Friday, June 14, 2024

ಸತ್ಯ | ನ್ಯಾಯ |ಧರ್ಮ

ಭಾರತದ ಮಾಧ್ಯಮಗಳು ಪಕ್ಷಪಾತಿಗಳು: ಪತ್ರಿಕಾಗೋಷ್ಟಿ ನಡೆಸದ ಮೋದಿ

“ಭಾರತದ ಮಾಧ್ಯಮಗಳಲ್ಲಿ ‘ತಟಸ್ಥತೆಯ ಕೊರತೆ’ ಇದೆ ಮತ್ತು ಪತ್ರಕರ್ತರು ‘ತಮ್ಮ ಅಭಿಪ್ರಾಯಗಳು ಮತ್ತು ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಾರೆ. ಈ ಕಾರಣಕ್ಕೆ ನಾನು ಪತ್ರಿಕಾಗೋಷ್ಠಿಗಳನ್ನು ನಡೆಸಲಿಲ್ಲ,” ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ನರೇಂದ್ರ ಮೋದಿಯವರು ಹೇಳಿದ್ದರಲ್ಲಿ ಹೇಳುವಂತ ತಪ್ಪೇನು ಇಲ್ಲ. ಆದರೆ ಕಳೆದ ಒಂದು ದಶಕದಿಂದ ಮಾಧ್ಯಮಗಳು ತಮ್ಮ ಪಕ್ಷದ ಸಿದ್ಧಾಂತವನ್ನು ಪ್ರಚಾರ ಮಾಡಿ ʼಪಕ್ಷಪಾತಿʼಗಳಾಗಿ ಬೆಳೆದಿವೆ ಎಂದು ಹೇಳಲು ಮರೆತಿದ್ದಾರೆ.

“ನಾನು ಸಂಸತ್ತಿಗೆ ಜವಾಬ್ದಾರನಾಗಿದ್ದೇನೆ. ಇಂದು ಪತ್ರಕರ್ತರು ತಮ್ಮದೇ ಆದ ಆದ್ಯತೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾಧ್ಯಮವು ಸದ್ಯ ಪಕ್ಷಾತೀತ ಘಟಕವಾಗಿ ಉಳಿದಿಲ್ಲ,” ಎಂದು ಹೇಳಿದ್ದಾರೆ.

“ಜನರಿಗೆ ಈಗ ನಿಮ್ಮ ನಂಬಿಕೆಗಳ ಬಗ್ಗೆಯೂ ಅರಿವಿದೆ. ಈ ಹಿಂದೆ ಮಾಧ್ಯಮಗಳು ಮುಖರಹಿತವಾಗಿದ್ದವು… ಮಾಧ್ಯಮದಲ್ಲಿ ಯಾರು ಬರೆಯುತ್ತಿದ್ದಾರೆ, ಅದರ ಸಿದ್ಧಾಂತ ಏನು… ಈ ಹಿಂದೆ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹಾಗಿದ್ದೂ, ಪರಿಸ್ಥಿತಿಯು ಇನ್ನು ಮುಂದೆಯೂ ಹಾಗೆ ಇರಬೇಕೆಂದಿಲ್ಲ,” ಎಂದು ಮೋದಿ ಆಜ್ ತಕ್ ಹಿಂದಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯನ್ನೇ ನಡೆಸದೆ ದಾಖಲೆ ಸೃಷ್ಟಿ ಮಾಡಿರುವ ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯವರು ಲೋಕಸಭಾ ಚುನಾವಣೆ-2024ರ ಈ ಸಂದರ್ಭದಲ್ಲಿ ‘ಗೋದಿ ಮೀಡಿಯಾ’ದ ಒಂದು ಭಾಗವೆಂದೇ ಪರಿಗಣಿಸಲಾಗಿರುವ ಆಜ್‌ ತಕ್‌ ಹಿಂದಿ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ʼಗೋದಿ ಮೀಡಿಯಾʼ ಎಂಬುದು ನರೇಂದ್ರ ಮೋದಿಯವರ ಗುಣಗಾನ ಮಾಡುತ್ತಾ, ಸುಳ್ಳನ್ನೇ ಸುದ್ದಿ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಟಿವಿ ಚಾನೆಲ್‌ಗಳಿಗೆ ಪತ್ರಕರ್ತ ರವೀಶ್ ಕುಮಾರ್ ಅವರು ನೀಡಿದ ಹೆಸರಾಗಿದೆ.

“ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾಧ್ಯಮ ನಿರ್ವಹಣೆಯ ಸುತ್ತ ಸುತ್ತುವ ರಾಜಕೀಯದಲ್ಲಿ ಹೊಸ ಸಂಸ್ಕೃತಿಯೊಂದು ಬೆಳೆದಿದೆ,” ಎಂದು ಪ್ರಧಾನಿ ಹೇಳಿದ್ದಾರೆ. 2019 ರಲ್ಲಿ ಇದೇ ನರೇಂದ್ರ ಮೋದಿಯವರು ಇದನ್ನು “ನಾನು ಪ್ರಜಾಪ್ರಭುತ್ವ ವಿರೋಧಿಯಲ್ಲ. ಸುದ್ದಿ ಪ್ರಕಟಣೆಯೊಂದೇ ಪ್ರಜಾಪ್ರಭುತ್ವದ ಅಂಶವಲ್ಲ,”ಎಂದು ಹೇಳಿದ್ದರು.

ಆದರೆ ತಮ್ಮ ಸಂದರ್ಶನದಲ್ಲಿ ಮಾಧ್ಯಮಗಳ ಸುತ್ತ ಬೆಳೆದಿರುವ ಈ ʼಹೊಸ ಸಂಸ್ಕೃತಿʼ ತಮ್ಮ ಸರ್ಕಾರದ ನಿಯಂತ್ರಣ-ಸುಪರ್ದಿಯಲ್ಲಿ ಹೇಗೆ ಬಂತು ಎಂಬ ಬಗ್ಗೆ ಮಾತನಾಡಿಲ್ಲ.

ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (RSF) ಬಿಡುಗಡೆ ಮಾಡಿರುವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 176 ದೇಶಗಳಲ್ಲಿ ಭಾರತ 159 ನೇ ಸ್ಥಾನವನ್ನು ಪಡೆದಿದೆ. ಈ ವರದಿ ಪ್ರಕಟವಾದ ಎರಡು ವಾರಗಳ ನಂತರ ಮೋದಿಯವರು ಭಾರತದ ಮಾಧ್ಯಮಗಳು ‘ಪಕ್ಷಪಾತಿಗಳು’ ಎಂದು ಟೀಕೆ ಮಾಡಿದ್ದಾರೆ.

“ಪತ್ರಕರ್ತರ ವಿರುದ್ಧದ ಹಿಂಸಾಚಾರ, ಮಾಧ್ಯಮಗಳ ಕಾರ್ಪೋರೇಟ್ ಮಾಲೀಕತ್ವ ಮತ್ತು ರಾಜಕೀಯ‌ ಪಕ್ಷಗಳ ಜೊತೆಗಿನ ಹೊಂದಾಣಿಕೆ: ಇವೆಲ್ಲಾ ಕಾರಣಗಳಿಂದ 2014 ರಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಆಳುತ್ತಿರುವ ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ’ದ ಪತ್ರಿಕಾ ಸ್ವಾತಂತ್ರ್ಯ ಬಿಕ್ಕಟ್ಟಿನಲ್ಲಿದೆ,” ಎಂದು RSF ಡೇಟಾದ ಜೊತೆಗೆ ‘Asia – Pacific: Press freedom under yoke of authoritarian governments’ ವರದಿಯನ್ನು ಬಿಡುಗಡೆ ಮಾಡಿತ್ತು.

ಮೋದಿಯವರು ಟೀಕಿಸಿರುವ ‘ಪಕ್ಷಪಾತಿ’ ಮಾಧ್ಯಮಗಳ ಮಾಲೀಕರು ಯಾರು? ಮೋದಿಯವರಿಗೆ ಅವರ ಜೊತೆಗೆ ಏನು ಸಂಬಂಧ?

ನರೇಂದ್ರ ಮೋದಿಯವರು ಆಜ್‌ ತಕ್‌ ಸಂದರ್ಶನದಲ್ಲಿ ಹೇಳಿರುವ ʼಪಕ್ಷಪಾತಿʼ ಮಾಧ್ಯಮಗಳು ದೇಶದ ಪ್ರಮುಖ ಉದ್ಯಮಿಗಳ ಒಡೆತನದಲ್ಲಿ ಇವೆ. ಇವರೆಲ್ಲರೂ ನರೇಂದ್ರ ಮೋದಿಯರ ಆತ್ಮೀಯ ಸ್ನೇಹಿತರು. ಈ ಮಾಧ್ಯಮಗಳು ನರೇಂದ್ರ ಮೋದಿಯವರಿಗೆ ಹೆಚ್ಚಿನ ಪ್ರಚಾರವನ್ನೂ, ಸುಳ್ಳು ಸುದ್ದಿಗಳನ್ನೂ ಪ್ರಕಟಿಸಿ ಮಾಧ್ಯಮ ಟೀಕಾಕಾರರಿಂದ ʼಗೋದಿ ಮೀಡಿಯಾ, ಬಕೆಟ್‌ ಮೀಡಿಯಾʼ ಎಂದು ಕರೆಸಿಕೊಂಡಿವೆ.

ವಾರದ ವೀಕ್ಷಕರ ಪ್ರಕಾರ 2022 ರ ವಾರ 10 (ಮಾರ್ಚ್‌ 4 ರಿಂದ ಮಾರ್ಚ್‌ 10, 2024) ರಲ್ಲಿ ಭಾರತದಾದ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಐದು ಇಂಗ್ಲಿಷ್ ಟಿವಿ ಚಾನೆಲ್‌ಗಳು: ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ಇಂಡಿಯಾ ಟುಡೇ, ಸಿಎನ್‌ಎನ್ ನ್ಯೂಸ್ 18 ಮತ್ತು ವಿಯನ್. (ಸ್ಟಟಿಸ್ಟಾ)

ವಿಯಾನ್ (Wion) ಸಂಸ್ಥೆಯ ಸೋದರಿ ಸಂಸ್ಥೆ ʼಝೀ ನ್ಯೂಸ್ʼನ ಒಡೆಯ, ಬಿಜೆಪಿ ಜೊತೆಗೆ ಆತ್ಮೀಯ ನಂಟನ್ನು ಹೊಂದಿರುವ ಸುಭಾಷ್ ಚಂದ್ರ. ಇವರು 2016 ರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಹರಿಯಾಣದಿಂದ ಭಾರತೀಯ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದರು.

ಸಿಎನ್‌ಎನ್ ನ್ಯೂಸ್ 18 ಭಾರತದ ಕುಬೇರನ ಕುಬೇರ ಮುಖೇಶ್ ಅಂಬಾನಿಯವರ ಒಡೆತನದಲ್ಲಿದೆ. ಅಂಬಾನಿ ಹಾಗೂ ಮೋದಿಯವರ ದೋಸ್ತಿ ಜಗದ್ವಿಖ್ಯಾತ.

ಸದಾ ವಿಷಕಾರಿ ವಿಚಾರಗಳನ್ನೂ, ಕೋಮು ದ್ವೇಷವನ್ನೂ, ಸಂವೇದನಾರಹಿತ ವರದಿಗಾರಿಕೆಯನ್ನೂ ಮಾಡುವುದರಲ್ಲಿ ಖ್ಯಾತವಾಗಿರುವ ರಿಪಬ್ಲಿಕ್ ಟಿವಿಯನ್ನು 2017 ರಲ್ಲಿ ರಾಜೀವ್ ಚಂದ್ರಶೇಖರ್ ಅವರು ಸ್ಥಾಪಿಸಿದರು (ಸಹ-ಸಂಸ್ಥಾಪಕ). ಇವರು ಬಿಜೆಪಿ ನಾಯಕರೂ ಆಗಿದ್ದು, ಕೇರಳದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. ಸದ್ಯ ರಾಜ್ಯಸಭಾ ಸದಸ್ಯರಾಗಿದ್ದು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವರಾಗಿದ್ದಾರೆ.

ಇದೇ ರಿಪಬ್ಲಿಕ್‌ ಚಾನೆಲ್‌ನ ಇನ್ನೋರ್ವ ಸಂಸ್ಥಾಪಕ ಅರ್ನಾಬ್‌ ಗೋಸ್ವಾಮಿಯವರು ಅನೇಕ ಬಾರಿ ತಮ್ಮ ಸಂವೇದನಾರಹಿತ ಮಾತುಗಳಿಗೆ ದೇಶದ ಮುಂದೆ ಕ್ಷಮೆ ಕೇಳಿ ಖ್ಯಾತರಾದವರು.ಇವರೂ ನರೇಂದ್ರ ಮೋದಿಯವರ ದೋಸ್ತಿ. ಇವರ ತಂದೆ ತೊಂಬತ್ತರ ದಶಕದಲ್ಲಿ ಬಿಜೆಪಿಗೆ ಸೇರಿ, ಗುವಾಹಟಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ಇವರ ತಾಯಿಯ ಚಿಕ್ಕಪ್ಪ 2015 ರವರೆಗೆ ಬಿಜೆಪಿಯ ಅಸ್ಸಾಂ ಘಟಕದ ಮುಖ್ಯಸ್ಥರಾಗಿದ್ದರು.

ಟೈಮ್ಸ್ ನೌ ಎಂಬ ಇನ್ನೊಂದು ಟಿವಿ ಚಾನೆಲ್‌ ಬೆನೆಟ್, ಕೋಲ್ಮನ್ ಮತ್ತು ಕೋ.ಗ್ರೂಪ್‌ನ ಮಾಲೀಕರಾಗಿರುವ ಸಾಹು ಜೈನ್ ಅವರ ಒಡೆತನದಲ್ಲಿದೆ. ಇದರಲ್ಲಿ ಸುದ್ದಿ ನಿರೂಪಕಿಯಾಗಿರುವ ನವಿಕಾ ಕುಮಾರ್ ಮತ್ತು ರಾಹುಲ್ ಶಿವಶಂಕರ್ ಬಿಜೆಪಿ ಸರ್ಕಾರದ ಪರ ಬ್ಯಾಟಿಂಗ್‌ ಮಾಡುವುದಕ್ಕಾಗಿ ಅನೇಕ ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ನವಿಕಾ ಕುಮಾರ್ ಮತ್ತು ಮತ್ತೊಬ್ಬ ನಿರೂಪಕ ಸುಶಾಂತ್ ಸಿನ್ಹಾ ಅವರಿಗೆ ನರೇಂದ್ರ ಮೋದಿಯವರು ಸಂದರ್ಶನ ನೀಡಿದ್ದರು.

ಗುರುವಾರದಂದು ಆಜ್ ತಕ್‌ನ ಅಂಜನಾ ಓಂ ಕಶ್ಯಪ್, ಶ್ವೇತಾ ಸಿಂಗ್, ಸುಧೀರ್ ಚೌಧರಿ ಮತ್ತು ರಾಹುಲ್ ಕನ್ವಾಲ್ ಎಂಬ ಬಿಜೆಪಿ ʼಪಕ್ಷಪಾತಿʼ ಮಾಧ್ಯಮಗಳ ನಿರೂಪಕರ ಮುಂದೆ ಕುಳಿತು, ನರೇಂದ್ರ ಮೋದಿಯವರಯ ಮಾಧ್ಯಮಗಳನ್ನು ʼಹೇಡಿಗಳು, ಪಕ್ಷಪಾತಿಗಳುʼ ಎಂದು ಕರೆದರು. ಮೋದಿಯವರ ಪರ ಭಜನೆ ಮಾಡುತ್ತಲೇ ಬದುಕು ಕಳೆಯುತ್ತಿರುವ ಈ ನಾಲ್ಕೂಜನ ನಿರೂಪಕರು ಮೋದಿಯವರ ಬೈಗುಳ ಕೇಳಿ ಗೊಳ್ಳೆಂದು ನಕ್ಕರು.

Related Articles

ಇತ್ತೀಚಿನ ಸುದ್ದಿಗಳು