ಸಂಬಳವಿಲ್ಲದ ದುಡಿಮೆಯಲ್ಲಿ ಭಾರತವೇ ನಂ. 1: ವಾರಕ್ಕೆ 16 ಗಂಟೆ ಹೆಚ್ಚುವರಿ ಕೆಲಸ; ಎಡಿಪಿ ವರದಿ ಬಹಿರಂಗ

ದೆಹಲಿ: ಉದ್ಯೋಗಿಗಳು ಮತ್ತು ಕಾರ್ಮಿಕರಿಂದ ಉಚಿತವಾಗಿ ದುಡಿಸಿಕೊಳ್ಳುವ ದೇಶಗಳಲ್ಲಿ ಭಾರತವು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ‘ಪೀಪಲ್ಸ್ ಅಟ್ ವರ್ಕ್ 2026’ ಹೆಸರಿನಲ್ಲಿ ಎಡಿಪಿ (ADP) ಸಂಸ್ಥೆ ಬಿಡುಗಡೆ ಮಾಡಿರುವ ನೂತನ ವರದಿ ಬಹಿರಂಗಪಡಿಸಿದೆ. ಭಾರತದಲ್ಲಿ ಕಾರ್ಮಿಕರು ವಾರಕ್ಕೆ ಸರಾಸರಿ 16 ಅಥವಾ ಅದಕ್ಕಿಂತ ಹೆಚ್ಚಿನ ಗಂಟೆಗಳನ್ನು ಯಾವುದೇ ವೇತನವಿಲ್ಲದೆ ಕಳೆಯುತ್ತಿದ್ದಾರೆ.

ವರದಿಯ ವಿವರಗಳ ಪ್ರಕಾರ, ಭಾರತದ ಶೇ. 24ರಷ್ಟು ಕಾರ್ಮಿಕರು ಪ್ರತಿ ವಾರ 16 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಯಾವುದೇ ಸಂಬಳ ಅಥವಾ ಭತ್ಯೆ ಇಲ್ಲದೆ ದುಡಿಯುತ್ತಿದ್ದಾರೆ. ಇನ್ನು ಶೇ. 40ರಷ್ಟು ಉದ್ಯೋಗಿಗಳು ವಾರಕ್ಕೆ 6 ರಿಂದ 15 ಗಂಟೆಗಳ ಕಾಲ ವೇತನರಹಿತ ಕೆಲಸಕ್ಕೆ ಒಳಗಾಗಿ ಶ್ರಮಶೋಷಣೆಯನ್ನು ಎದುರಿಸುತ್ತಿದ್ದಾರೆ. ಅಂದರೆ, ಭಾರತೀಯ ಉದ್ಯೋಗಿಗಳಲ್ಲಿ ಬಹುಪಾಲು ಮಂದಿ ಸಂಸ್ಥೆಗಳಿಗಾಗಿ ನೀಡುವ ಹೆಚ್ಚುವರಿ ಸಮಯವು ಅವರ ಅಧಿಕೃತ ಕೆಲಸದ ಅವಧಿಯಲ್ಲೇ ಪರಿಗಣನೆಗೆ ಬರುತ್ತಿಲ್ಲ.

ಜಾಗತಿಕ ಮಟ್ಟದಲ್ಲಿ ಈ ಪರಿಸ್ಥಿತಿ ಭಾರತದಷ್ಟು ಗಂಭೀರವಾಗಿಲ್ಲ. ವಿಶ್ವವ್ಯಾಪಿ ಶೇ. 62ರಷ್ಟು ಕಾರ್ಮಿಕರು ವಾರಕ್ಕೆ ಗರಿಷ್ಠ 5 ಗಂಟೆಗಳವರೆಗೆ ಮಾತ್ರ ವೇತನರಹಿತ ಕೆಲಸ ಮಾಡಿದರೆ, ಶೇ. 26ರಷ್ಟು ಮಂದಿ 6 ರಿಂದ 15 ಗಂಟೆ ಹಾಗೂ ಕೇವಲ ಶೇ. 12ರಷ್ಟು ಮಂದಿ ಮಾತ್ರ 16ಕ್ಕಿಂತ ಹೆಚ್ಚು ಗಂಟೆ ಉಚಿತವಾಗಿ ದುಡಿಯುತ್ತಿದ್ದಾರೆ. ನೌಕರರಿಂದ ಅತಿಯಾಗಿ ಕೆಲಸ ಮಾಡಿಸಿದ ತಕ್ಷಣ ಉತ್ಪಾದಕತೆ ಹೆಚ್ಚುತ್ತದೆ ಎಂಬ ನಂಬಿಕೆ ತಪ್ಪು ಎಂದು ವರದಿ ಎಚ್ಚರಿಸಿದೆ.

ಇಂತಹ ಶೋಷಣೆಯಿಂದಾಗಿ ಕಾರ್ಮಿಕರು ತಮ್ಮ ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದು, ಉದ್ಯೋಗ ತೊರೆಯುವ ಆಲೋಚನೆ ಅವರಲ್ಲಿ ಹೆಚ್ಚುತ್ತಿದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ.

Related Articles

ಇತ್ತೀಚಿನ ಸುದ್ದಿಗಳು