ದೆಹಲಿ: ಭಾರತದ ಪಾಸ್‌ಪೋರ್ಟ್ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ನೀಡಲಾಗುವ ದಾಖಲೆಯೇ ಹೊರತು, ದೇಶದ ಪೌರತ್ವವನ್ನು ಧೃಡೀಕರಿಸುವ ಅಂತಿಮ ಪುರಾವೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ನೀಡಿದ ಸ್ಪಷ್ಟನೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. 14ನೇ ‘ಪಾಸ್‌ಪೋರ್ಟ್ ಸೇವಾ ದಿವಸ್’ ಸಂದರ್ಭದಲ್ಲಿ ಅಧಿಕಾರಿಗಳು ನೀಡಿದ ಈ ಹೇಳಿಕೆಯು, “ಪಾಸ್‌ಪೋರ್ಟ್ ಪಡೆಯಲು ಅಷ್ಟೊಂದು ಕಠಿಣ ನಿಯಮಗಳು ಮತ್ತು ಪೊಲೀಸ್ ಪರಿಶೀಲನೆ ಏಕೆ ಬೇಕು?” ಎಂಬ ಸಾರ್ವಜನಿಕರ ಪ್ರಶ್ನೆಗೆ ದಾರಿ ಮಾಡಿಕೊಟ್ಟಿದೆ.
ಈ ಪ್ರಕಟಣೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರಖ್ಯಾತ ಸಾಹಿತಿ ಜಾವೇದ್ ಅಖ್ತರ್ ಅವರು, “ಪಾಸ್‌ಪೋರ್ಟ್ ಕೇವಲ ಪ್ರಯಾಣದ ದಾಖಲೆಯಾಗಿದ್ದರೆ, ವ್ಯಕ್ತಿಯು ಭಾರತೀಯ ನಾಗರಿಕ ಹೌದೋ ಅಲ್ವೋ ಎಂದು ಖಚಿತಪಡಿಸಿಕೊಳ್ಳದೆಯೇ ಸರ್ಕಾರ ಇದನ್ನು ನೀಡುತ್ತಿದೆಯೇ? ಇದು ಅತ್ಯಂತ ವಿಚಿತ್ರವಾದ ವಾದ” ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಂದೆಡೆ, ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಅವರು, “ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲದಿದ್ದರೆ ಪೊಲೀಸ್ ಪರಿಶೀಲನೆ ವೇಳೆ ಏನನ್ನು ಧೃಡೀಕರಿಸಲಾಗುತ್ತಿದೆ? ಹಾಗಿದ್ದರೆ ಕೇಂದ್ರ ಸರ್ಕಾರವು ಭಾರತೀಯರಲ್ಲದವರಿಗೂ ಪಾಸ್‌ಪೋರ್ಟ್ ನೀಡುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
ವಿದೇಶಾಂಗ ಇಲಾಖೆಯ ಅಧಿಕಾರಿಗಳ ಪ್ರಕಾರ, ಪಾಸ್‌ಪೋರ್ಟ್ ವಿತರಣೆಯ ಮುನ್ನ ನಡೆಸಲಾಗುವ ಪೊಲೀಸ್ ಪರಿಶೀಲನೆಯ ಮುಖ್ಯ ಉದ್ದೇಶ ಅರ್ಜಿದಾರನ ಗುರುತು, ಪ್ರಸ್ತುತ ವಿಳಾಸ ಹಾಗೂ ಆತನ ಹಿನ್ನೆಲೆಯನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳುವುದಾಗಿದೆ. ಯಾವುದೇ ರೀತಿಯ ವಂಚನೆ, ನಕಲಿ ಗುರುತಿನ ಚೀಟಿಗಳ ಬಳಕೆ ಮತ್ತು ಅಪರಾಧ ಹಿನ್ನೆಲೆಯುಳ್ಳವರು ಅಥವಾ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ವ್ಯಕ್ತಿಗಳು ದೇಶದ ಅಧಿಕೃತ ಪ್ರಯಾಣ ದಾಖಲೆಯನ್ನು ಪಡೆದುಕೊಳ್ಳುವುದನ್ನು ತಡೆಯಲು ಈ ಕಠಿಣ ಪ್ರಕ್ರಿಯೆ ಅತ್ಯಗತ್ಯವಾಗಿದೆ.
1967 ರ ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 17 ರ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಸಾರ್ವಭೌಮ ದಾಖಲೆಯಾಗಿದ್ದು, ಅದು ಯಾವಾಗಲೂ ಕೇಂದ್ರ ಸರ್ಕಾರದ ಅಧಿಕೃತ ಸ್ವತ್ತಾಗಿರುತ್ತದೆ. ಸರ್ಕಾರವು ಬಯಸಿದಾಗ ಅದನ್ನು ಹಿಂಪಡೆಯುವ ಅಥವಾ ರದ್ದುಗೊಳಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್ ಅವರು ಸರ್ಕಾರದ ಈ ಸ್ಪಷ್ಟನೆಯನ್ನು ಕಾನೂನುಬದ್ಧವಾಗಿ ಬೆಂಬಲಿಸಿದ್ದಾರೆ. “ಪಾಸ್‌ಪೋರ್ಟನ್ನು ‘ಪಾಸ್‌ಪೋರ್ಟ್ ಕಾಯ್ದೆ 1967’ ರ ಅಡಿಯಲ್ಲಿ ನೀಡಲಾಗುತ್ತದೆ, ಆದರೆ ಪೌರತ್ವವನ್ನು ‘ಪೌರತ್ವ ಕಾಯ್ದೆ 1955’ ರ ಅಡಿಯಲ್ಲಿ ನಿರ್ಧರಿಸಲಾಗುತ್ತದೆ. ಇವೆರಡೂ ಸಂಪೂರ್ಣ ಭಿನ್ನ ಕಾನೂನುಗಳು” ಎಂದು ಅವರು ತಿಳಿಸಿದ್ದಾರೆ. ಭಾರತದಲ್ಲಿ 140 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದರೂ, ಪೌರತ್ವವನ್ನು ಸಾರ್ವತ್ರಿಕವಾಗಿ ಮತ್ತು ಏಕರೂಪವಾಗಿ ನಿರೂಪಿಸುವ ಯಾವುದೇ ಒಂದು ನಿರ್ದಿಷ್ಟ ದಾಖಲೆ ಪ್ರಸ್ತುತ ಅಸ್ತಿತ್ವದಲ್ಲಿಲ್ಲ. ದೇಶದಲ್ಲಿ ಪೌರತ್ವವನ್ನು ಕೇವಲ ಜನನ, ವಂಶಪಾರಂಪರ್ಯ, ನೋಂದಣಿ ಮೂಲಕನಿರ್ಧರಿಸಲಾಗುತ್ತದೆ.
ಈ ಕುರಿತು ಉಂಟಾಗಿರುವ ರಾಜಕೀಯ ಗೊಂದಲಗಳಿಗೆ ತೆರೆ ಎಳೆದಿರುವ ಸರ್ಕಾರಿ ಮೂಲಗಳು, “ಪಾಸ್‌ಪೋರ್ಟ್ ಪೌರತ್ವದ ಅಂತಿಮ ಸಾಕ್ಷ್ಯವಲ್ಲ ಎಂಬ ನಿಯಮವು ಹಳೆಯದೇ ಆಗಿದೆ. ಕಳೆದ 12 ವರ್ಷಗಳ ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ಈ ವಿಷಯದಲ್ಲಿ ಯಾವುದೇ ಹೊಸ ನಿರ್ಧಾರವನ್ನು ಕೈಗೊಂಡಿಲ್ಲ,” ಎಂದು ಸ್ಪಷ್ಟಪಡಿಸಿವೆ. ಇದೇ ವೇಳೆ, ಚುನಾವಣಾ ಆಯೋಗವು (ECI) ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹಾಗೂ ಮತದಾನದ ಗುರುತಿಗಾಗಿ ಪಾಸ್‌ಪೋರ್ಟ್ ಮುಂಚಿನಂತೆಯೇ ಒಂದು ಪ್ರಮುಖ ಅಧಿಕೃತ ದಾಖಲೆಯಾಗಿ ಮುಂದುವರಿಯಲಿದೆ ಎಂದು ತಿಳಿಸಿದೆ.
