Wednesday, March 18, 2026

ಸತ್ಯ | ನ್ಯಾಯ |ಧರ್ಮ

ಯುವ ಪದವೀಧರರಲ್ಲಿ ಶೇ. 40 ರಷ್ಟು ನಿರುದ್ಯೋಗ: ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ವರದಿ

ಯುವ ಪದವೀಧರರಲ್ಲಿ ಶೇಕಡಾ 40 ರಷ್ಟು ನಿರುದ್ಯೋಗಿಗಳೇ! ದೇಶದಲ್ಲಿ 20 ರಿಂದ 29 ವರ್ಷಗಳ ನಡುವಿನ ವಯಸ್ಸಿನ 6.30 ಕೋಟಿ ಪದವೀಧರರಲ್ಲಿ 1.10 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ.

ಇವರಲ್ಲಿ ಕೇವಲ ಕೆಲವೇ ಕೆಲವು ಮಂದಿ ಮಾತ್ರ ಪದವಿ ಪಡೆದ ವರ್ಷದೊಳಗೇ ಸ್ಥಿರವಾದ ಸಂಬಳವಿರುವ ಉದ್ಯೋಗಗಳನ್ನು ಸಂಪಾದಿಸಿದ್ದಾರೆ ಎಂದು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯವು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಪದವಿ ಪೂರೈಸಿ ನಿರುದ್ಯೋಗಿಗಳಾಗಿ ತಮ್ಮನ್ನು ತಾವು ನೋಂದಾಯಿಸಿಕೊಂಡ ಒಂದು ವರ್ಷದ ಒಳಗೆ ಸ್ಥಿರವಾದ ಸಂಬಳದೊಂದಿಗೆ ಶಾಶ್ವತ ಉದ್ಯೋಗ ಪಡೆದ ಪದವೀಧರರು ಕೇವಲ ಶೇಕಡಾ 7 ರಷ್ಟು ಮಂದಿ ಮಾತ್ರ ಇದ್ದಾರೆ ಎಂದು ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ’ ಹೆಸರಿನಲ್ಲಿ ಮಂಗಳವಾರ ಬಿಡುಗಡೆಯಾದ ವರದಿ ತಿಳಿಸಿದೆ. ಆ ವರದಿಯ ಪ್ರಕಾರ ದೇಶದಲ್ಲಿ ಪದವೀಧರರ ನಿರುದ್ಯೋಗವು ಅತ್ಯಂತ ಹೆಚ್ಚಾಗಿದೆ.

15 ರಿಂದ 25 ವರ್ಷಗಳ ನಡುವಿನ ವಯಸ್ಸಿನವರಲ್ಲಿ ಶೇಕಡಾ 40 ರಷ್ಟು, 25 – 29 ವರ್ಷಗಳ ನಡುವಿನವರಲ್ಲಿ ಶೇಕಡಾ 20 ರಷ್ಟು ಮಂದಿ ಪದವೀಧರ ನಿರುದ್ಯೋಗಿಗಳಾಗಿದ್ದಾರೆ. ಪದವೀಧರರ ಜನಸಂಖ್ಯೆಯ ಹೆಚ್ಚಳವು ಕೂಡ ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಾಗಲು ಕಾರಣವೆಂದು ವರದಿ ತಿಳಿಸಿದೆ.

2023ರ ವೇಳೆಗೆ ದೇಶದ 20 ರಿಂದ 29 ವರ್ಷಗಳ ನಡುವಿನ 6.30 ಕೋಟಿ ಪದವೀಧರರಲ್ಲಿ 1.10 ಕೋಟಿ ಮಂದಿ ನಿರುದ್ಯೋಗಿಗಳಾಗಿ ಉಳಿದಿದ್ದಾರೆ ಎಂದು ವರದಿ ಹೇಳಿದೆ. ಶಿಕ್ಷಣವನ್ನು ಮುಂದುವರಿಸುವ ಯುವಜನರ ಸಂಖ್ಯೆಯು 2017ರಲ್ಲಿ ಶೇಕಡಾ 38 ಕ್ಕೆ ಇಳಿಯಲಾಗಿ, 2024ರ ವೇಳೆಗೆ ಅದು ಶೇಕಡಾ 34 ಕ್ಕೆ ಕುಸಿದಿದೆ. ತಮ್ಮ ಕುಟುಂಬದ ಪೋಷಣೆಯ ಭಾರ ಯುವಜನರ ಮೇಲೆ ಬೀಳುವುದೇ ಅವರನ್ನು ಶಿಕ್ಷಣದಿಂದ ದೂರ ಮಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿ ವರ್ಷ 50 ಲಕ್ಷ ಪದವೀಧರರು ಹೆಚ್ಚುವರಿಯಾಗಿ ಬರುತ್ತಿದ್ದು, ಅವರಲ್ಲಿ ಕೇವಲ 28 ಲಕ್ಷ ಮಂದಿಗೆ ಮಾತ್ರ ಉದ್ಯೋಗ ಲಭಿಸುತ್ತಿದೆ ಎಂದು ತಿಳಿಸಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಪ್ರವೇಶ ಹಂತದಲ್ಲಿ ಪದವೀಧರರ ಸಂಬಳವು ಪದವೀಧರರಲ್ಲದವರ ಸಂಬಳಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page