Home ದೆಹಲಿ ಶಾಸನಸಭೆಗಳಲ್ಲಿ ಯುವ ರಾಜಕಾರಣ: 40 ವರ್ಷದೊಳಗಿನ ಜನಪ್ರತಿನಿಧಿಗಳಲ್ಲಿ ಮೂವರಲ್ಲಿ ಒಬ್ಬರು ಕುಟುಂಬ ರಾಜಕಾರಣದಿಂದ ಬಂದವರು!

ಶಾಸನಸಭೆಗಳಲ್ಲಿ ಯುವ ರಾಜಕಾರಣ: 40 ವರ್ಷದೊಳಗಿನ ಜನಪ್ರತಿನಿಧಿಗಳಲ್ಲಿ ಮೂವರಲ್ಲಿ ಒಬ್ಬರು ಕುಟುಂಬ ರಾಜಕಾರಣದಿಂದ ಬಂದವರು!

0

ದೆಹಲಿ: ದೇಶದ ರಾಜಧಾನಿ ದೆಹಲಿ, ರಾಂಚಿ, ಮುಂಬೈ, ಪಾಟ್ನಾ ಸೇರಿದಂತೆ ದೇಶಾದ್ಯಂತ ಯುವಜನರು ಬೀದಿಗಿಳಿದು ತಮ್ಮ ಧ್ವನಿಯನ್ನು ಎತ್ತುತ್ತಿದ್ದಾರೆ. ಬಿಜೆಪಿಯಿಂದ ಹಿಡಿದು ಕಾಂಗ್ರೆಸ್‌ವರೆಗೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮನ್ನು ಸಂಪರ್ಕಿಸುವಂತೆ ಯುವಜನರು ಒತ್ತಡ ಹೇರುತ್ತಿದ್ದಾರೆ. ಪ್ರಸ್ತುತ ಚಟ್ಟಸಭೆಗಳಲ್ಲಿ (ಸಂಸತ್ತು ಮತ್ತು ವಿಧಾನಸಭೆಗಳಲ್ಲಿ) 40 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಒಟ್ಟು 384 ಸಂಸದರು ಮತ್ತು ಶಾಸಕರಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ವಿಶ್ಲೇಷಿಸಿದೆ.

ಇವರಲ್ಲಿ ಮೂವರಲ್ಲಿ ಒಬ್ಬರು ವಂಶಪಾರಂಪರ್ಯವಾಗಿ ಈ ಹುದ್ದೆಗಳಿಗೆ ಬಂದವರಾಗಿದ್ದಾರೆ ಎಂದು ಈ ವರದಿ ತಿಳಿಸಿದೆ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಲಕ್ಷಾಂತರ ಯುವಜನರು ಹೋರಾಟ ನಡೆಸುತ್ತಿದ್ದರೆ, ಕೆಲವೇ ಕೆಲವು ಯುವಕರು ಮಾತ್ರ ಆಸ್ತಿಯ ಜೊತೆಗೆ ರಾಜಕೀಯವನ್ನೂ ವಾರಸುದಾರಿಕೆಯಾಗಿ ಪಡೆಯುತ್ತಿರುವ ಸ್ಥಿತಿಯನ್ನು ಈ ವರದಿ ಬೆಳಕಿಗೆ ತಂದಿದೆ.

ಲೋಕಸಭೆಯಲ್ಲಿ ಯುವ ಸಂಸದರ ಸ್ಥಿತಿ: ಜೆನ್ ಜಿ (Gen Z) ಎಂದರೆ 1997 ರಿಂದ 2012 ರ ನಡುವೆ ಜನಿಸಿದವರು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸು 25 ವರ್ಷ ಆಗಿರುವುದರಿಂದ, 40 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಜನಪ್ರತಿನಿಧಿಗಳನ್ನು ಈ ವರದಿಯಲ್ಲಿ ಪರಿಗಣಿಸಲಾಗಿದೆ. ಲೋಕಸಭೆಯಲ್ಲಿ ಇಂತಹ 40 ಸಂಸದರಿದ್ದು, ಅವರಲ್ಲಿ 24 ಮಂದಿ (ಶೇ. 37.8) ವಂಶಪಾರಂಪರ್ಯವಾಗಿ ಈ ಹುದ್ದೆಗಳಿಗೆ ಬಂದವರಾಗಿದ್ದಾರೆ. ಬಿಜೆಪಿಯ 240 ಲೋಕಸಭಾ ಸಂಸದರಲ್ಲಿ 40 ವರ್ಷದೊಳಗಿನವರು 9 ಮಂದಿ ಇದ್ದು, ಅವರಲ್ಲಿ 5 ಮಂದಿ ವಂಶಪಾರಂಪರ್ಯ ರಾಜಕೀಯ ಹಿನ್ನೆಲೆಯಿಂದ ಬಂದವರು.

ಕಾಂಗ್ರೆಸ್‌ನ 98 ಸಂಸದರಲ್ಲಿ 40 ವರ್ಷದೊಳಗಿನವರು 7 ಮಂದಿ ಇದ್ದು, ಅವರಲ್ಲಿ 4 ಮಂದಿ ರಾಜಕೀಯ ಕುಟುಂಬಗಳ ವಾರಸುದಾರರಾಗಿದ್ದಾರೆ. ಸಮಾಜವಾದಿ ಪಕ್ಷದ 37 ಲೋಕಸಭಾ ಸಂಸದರಲ್ಲಿ 7 ಮಂದಿ ಯುವಕರಾಗಿದ್ದು, ಅವರಲ್ಲಿ 6 ಮಂದಿ ವಂಶಪಾರಂಪರ್ಯವಾಗಿ ಬಂದವರಾಗಿದ್ದಾರೆ. ತೆಲುಗು ದೇಶಂ ಪಕ್ಷದ 16 ಸಂಸದರಲ್ಲಿ 40 ವರ್ಷದೊಳಗಿನವರು 4 ಮಂದಿ ಇದ್ದು, ಅವರೆಲ್ಲರೂ ರಾಜಕೀಯ ಕುಟುಂಬಗಳ ಹಿನ್ನೆಲೆಯುಳ್ಳವರೇ ಆಗಿದ್ದಾರೆ. ಲೋಕಸಭೆಯಲ್ಲಿ 40 ವರ್ಷದೊಳಗಿನ 11 ಮಂದಿ ಮಹಿಳಾ ಸಂಸದರಿದ್ದು (ಶೇ. 27.5), ಇದು ಲೋಕಸಭೆಯ ಒಟ್ಟು ಮಹಿಳಾ ಪ್ರಾತಿನಿಧ್ಯವಾದ ಶೇ. 14ಕ್ಕಿಂತ ಸಾಕಷ್ಟು ಹೆಚ್ಚಾಗಿದೆ. ಆದರೆ, ಈ 11 ಮಹಿಳಾ ಸಂಸದರಲ್ಲಿ 8 ಮಂದಿ ರಾಜಕೀಯ ಹಾಗೂ ರಾಜಮನೆತನಗಳ ಹಿನ್ನೆಲೆಯಿಂದ ಬಂದಿರುವುದು ಗಮನಾರ್ಹವಾಗಿದೆ.

ವಿಧಾನಸಭೆಗಳಲ್ಲಿ ವಂಶಪಾರಂಪರ್ಯ ರಾಜಕಾರಣ:

22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇರವಾಗಿ ಅಥವಾ ಮೈತ್ರಿಕೂಟದ ಮೂಲಕ ಅಧಿಕಾರದಲ್ಲಿರುವ ಬಿಜೆಪಿಗೆ 1,811 ಶಾಸಕರಿದ್ದಾರೆ. ಇವರಲ್ಲಿ 121 ಮಂದಿ 40 ವರ್ಷದೊಳಗಿನ ವಯಸ್ಸಿನವರಾಗಿದ್ದು, 41 ಮಂದಿ ರಾಜಕೀಯ ಕುಟುಂಬಗಳಿಂದ ಬಂದ ವಾರಸುದಾರರಾಗಿದ್ದಾರೆ. ವಂಶಪಾರಂಪರ್ಯ ರಾಜಕಾರಣವನ್ನು ಸದಾ ಟೀಕಿಸುವ ಬಿಜೆಪಿಯು ತನ್ನಲ್ಲಿರುವ ಈ ಅಂಶವನ್ನು ಯಾರೂ ಗಮನಿಸುವುದಿಲ್ಲ ಎಂದು ಭಾವಿಸಿದಂತಿದೆ. ನೇರವಾಗಿ 4 ರಾಜ್ಯಗಳಲ್ಲಿ ಹಾಗೂ ಮಿತ್ರಪಕ್ಷಗಳೊಂದಿಗೆ ಒಂದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ 662 ಶಾಸಕರಿದ್ದಾರೆ. ಇವರಲ್ಲಿ 52 ಮಂದಿ 40 ವರ್ಷದೊಳಗಿನವರಾಗಿದ್ದು, 23 ಮಂದಿ ವಂಶಪಾರಂಪರ್ಯವಾಗಿ ಆಯ್ಕೆಯಾದವರಾಗಿದ್ದಾರೆ.

ಈ ವರದಿಯಲ್ಲಿ ಉಲ್ಲೇಖಿಸಲಾಗಿರುವ ಕೆಲವು ಪ್ರಮುಖ ಉದಾಹರಣೆಗಳು ಅತ್ಯಂತ ಗಮನಾರ್ಹವಾಗಿವೆ. ಪ್ರಸ್ತುತ ಲೋಕಸಭಾ ಸಂಸದರಲ್ಲಿ ಅತ್ಯಂತ ಕಿರಿಯ ವಯಸ್ಸಿನವರಾದ ಯದುವೀರ್ ಒಡೆಯರ್ (34), ಮೈಸೂರು ಹಿಂದಿನ ರಾಜಮನೆತನಕ್ಕೆ ಸೇರಿದ ಬಿಜೆಪಿ ಸಂಸದರಾಗಿದ್ದಾರೆ. ಇವರು ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ದತ್ತುಪುತ್ರರಾಗಿದ್ದಾರೆ. ಕರಣ್ ಭೂಷಣ್ ಸಿಂಗ್ (35), ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಮುಖ್ಯಸ್ಥ ಹಾಗೂ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರರಾಗಿದ್ದಾರೆ. ತೆಲುಗು ದೇಶಂ ಪಕ್ಷದ ಜಿ.ಎಂ. ಹರೀಶ್ ಬಾಲಯೋಗಿ (35), ಮಾಜಿ ಲೋಕಸಭಾ ಸ್ಪೀಕರ್ ಜಿ.ಎಂ.ಸಿ. ಬಾಲಯೋಗಿ ಅವರ ಪುತ್ರರಾಗಿದ್ದಾರೆ. ಮತ್ತೊಬ್ಬ ಟಿಡಿಪಿ ಸಂಸದ ಶ್ರೀಭರತ್ (37), ಮಾಜಿ ಸಂಸದರ ಮೊಮ್ಮಗ ಹಾಗೂ ನಂದಮೂರಿ ಕುಟುಂಬದ ಅಳಿಯಂದಿರು. ಉತ್ತರ ಪ್ರದೇಶದ ಮೊದಲ ಉಪಮುಖ್ಯಮಂತ್ರಿ ನಾರಾಯಣ್ ಸಿಂಗ್ ಅವರ ಮೊಮ್ಮಗರಾದ ಚಂದನ್ ಚೌಹಾಣ್ (37) ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಸಂಸದರಾಗಿದ್ದಾರೆ. ಸಮಾಜವಾದಿ ಪಕ್ಷದ ಆದಿತ್ಯ ಯಾದವ್ (38) ಮತ್ತು ಅಕ್ಷಯ್ ಯಾದವ್ (39), ಯುಪಿ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೋದರಳಿಯರು ಹಾಗೂ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಂಬಂಧಿಕರಾಗಿದ್ದಾರೆ. ಅಭಿಷೇಕ್ ಬ್ಯಾನರ್ಜಿ (38), ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯರಾಗಿದ್ದಾರೆ.

ದೇಶದ 31 ವಿಧಾನಸಭೆಗಳ ವ್ಯಾಪ್ತಿಯಲ್ಲಿ 40 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಶಾಸಕರು 344 ಮಂದಿ ಇದ್ದು, ಅವರಲ್ಲಿ 121 ಮಂದಿ, ಅಂದರೆ ಶೇ. 35.2ರಷ್ಟು ಜನ ವಂಶಪಾರಂಪರ್ಯವಾಗಿ ಬಂದವರಾಗಿದ್ದಾರೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಸ್ಪಷ್ಟಪಡಿಸಿದೆ.

You cannot copy content of this page

Exit mobile version