ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ದೇಶಾದ್ಯಂತ ಇಂಧನ ಬೆಲೆ ಏರಿಕೆಯಾಗುವ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (Special Additional Excise Duty) ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಗುರುವಾರ ಹೊರಡಿಸಲಾದ ಈ ಆದೇಶದ ಪ್ರಕಾರ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಹಾಗೆಯೇ, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ಇದ್ದ 10 ರೂ.ನಿಂದ ಶೂನ್ಯಕ್ಕೆ ಕಡಿತಗೊಳಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿ, ದೇಶೀಯವಾಗಿ ಇಂಧನ ದರಗಳು ಗಗನಕ್ಕೇರುವುದನ್ನು ತಡೆಯಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ತೈಲ ಬೆಲೆ ಏರಿಕೆಯ ಹೊರೆಯಿಂದ ದೊಡ್ಡ ಮಟ್ಟದ ಸಮಾಧಾನ ಸಿಗುವ ನಿರೀಕ್ಷೆಯಿದೆ.
