Wednesday, June 19, 2024

ಸತ್ಯ | ನ್ಯಾಯ |ಧರ್ಮ

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 125 ದೇಶಗಳಲ್ಲಿ 111 ನೇ ಸ್ಥಾನ!

ಬೆಂಗಳೂರು,ಅಕ್ಟೋಬರ್‌.13:  ಅಕ್ಟೋಬರ್‌ 12, ಗುರುವಾರದಂದು ಬಿಡುಗಡೆಯಾದ 2023ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪೈಕಿ 111ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನವನ್ನು ಹೊರತುಪಡಿಸಿ ಇತರ ನೆರೆಯ ದೇಶಗಳಿಗಿಂತಲೂ ಭಾರತ ಹಿಂದುಳಿದಿದೆ ಎಂದು ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿ ತಿಳಿಸಿದೆ.

100 ರ ಸ್ಕೇಲ್‌ನಲ್ಲಿ ಭಾರತ 28.7 ಅಂಕ ಪಡೆದಿದೆ. ನೂರರಲ್ಲಿ 0 ಅಂಕ ಅತ್ಯುತ್ತಮವೆಂದೂ, 100 ಅತ್ಯಂತ ಕೆಟ್ಟ ಸ್ಥಿತಿಯೆಂದು ಪರಿಗಣಿಸಲಾಗುತ್ತದೆ. ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ಟ್ ಹಂಗರ್ ಹಿಲ್ಫ್ ಎಂಬ ಸರ್ಕಾರೇತರ ಸಂಸ್ಥೆಗಳು ಪ್ರಕಟಿಸಿರುವ ಈ ಸೂಚ್ಯಂಕವು ಭಾರತದ ಹಸಿವಿನ ತೀವ್ರತೆಯನ್ನು ಗಂಭೀರವೆಂದು ಪರಿಗಣಿಸಿದೆ.

Global Hunger Index ಸ್ಕೋರನ್ನು – ಅಪೌಷ್ಟಿಕತೆ, ಮಗುವಿನ ದೈಹಿಕ ಕ್ಷೀಣತೆ (ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಎತ್ತರಕ್ಕೆ  ಕಡಿಮೆ ತೂಕವಿರುವುದು), ಮಗುವಿನ ಬೆಳವಣಿ (ಐದು ವರ್ಷದೊಳಗಿನ ಮಕ್ಕಳು ಅವರ ವಯಸ್ಸಿಗೆ ಕಡಿಮೆ ಎತ್ತರವಿರುವುದು) ಮತ್ತು ಮಕ್ಕಳ ಮರಣ (ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ) ಎಂಬ ನಾಲ್ಕು ಸೂಚಕಗಳ ಮೇಲೆ ಲೆಕ್ಕಹಾಕಲಾಗುತ್ತದೆ.

ಈ ವರ್ಷ ಭಾರತದ ಅಂಕ ನೂರರಲ್ಲಿ 28.7 ಆಗಿದ್ದು,  2015 ರ ಅಂಕ 29.2 ಕ್ಕಿಂತ ಸ್ವಲ್ಪ ಸುಧಾರಣೆಯಾಗಿದೆ. 2008 ರ 35.5 ಮತ್ತು 2000 ರ 38.4 ರ ಅಂಕಿಅಂಶಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಗಣನೀಯವಾದ ಸುಧಾರಣೆಯಾಗಿದೆ.

ಈ ವರ್ಷದ ವರದಿಯ ಪ್ರಕಾರ, ಅಫ್ಘಾನಿಸ್ತಾನವನ್ನು ಹೊರತು ಪಡಿಸಿ ಭಾರತವು ತನ್ನ ನೆರೆ ರಾಷ್ಟ್ರಗಳಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಈ ಬಾರಿಯ ಪಟ್ಟಿಯಲ್ಲಿ ಪಾಕಿಸ್ತಾನ 102 ನೇ, ಬಾಂಗ್ಲಾದೇಶ 81 ನೇ, ನೇಪಾಳ 69 ನೇ ಮತ್ತು ಶ್ರೀಲಂಕಾ 60 ನೇ ಸ್ಥಾನದಲ್ಲಿವೆ.

ಅಫ್ಘಾನಿಸ್ತಾನ, ಕೆರಿಬಿಯನ್ ರಾಷ್ಟ್ರವಾದ ಹೈಟಿ ಮತ್ತು 12 ಸಬ್-ಸಹಾರನ್ ಆಫ್ರಿಕನ್ ದೇಶಗಳು ಭಾರತಕ್ಕಿಂತಲೂ ದಯಾನೀಯ ಸ್ಥಾನದಲ್ಲಿವೆ.

ಸತತ ಮೂರನೇ ವರ್ಷಗಳಿಂದ ಹಸಿವಿನ ಇಂಡೆಕ್ಸ್‌ನಲ್ಲಿ ಕಡಿಮೆ ಶ್ರೇಯಾಂಕವನ್ನು ದಾಖಲಿಸುತ್ತಿರುವುದು ದೋಷಪೂರಿತವಾದ ವಿಧಾನದ ಕಾರಣದಿಂದಾಗಿ ಎಂದು ಆರೋಪಿಸಿರುವ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು, ಈ ಸೂಚ್ಯಂಕದಲ್ಲಿ ಹಸಿವನ್ನು ತಪ್ಪಾಗಿ ಲೆಕ್ಕಹಾಕಲಾಗಿದೆ ಮತ್ತು ಗಂಭೀರ ಮೆಥಡಲಾಜಿಕಲ್ ಸಮಸ್ಯೆಗಳಿಂದ ಕೂಡಿದೆ ಎಂದು ಹೇಳಿಕೊಂಡಿದೆ.

“ಈ ಸೂಚ್ಯಂಕದಲ್ಲಿ ಬಳಸಲಾಗಿರುವ ನಾಲ್ಕು ಸೂಚಕಗಳಲ್ಲಿ ಮೂರು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿವೆ, ಇದನ್ನು ಇಡೀ ಭಾರತದ ಜನಸಂಖ್ಯೆಗೆ ಅನ್ವಯಿಸಲು ಸಾಧ್ಯವಿಲ್ಲ. ನಾಲ್ಕನೇ ಮತ್ತು ಪ್ರಮುಖ ಸೂಚಕ ‘ಅಪೌಷ್ಟಿಕತೆಯ ಅನುಪಾತ’ವನ್ನು ಕೇವಲ 3000 ಸ್ಯಾಂಪಲ್‌ಗಳಿಂದ ಸಂಗ್ರಹಿಸಲಾಗಿದೆ” ಎಂದು ಸಚಿವಾಲಯ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು