ಪಶ್ಚಿಮ ಬಂಗಾಳದಲ್ಲಿ ಚರ್ಚ್ ಉದ್ಘಾಟನೆ ವೇಳೆ ದಾಂಧಲೆ: ಬಿಷಪ್, ಪಾದ್ರಿಗಳು ಮತ್ತು ಭಕ್ತರ ಮೇಲೆ ಹಲ್ಲೆ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಚರ್ಚ್ ಉದ್ಘಾಟನೆ ವೇಳೆ ಹಲ್ಲೆ ಮತ್ತು ದಾಂಧಲೆ ನಡೆದ ಆರೋಪ ಕೇಳಿಬಂದಿದೆ. ಪಾದ್ರಿಗಳು, ಭಕ್ತರ ಮೇಲೆ ಹಲ್ಲೆ, ಶಿಲುಬೆ ಧ್ವಂಸ, ಮೊಬೈಲ್ ಫೋನ್‌ಗಳಿಗೆ ಹಾನಿ; ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಲಿಂಕ್ ನಕಲಿಸಲಾಗಿದೆ ✓
ಚರ್ಚ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಸುಮಾರು 30ರಿಂದ 35 ಮಂದಿಯ ಗುಂಪೊಂದು ಒಳನುಗ್ಗಿ ಪಾದ್ರಿಗಳು ಹಾಗೂ ಭಕ್ತರ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯರ ತೊಟ್ಡಿದ್ದ ಸಾಂಪ್ರದಾಯಿಕ ಬಳೆಗಳನ್ನು ತೆಗೆಸಲು ಒತ್ತಾಯಿಸಲಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಚರ್ಚ್ ಉದ್ಘಾಟನಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆದಿದ್ದು, ಬಿಷಪ್, ಪಾದ್ರಿಗಳು ಮತ್ತು ಪ್ರಾರ್ಥನೆಗೆ ಸೇರಿದ್ದ ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸಂತಿ ಪೊಲೀಸ್ ಠಾಣೆ ವ್ಯಾಪ್ತಿಯ ನರಾಯಣತಲಾದಲ್ಲಿ ಶನಿವಾರ ಈ ಘಟನೆ ನಡೆದಿದೆ. ಚರ್ಚ್ ಉದ್ಘಾಟನೆಗೆ ಬಿಷಪ್ ಸುಬ್ರತಾ ಚಕ್ರವರ್ತಿ, ಹಲವು ಪಾದ್ರಿಗಳು ಹಾಗೂ ಭಕ್ತರು ಸೇರಿದ್ದರು. ಈ ವೇಳೆ ಸುಮಾರು 30ರಿಂದ 35 ಮಂದಿಯ ಗುಂಪೊಂದು ಚರ್ಚ್ ಆವರಣಕ್ಕೆ ನುಗ್ಗಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿದೆ ಎಂದು ದೂರು ದಾಖಲಾಗಿದೆ.
“30ರಿಂದ 35 ಮಂದಿ ಚರ್ಚ್ ಆವರಣಕ್ಕೆ ನುಗ್ಗಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ದೂರು ಬಂದಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲ್ಲೆ ನಡೆಸಿದವರು ಚರ್ಚ್‌ನಲ್ಲಿದ್ದ ಶಿಲುಬೆಯನ್ನು ಹಾಳುಗೆಡವಿದ್ದಾರೆ. ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಯತ್ನಿಸಿದವರ ಫೋನ್‌ಗಳನ್ನು ಒಡೆದುಹಾಕಿದ್ದಾರೆ ಎನ್ನಲಾಗಿದೆ. ಮಹಿಳೆಯರ ಮೇಲೂ ಹಲ್ಲೆ ನಡೆಸಿ, ಅವರು ಧರಿಸಿದ್ದ ಸಾಂಪ್ರದಾಯಿಕ ಬಿಳಿ ಶಂಖದ ಬಳೆಗಳನ್ನು (ಶಾಖಾ) ತೆಗೆದುಹಾಕುವಂತೆ ಒತ್ತಾಯಿಸಿ ಹೊರಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಚರ್ಚ್‌ನಲ್ಲಿ ಇನ್ನು ಮುಂದೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂದೂ ಭಕ್ತರು ಆರೋಪಿಸಿದ್ದಾರೆ.
ಈ ಘಟನೆಯನ್ನು ಬಂಗೀಯ ಕ್ರಿಸ್ತೀಯ ಪರಿಷದ್ (BCP) ಖಂಡಿಸಿದೆ. ಸಂಘಟನೆಯ ಕಾರ್ಯಾಧ್ಯಕ್ಷ ಹೆರೊಡ್ ಮಲ್ಲಿಕ್, “ಬಿಷಪ್ ಎದುರೇ ಹಲವು ಪಾದ್ರಿಗಳ ಮೇಲೆ ಹಲ್ಲೆ ನಡೆದಿರುವುದು ಹಿಂದೆಂದೂ ಕಂಡಿರದ ಘಟನೆ” ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಇಂತಹ ದಾಳಿಗಳು ನಡೆಯುತ್ತಿವೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ, ಬಸಂತಿ ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡು ಕ್ರೈಸ್ತ ಗುಂಪುಗಳ ನಡುವಿನ ಒಳಜಗಳದ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ನವೆಂಬರ್ 2ರ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ.
ಇದಕ್ಕೂ ಕೆಲವು ವಾರಗಳ ಹಿಂದೆ ಪಶ್ಚಿಮ ಮೇದಿನಿಪುರ ಜಿಲ್ಲೆಯ ಮೂರು ಕ್ರೈಸ್ತ ಕುಟುಂಬಗಳು ತಮ್ಮ ಧರ್ಮವನ್ನು ತ್ಯಜಿಸುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದವು. ಈ ಘಟನೆಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕ್ರೈಸ್ತ ಸಮುದಾಯದ ಸುರಕ್ಷತೆ ಕುರಿತು ಕಳವಳ ವ್ಯಕ್ತವಾಗಿದೆ.
Peepal Media
Peepal Media · ದೇಶ ವಿಭಾಗ