Home ದೇಶ ಜಂತರ್ ಮಂತರ್ ಪ್ರತಿಭಟನೆ ಟ್ರೈಲರ್ ಮಾತ್ರ: ಮುಂದಿನ ವಾರದೊಳಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ಹೋರಾಟ...

ಜಂತರ್ ಮಂತರ್ ಪ್ರತಿಭಟನೆ ಟ್ರೈಲರ್ ಮಾತ್ರ: ಮುಂದಿನ ವಾರದೊಳಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ಹೋರಾಟ ಇನ್ನಷ್ಟು ತೀವ್ರ – ಅಭಿಜೀತ್ ದೀಪ್ಕೆ ಎಚ್ಚರಿಕೆ!

0

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ತಾವು ನಡೆಸಿದ ಬೃಹತ್ ಪ್ರತಿಭಟನೆಯು ಕೇವಲ ‘ಟ್ರೈಲರ್’ ಮಾತ್ರ ಎಂದು ಆನ್‌ಲೈನ್ ಆಂದೋಲನದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ. ಸಚಿವರು ತಮ್ಮ ಪದವಿಯಿಂದ ಕೆಳಗಿಳಿಯುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿಜೆಪಿ ನೇತೃತ್ವದಲ್ಲಿ ನಡೆದ ಈ ಮೊದಲ ಪ್ರತಿಭಟನೆಯಲ್ಲಿ ದೇಶದ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ಯುವಜನರು ಹಾಗೂ ಪೋಷಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. “ನಿನ್ನೆಯ ಆಂದೋಲನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯುವಜನತೆ ಸಾಕ್ಷಿಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ನಾವೆಲ್ಲರೂ ಒಂದಾಗಿ ನಿಂತರೆ ಜಿರಳೆಗಳು ಏನನ್ನು ಬೇಕಾದರೂ ಮಾಡಬಲ್ಲವು ಎಂಬುದನ್ನು ಜಂತರ್ ಮಂತರ್ ಹೋರಾಟ ಮೂಲಕ ಸರ್ಕಾರಕ್ಕೆ ತೋರಿಸಿಕೊಟ್ಟಿದ್ದೇವೆ. ಇದು ಕೇವಲ ಒಂದು ಸಣ್ಣ ಟ್ರೈಲರ್ ಅಷ್ಟೇ” ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಎಂದೂ ಯಾವುದೇ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸದ ಸಾಮಾನ್ಯ ಜನರು ಸಹ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳು, ಪೇಪರ್ ಲೀಕ್ ಹಾಗೂ ಅಕ್ರಮಗಳ ವಿರುದ್ಧ ತಮಗಿರುವ ಆಕ್ರೋಶವನ್ನು ಹೊರಹಾಕಲು ಸ್ವಯಂಪ್ರೇರಿತರಾಗಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಭಿಜೀತ್ ಹೇಳಿದ್ದಾರೆ. ಜನಸಾಮಾನ್ಯರು ಒಟ್ಟಾಗಿ ಧ್ವನಿ ಎತ್ತದಿದ್ದರೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಶಾಂತಿಯುತವಾಗಿ ನಡೆಯುವ ಇಂತಹ ಜನಪರ ಚಳವಳಿಗಳನ್ನು ಹತ್ತಿಕ್ಕಲು ಸರ್ಕಾರದಿಂದ ಸಾಧ್ಯವಿಲ್ಲ. ನಮ್ಮಂತಹ ಜಿರಳೆಗಳು ಅಧಿಕಾರದಲ್ಲಿರುವವರನ್ನು ನೋಡಿ ಎಂದಿಗೂ ಹೆದರುವುದಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

“ನಮ್ಮ ಈ ಆಂದೋಲನ ಇಲ್ಲಿಗೆ ನಿಲ್ಲುವುದಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಡೀ ಒಂದು ಪೀಳಿಗೆಯ ಭವಿಷ್ಯವನ್ನು ದಾರಿ ತಪ್ಪಿಸಿದ್ದಾರೆ. ಮುಂಬರುವ ಒಂದು ವಾರದೊಳಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಅಥವಾ ಪ್ರಧಾನಮಂತ್ರಿಯವರು ಅವರನ್ನು ವಜಾಗೊಳಿಸದಿದ್ದರೆ, ನಮ್ಮ ಪ್ರತಿಭಟನೆಯನ್ನು ದೇಶದ ಮೂಲೆ ಮೂಲೆಗೂ ವಿಸ್ತರಿಸಿ ತಳಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version