Home ದೇಶ ಆರ್‌ಎಸ್‌ಎಸ್‌ ವಿರುದ್ಧ ನಿರ್ಬಂಧ ಹೇರುವಂತೆ ಯುಎಸ್‌ಸಿಐಆರ್‌ಎಫ್‌ ನೀಡಿದ್ದ ಕರೆಯನ್ನು ತಿರಸ್ಕರಿಸಿದ ಭಾರತ: ಆಯೋಗದ ಹೇಳಿಕೆ ಪೂರ್ವಗ್ರಹ...

ಆರ್‌ಎಸ್‌ಎಸ್‌ ವಿರುದ್ಧ ನಿರ್ಬಂಧ ಹೇರುವಂತೆ ಯುಎಸ್‌ಸಿಐಆರ್‌ಎಫ್‌ ನೀಡಿದ್ದ ಕರೆಯನ್ನು ತಿರಸ್ಕರಿಸಿದ ಭಾರತ: ಆಯೋಗದ ಹೇಳಿಕೆ ಪೂರ್ವಗ್ರಹ ಪೀಡಿತವಾಗಿದೆ ಎಂದ ಸಚಿವಾಲಯ

0

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರ ವಿರುದ್ಧ ನಿರ್ಬಂಧಗಳನ್ನು ಹೇರುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (USCIRF) ನೀಡಿರುವ ಕರೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ತಿರಸ್ಕರಿಸಿದೆ. ಅಲ್ಲದೆ, ಸದರಿ ಸಂಸ್ಥೆಯು “ಪೂರ್ವಾಗ್ರಹ ಪೀಡಿತ”ವಾಗಿದ್ದು, ಅದಕ್ಕೆ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ತಳ್ಳಿಹಾಕಿದೆ.

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಯುಎಸ್ ಆಯೋಗವು (USCIRF) ವರ್ಷಗಳಿಂದ ಭಾರತದ ವಿರುದ್ಧ “ತಪ್ಪು ಮಾಹಿತಿ ನೀಡುವ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು” ನೀಡುತ್ತಾ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ. “ನೀವು ಪ್ರಸ್ತಾಪಿಸುತ್ತಿರುವ ಈ ಸಂಸ್ಥೆಯು ಒಂದು ಪೂರ್ವಾಗ್ರಹ ಪೀಡಿತ ಸಂಸ್ಥೆಯೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂತಹ ಸಂಸ್ಥೆಗಳಿಂದ ನಾವು ದೂರವಿರಬೇಕು; ಏಕೆಂದರೆ ಅವುಗಳು ತಮ್ಮದೇ ಆದ ಅಜೆಂಡಾವನ್ನು ಹೊಂದಿವೆ ಮತ್ತು ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ,” ಎಂದು ಜೈಸ್ವಾಲ್ ಹೇಳಿದ್ದಾರೆ.

ಆರ್‌ಎಸ್‌ಎಸ್ ನಾಯಕರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಬಾರದು, ಅವರಿಗೆ ರಾಜತಾಂತ್ರಿಕ ಸೌಲಭ್ಯಗಳನ್ನು ನಿರಾಕರಿಸಬೇಕು ಮತ್ತು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗೆ ಕಾರಣರಾದ ಸದಸ್ಯರ ವಿರುದ್ಧ ನಿರ್ದಿಷ್ಟ ನಿರ್ಬಂಧಗಳನ್ನು ಪರಿಗಣಿಸಬೇಕು ಎಂದು ಯುಎಸ್‌ಸಿಐಆರ್‌ಎಫ್ ಬುಧವಾರ ಅಮೆರಿಕ ಸರ್ಕಾರವನ್ನು ಒತ್ತಾಯಿಸಿದ ನಂತರ ಭಾರತದಿಂದ ಈ ಪ್ರತಿಕ್ರಿಯೆ ಬಂದಿದೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಗಸ್ಟ್ 25 ರಿಂದ ಪ್ರಾರಂಭವಾಗಲಿರುವ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಮುನ್ನವೇ ಈ ಶಿಫಾರಸು ಮಾಡಲಾಗಿತ್ತು.

ಯುಎಸ್‌ಸಿಐಆರ್‌ಎಫ್ ಅಧ್ಯಕ್ಷ ಆಸಿಫ್ ಮಹಮೂದ್, ಆರ್‌ಎಸ್‌ಎಸ್ ಅನ್ನು ಒಂದು ಮಾತೃ ಸಂಸ್ಥೆ ಎಂದು ವಿವರಿಸಿದ್ದು, ಅದರ ಅಂಗಸಂಸ್ಥೆಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದ್ದಾರೆ. ಕಮಿಷನರ್ ಜೀನ್ ಮಿಲ್ಸ್ ಕೂಡ ಪ್ರತ್ಯೇಕವಾಗಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯ ಆರೋಪ ಹೊತ್ತಿರುವ ಆರ್‌ಎಸ್‌ಎಸ್ ಸದಸ್ಯರ ವಿರುದ್ಧ ನಿರ್ಬಂಧಗಳಿಗೆ ಕರೆ ನೀಡಿದ್ದಾರೆ.

ಭಾರತದ ವಿರುದ್ಧ ಯುಎಸ್‌ಸಿಐಆರ್‌ಎಫ್ ಟೀಕೆ

ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿಯನ್ನು ಯುಎಸ್‌ಸಿಐಆರ್‌ಎಫ್ ಪದೇಪದೇ ಟೀಕಿಸುತ್ತಾ ಬಂದಿದೆ. ತನ್ನ ಮಾರ್ಚ್ ತಿಂಗಳ ವಾರ್ಷಿಕ ವರದಿಯಲ್ಲಿ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವ್ಯವಸ್ಥಿತ ಮತ್ತು ನಿರಂತರ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ, ಅಮೆರಿಕವು ಭಾರತವನ್ನು “ವಿಶೇಷ ಕಳವಳಕಾರಿ ದೇಶ” (Country of Particular Concern) ಎಂದು ಘೋಷಿಸಬೇಕೆಂದು ಆಯೋಗ ಶಿಫಾರಸು ಮಾಡಿತ್ತು.

ಅಲ್ಲದೆ, ಆರ್‌ಎಸ್‌ಎಸ್ ಮತ್ತು ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ‘ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್’ (ರಾ – RAW) ಸೇರಿದಂತೆ ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ನಿರ್ದಿಷ್ಟ ನಿರ್ಬಂಧಗಳನ್ನು ಹೇರಲು ಅದು ಶಿಫಾರಸು ಮಾಡಿತ್ತು. ಆದರೆ ಈ ಆಯೋಗದ ಶಿಫಾರಸುಗಳು ಅಮೆರಿಕ ಸರ್ಕಾರದ ಮೇಲೆ ಯಾವುದೇ ಕಾನೂನುಬದ್ಧ ಬಾಧ್ಯತೆಯನ್ನು ಹೊಂದಿರುವುದಿಲ್ಲ.

ಮಾರ್ಚ್ ವರದಿಯನ್ನು “ವಿಕೃತ ಮತ್ತು ಆಯ್ದ ಅಂಶಗಳನ್ನಷ್ಟೇ ಒಳಗೊಂಡ ವರದಿ” ಎಂದು ತಳ್ಳಿಹಾಕಿದ್ದ ಭಾರತ, ಯುಎಸ್‌ಸಿಐಆರ್‌ಎಫ್ ವಿಶ್ವಾಸಾರ್ಹವಲ್ಲದ ಮೂಲಗಳು ಮತ್ತು ಸೈದ್ಧಾಂತಿಕ ನಿರೂಪಣೆಗಳ ಮೇಲೆ ಅವಲಂಬಿತವಾಗಿದೆ ಎಂದು ಆರೋಪಿಸಿತ್ತು.

ಈ ಹಿಂದೆಯೂ ಯುಎಸ್‌ಸಿಐಆರ್‌ಎಫ್, ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಸಂಬಂಧದ ಬಗ್ಗೆ ಹಾಗೂ ಪೌರತ್ವ, ಧರ್ಮ ಮತಾಂತರ ಮತ್ತು ಗೋಹತ್ಯೆಗೆ ಸಂಬಂಧಿಸಿದ ತಾರತಮ್ಯದ ಕಾನೂನುಗಳ ಕುರಿತು ಕಳವಳ ವ್ಯಕ್ತಪಡಿಸಿತ್ತು.

You cannot copy content of this page

Exit mobile version