವೆಚ್ಚ: ಆಧುನಿಕ ಯುಗದಲ್ಲಿ ಮಕ್ಕಳ ಶಿಕ್ಷಣ, ಪಾಲನೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಸರಿದೂಗಿಸಲು ಇಂದಿನ ಬಹುತೇಕ ಯುವ ದಂಪತಿಗಳು ಕೇವಲ ‘ಒಂದೇ ಮಗು’ ಎಂಬ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
- ವಿಭಕ್ತ ಕುಟುಂಬಗಳ ಹೆಚ್ಚಳ: ಅವಿಭಕ್ತ ಕುಟುಂಬ ವ್ಯವಸ್ಥೆಯು ಸಂಪೂರ್ಣವಾಗಿ ನಾಶವಾಗುತ್ತಿದ್ದು, ನಗರೀಕರಣ ಮತ್ತು ಉದ್ಯೋಗದ ಕಾರಣಗಳಿಂದಾಗಿ ದೇಶದ ಶೇಕಡಾ 70 ರಷ್ಟು ಜನರು ವಿಭಕ್ತ ಕುಟುಂಬಗಳಲ್ಲಿ (ನ್ಯೂಕ್ಲಿಯರ್ ಫ್ಯಾಮಿಲಿಸ್) ವಾಸಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಕೇವಲ ಪೋಷಕರ ಹೆಗಲ ಮೇಲೆ ಬೀಳುತ್ತಿದ್ದು, ಇದು ಹೆಚ್ಚಿನ ಮಕ್ಕಳನ್ನು ಹೊಂದಲು ಹಿಂಜರಿಯುವಂತೆ ಮಾಡುತ್ತಿದೆ.
- ಸಾಂಸ್ಕೃತಿಕ ಬದಲಾವಣೆ ಮತ್ತು ಟಿವಿ ಪ್ರಭಾವ: ಗ್ರಾಮೀಣ ಭಾಗಗಳಿಗೂ ಕೇಬಲ್ ಟೆಲಿವಿಷನ್ ಮತ್ತು ಇಂಟರ್ನೆಟ್ ಕಾಲಿಟ್ಟಿರುವುದು ಜನನ ದರ ಕುಸಿತಕ್ಕೆ ಮತ್ತೊಂದು ಮುಖ್ಯ ಕಾರಣ ಎಂದು ವರದಿ ಉಲ್ಲೇಖಿಸಿದೆ. ಟಿವಿ ಧಾರಾವಾಹಿಗಳಲ್ಲಿ ಸಣ್ಣ ಕುಟುಂಬಗಳನ್ನು ಆದರ್ಶವಾಗಿ ಬಿಂಬಿಸುತ್ತಿರುವುದು ಮತ್ತು ಮಹಿಳೆಯರ ಯೋಚನಾ ಲಹರಿಯಲ್ಲಿ ಉಂಟಾಗಿರುವ ಬದಲಾವಣೆಗಳು ಸಹ ಇದರೊಂದಿಗೆ ಮುಡಿಪಾಗಿವೆ.
ಜನಸಂಖ್ಯೆಯಲ್ಲಿ ಉಂಟಾಗುತ್ತಿರುವ ಈ ಭಾರಿ ಬದಲಾವಣೆಯು ಭವಿಷ್ಯದಲ್ಲಿ ದೇಶಕ್ಕೆ ಹೊಸ ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳನ್ನು ತಂದೊಡ್ಡಲಿದೆ. ಜನನ ಪ್ರಮಾಣ ನಿರಂತರವಾಗಿ ಕುಸಿದರೆ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಲಿದ್ದು, ದುಡಿಯುವ ಯುವ ಶಕ್ತಿಯ (ವರ್ಕಿಂಗ್ ಫೋರ್ಸ್) ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಇದು ದೇಶದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಹೇರಲಿದೆ.
ಭಾರತದ ಈ ಪರಿಸ್ಥಿತಿಯ ಕುರಿತು ಜಾಗತಿಕ ಟೆಕ್ ದೈತ್ಯ ಎಲಾನ್ ಮಸ್ಕ್ ಸಹ ತೀವ್ರ ಕಳವಳ ವ್ಯಕ್ತಪಡಿಸಿದ್ದು, “ಭಾರತದಲ್ಲಿ ಅತಿ ಹೆಚ್ಚು ಶಿಕ್ಷಣ ಪಡೆದ ವರ್ಗದ ಜನರಲ್ಲಿ ಜನನ ಪ್ರಮಾಣವು ಈಗಾಗಲೇ ಹಲವು ವರ್ಷಗಳ ಹಿಂದೆಯೇ ರೀಪ್ಲೇಸ್‌ಮೆಂಟ್ ಮಟ್ಟಕ್ಕಿಂತ ಕೆಳಗೆ ಕುಸಿದಿದೆ” ಎಂದು ಟ್ವೀಟ್ ಮಾಡಿದ್ದಾರೆ.
