ದೆಹಲಿ: ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿರುವ ಎರಡು ವಾರಗಳ ಅವಧಿಯ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಭಾರತ ಸರ್ಕಾರ ಮುಕ್ತಕಂಠದಿಂದ ಸ್ವಾಗತಿಸಿದೆ. ಈ ಮಹತ್ವದ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಶಾಂತಿ ಮತ್ತು ಸಾಮಾನ್ಯ ಸ್ಥಿತಿ ನೆಲೆಸಲು ಸಹಕಾರಿಯಾಗಲಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ. ಈ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
“ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಪ್ರಸ್ತುತ ಬಿಕ್ಕಟ್ಟನ್ನು ನಿವಾರಿಸಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳೇ ಏಕೈಕ ದಾರಿ ಎಂದು ಭಾರತ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಈ ಸಂಘರ್ಷದಿಂದಾಗಿ ಜಾಗತಿಕವಾಗಿ ಜನರು ಸಂಕಷ್ಟ ಅನುಭವಿಸಿದ್ದಾರೆ. ವಿಶೇಷವಾಗಿ ತೈಲ ಸಾರಿಗೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಭಾರಿ ಅಡಚಣೆಯಾಗಿತ್ತು. ಈ ಒಪ್ಪಂದದ ಮೂಲಕ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಮುಕ್ತ ವ್ಯಾಪಾರ ಚಟುವಟಿಕೆಗಳು ಆರಂಭವಾಗಲಿವೆ ಎಂದು ನಾವು ಆಶಿಸುತ್ತೇವೆ,” ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯುದ್ಧ ಮತ್ತು ಬಲಪ್ರಯೋಗಕ್ಕಿಂತ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕವೇ ಶಾಶ್ವತ ಶಾಂತಿ ಸಾಧ್ಯ ಎಂಬ ತನ್ನ ನೀತಿಗೆ ಬದ್ಧವಾಗಿರುವುದನ್ನು ಭಾರತ ಈ ಸಂದರ್ಭದಲ್ಲಿ ಪುನರುಚ್ಚರಿಸಿದೆ. ಸುಮಾರು 40 ದಿನಗಳ ಕಾಲ ನಡೆದ ಭೀಕರ ಸಂಘರ್ಷಕ್ಕೆ ಬುಧವಾರ ಬೆಳಿಗ್ಗಯಿಂದ ತಾತ್ಕಾಲಿಕ ವಿರಾಮ ಬಿದ್ದಿದೆ. ಮುಂದಿನ ಎರಡು ವಾರಗಳ ಕಾಲ ಈ ಶಾಂತಿ ಒಪ್ಪಂದ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಎರಡೂ ದೇಶಗಳ ಪ್ರತಿನಿಧಿಗಳು ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಈ ಚರ್ಚೆಗಳು ಯಶಸ್ವಿಯಾದರೆ ಯುದ್ಧಕ್ಕೆ ಶಾಶ್ವತ ಮುಕ್ತಾಯ ಬೀಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
