ನಕಲಿ ಹೈಕೋರ್ಟ್ ಆದೇಶಗಳನ್ನು ನಂಬಿ 129 ಬೆಟ್ಟಿಂಗ್ ವೆಬ್ಸೈಟ್ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ: ಪೊಲೀಸ್ ತನಿಖೆ ಆರಂಭ
ಅಲಹಾಬಾದ್ ಮತ್ತು ರಾಜಸ್ಥಾನ ಹೈಕೋರ್ಟ್ಗಳ ಹೆಸರಿನಲ್ಲಿ ಸೃಷ್ಟಿಸಲಾದ ನಕಲಿ ನ್ಯಾಯಾಲಯದ ಆದೇಶಗಳ ಆಧಾರದ ಮೇಲೆ ಕೇಂದ್ರ ದೂರಸಂಪರ್ಕ ಇಲಾಖೆ 129 ಬೆಟ್ಟಿಂಗ್ ವೆಬ್ಸೈಟ್ಗಳನ್ನು ನಿರ್ಬಂಧಿಸಿರುವುದು ರಾಯಿಟರ್ಸ್ ತನಿಖೆಯಲ್ಲಿ ಬಯಲಾಗಿದೆ.
ಲಿಂಕ್ ನಕಲಿಸಲಾಗಿದೆ ✓
ನ್ಯಾಯಾಲಯದ ನಕಲಿ ಆದೇಶಗಳನ್ನು (Fake Court Orders) ನಿಜವೆಂದು ನಂಬಿ ಕೇಂದ್ರ ಸರ್ಕಾರವು ಈ ವರ್ಷ ದೇಶದಾದ್ಯಂತ 129 ಅಕ್ರಮ ಬೆಟ್ಟಿಂಗ್ ವೆಬ್ಸೈಟ್ಗಳನ್ನು ನಿರ್ಬಂಧಿಸುವಂತೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISPs) ಆದೇಶಿಸಿರುವ ಆಘಾತಕಾರಿ ಸಂಗತಿಯನ್ನು ಸುದ್ದಿ ಸಂಸ್ಥೆ ‘ರಾಯಿಟರ್ಸ್‘ (Reuters) ತನಿಖಾ ವರದಿ ಬಯಲಿಗೆಳೆದಿದೆ. ರಾಜಸ್ಥಾನ ಮತ್ತು ಅಲಹಾಬಾದ್ ಹೈಕೋರ್ಟ್ಗಳ ಹೆಸರಿನಲ್ಲಿ ಸೃಷ್ಟಿಸಲಾದ ಈ ನಕಲಿ ಆದೇಶಗಳು ಸರ್ಕಾರದ ಅಧಿಕೃತ ವಿಷಯ ನಿರ್ಬಂಧನಾ ವ್ಯವಸ್ಥೆಯ ಕಣ್ಣುತಪ್ಪಿಸಿ ಜಾರಿಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಈ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್, ನಕಲಿ ಆದೇಶ ಸೃಷ್ಟಿಸಿದ ಅಪರಿಚಿತರ ವಿರುದ್ಧ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಕೇಂದ್ರ ದೂರಸಂಪರ್ಕ ಇಲಾಖೆಯು (DoT) ಕಳೆದ ಜುಲೈ 21 ಮತ್ತು ಸೆಪ್ಟೆಂಬರ್ 2ರಂದು ಎರಡು ಪ್ರತ್ಯೇಕ ವೆಬ್ಸೈಟ್ ನಿರ್ಬಂಧನಾ ನಿರ್ದೇಶನಗಳನ್ನು ಹೊರಡಿಸಿತ್ತು. ಇಲಾಖೆಯ ವೆಬ್ಸೈಟ್ನಲ್ಲಿ ಎಂದಿನಂತೆ ಅಪ್ಲೋಡ್ ಮಾಡಲಾಗಿದ್ದ ಈ ನಿರ್ದೇಶನಗಳೊಂದಿಗೆ ರಾಜಸ್ಥಾನ ಮತ್ತು ಉತ್ತರ ಪ್ರದೇಶ ಹೈಕೋರ್ಟ್ಗಳ ಹೆಸರಿನಲ್ಲಿದ್ದ ಇ-ಮೇಲ್ ಪ್ರತಿಗಳನ್ನು ಲಗತ್ತಿಸಲಾಗಿತ್ತು.
ಆದರೆ, ಈ ಎರಡೂ ಆದೇಶಗಳು ಸಂಬಂಧಪಟ್ಟ ನ್ಯಾಯಾಲಯಗಳ ಅಧಿಕೃತ ಆನ್ಲೈನ್ ದಾಖಲೆಗಳಲ್ಲಿ ಎಲ್ಲಿಯೂ ನೋಂದಣಿಯಾಗಿಲ್ಲ ಎಂಬುದು ರಾಯಿಟರ್ಸ್ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಈ ಕುರಿತು ರಾಯಿಟರ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಜಸ್ಥಾನ ಹೈಕೋರ್ಟ್ನ ರಿಜಿಸ್ಟ್ರಾರ್, ತಮ್ಮ ನ್ಯಾಯಾಲಯದ ಹೆಸರಿನಲ್ಲಿರುವ ಆದೇಶವು ಮೇಲ್ನೋಟಕ್ಕೆ ನಕಲಿಯಂತೆ ಕಂಡುಬರುತ್ತಿದೆ ಹಾಗೂ ತಮ್ಮ ಸರ್ವರ್ನಲ್ಲಿ ಅಂತಹ ಯಾವುದೇ ದಾಖಲೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಅಲಹಾಬಾದ್ ಹೈಕೋರ್ಟ್ ಕೂಡ ಇದು ನಕಲಿ ಆದೇಶವೆಂದು ದೃಢಪಡಿಸಿ ನವೆಂಬರ್ 6ರಂದು ಪೊಲೀಸ್ ದೂರು ದಾಖಲಿಸಿದೆ.
ತನಿಖೆಯ ವಿವರಗಳ ಪ್ರಕಾರ, ಜುಲೈ 19ರ ಭಾನುವಾರ ರಾತ್ರಿ 8:59ಕ್ಕೆ ದೂರಸಂಪರ್ಕ ಇಲಾಖೆಗೆ ‘ಆರ್ಯನ್ ಚೌಧರಿ’ ಎಂಬ ವಕೀಲರ ಹೆಸರಿನಲ್ಲಿ ಇ-ಮೇಲ್ ಬಂದಿತ್ತು. ಅದರೊಂದಿಗೆ ರಾಜಸ್ಥಾನ ಹೈಕೋರ್ಟ್ನ ನಕಲಿ ಆದೇಶವನ್ನು ಲಗತ್ತಿಸಲಾಗಿತ್ತು. ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಡಿ ಭಾರತೀಯ ಐಟಿ ಕಾಯ್ದೆಯ ಪ್ರಬಲ ಸೆಕ್ಷನ್ಗಳನ್ನು ಉಲ್ಲೇಖಿಸಿ, 24 ಗಂಟೆಗಳ ಒಳಗಾಗಿ 34 ಬೆಟ್ಟಿಂಗ್ ವೆಬ್ಸೈಟ್ಗಳನ್ನು ನಿರ್ಬಂಧಿಸುವಂತೆ ಅದರಲ್ಲಿ ಸೂಚಿಸಲಾಗಿತ್ತು. ಅದಾದ ಎರಡೇ ದಿನಗಳಲ್ಲಿ ಸರ್ಕಾರವು ಇಂಟರ್ನೆಟ್ ಕಂಪನಿಗಳಿಗೆ ಈ 34 ಸೈಟ್ಗಳನ್ನು ತೆಗೆದುಹಾಕಲು ಆದೇಶಿಸಿತ್ತು. ವಿಪರ್ಯಾಸವೆಂದರೆ, ಆ ಇ-ಮೇಲ್ ವಿಳಾಸಕ್ಕೆ ರಾಯಿಟರ್ಸ್ ಸಂದೇಶ ಕಳುಹಿಸಿದಾಗ ‘ಅಂತಹ ವಿಳಾಸ ಅಸ್ತಿತ್ವದಲ್ಲಿಲ್ಲ’ (Recipient not found) ಎಂಬ ಉತ್ತರ ಬಂದಿದೆ.
ಇನ್ನೊಂದು ಪ್ರಕರಣದಲ್ಲಿ, ಆಗಸ್ಟ್ 22ರಂದು ‘ಕಾರ್ತಿಕೇಯ ಪಾಂಡೆ’ ಎಂಬ ವಕೀಲರ ಹೆಸರಿನಲ್ಲಿ ಭಾರತೀಯ ಅಧಿಕಾರಿಗಳಿಗೆ ಮತ್ತೊಂದು ನಕಲಿ ಆದೇಶವನ್ನು ಕಳುಹಿಸಲಾಗಿತ್ತು. ಆಗಸ್ಟ್ 14ರ ದಿನಾಂಕವಿದ್ದ ಈ ಆದೇಶದಲ್ಲಿ ಅಲಹಾಬಾದ್ ಹೈಕೋರ್ಟ್ನ ಲಾಂಛನ, ನೀಲಿ ಮೊಹರು ಹಾಗೂ ನ್ಯಾಯಮೂರ್ತಿ ಗರಿಮಾ ಪ್ರಸಾದ್ ಅವರ ನಕಲಿ ಸಹಿಯನ್ನು ಬಳಸಲಾಗಿತ್ತು. ಅಷ್ಟೇ ಅಲ್ಲದೆ, ಅಸಲಿಯೆಂದು ನಂಬಿಸಲು ಕ್ಯೂಆರ್ ಕೋಡ್ (QR Code) ಕೂಡ ಅಳವಡಿಸಲಾಗಿತ್ತು.
ಆದರೆ, ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಅದು ಯಾವುದೋ ಅನಾಮಧೇಯ ವೆಬ್ಪುಟಕ್ಕೆ ಕರೆದೊಯ್ದು ಕೇವಲ ಒಂದು ಸಾಲಿನ ಕೇಸ್ ಸಂಖ್ಯೆಯನ್ನು ತೋರಿಸುತ್ತಿತ್ತು. ಅಧಿಕಾರಿಗಳ ನಡುವಿನ ಪತ್ರವ್ಯವಹಾರದ ನಂತರ, ಸೆಪ್ಟೆಂಬರ್ 2ರಂದು ಕೇಂದ್ರ ಅಧಿಕಾರಿಯೊಬ್ಬರು 95 ಬೆಟ್ಟಿಂಗ್ ವೆಬ್ಸೈಟ್ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಆದೇಶ ಹೊರಡಿಸಿದ್ದರು. “ನ್ಯಾಯಮೂರ್ತಿ ಗರಿಮಾ ಪ್ರಸಾದ್ ಅವರ ಪೀಠದಿಂದ ಇಂತಹ ಯಾವುದೇ ಆದೇಶ ಹೊರಬಿದ್ದಿಲ್ಲ” ಎಂದು ಅವರ ಕಚೇರಿ ಪೊಲೀಸ್ ದೂರಿನಲ್ಲಿ ಸ್ಪಷ್ಟಪಡಿಸಿದೆ.
ನ್ಯಾಯಾಧೀಶರ ನಕಲಿ ಸಹಿಗಳನ್ನು ಬಳಸಿ ಆದೇಶಗಳನ್ನು ಸೃಷ್ಟಿಸುವುದು ಸಾರ್ವಜನಿಕರ ವಿಶ್ವಾಸದ ಬುಡಕ್ಕೇ ಕೊಡಲಿ ಪೆಟ್ಟು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷವಷ್ಟೇ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಕಲಿ ಆದೇಶಗಳನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆಯೇ ಎಂಬ ನಿಟ್ಟಿನಲ್ಲಿ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ:
ಕುಡಿಯುವ ನೀರಿನ ಯೋಜನೆಯಲ್ಲಿ ನಿರ್ಲಕ್ಷ್ಯ: ಎಲ್ಆ್ಯಂಡ್ಟಿಗೆ ಕಪ್ಪುಪಟ್ಟಿ ಬಿಸಿ ಮುಟ್ಟಿಸಿದ ಸಚಿವ ಈಶ್ವರ ಖಂಡ್ರೆ!
https://peepalmedia.com/karnataka/minister-ishwara-khandre-who-touched-the-blacklist
Peepal Media
Peepal Media · ದೇಶ ವಿಭಾಗ