ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ರಾಜ್ಯಸಭೆಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ, 2018 ರಿಂದ ಕನಿಷ್ಠ 403 ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ನೈಸರ್ಗಿಕ ಅವಘಡಗಳು ಸೇರಿದಂತೆ ಅಪಘಾತ, ಹಿಂಸಾಚಾರದಂತಹ ಕಾರಣಗಳಿಂದ ಸಾವನ್ನಪ್ಪಿದ್ದಾರೆ.
ಇಂತಹ ಅತಿ ಹೆಚ್ಚು ಸಾವುಗಳು ಕೆನಡಾದಲ್ಲಿ ನಡೆದಿವೆ. ಇಲ್ಲಿ 2018 ರಿಂದ 91 ಭಾರತೀಯ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ. ಕೆನಡಾದ ನಂತರ ಯುನೈಟೆಡ್ ಕಿಂಗ್‌ಡಮ್‌ನಲ್ಲಿ 48, ರಷ್ಯಾದಲ್ಲಿ 40, ಅಮೇರಿಕಾದಲ್ಲಿ 36, ಆಸ್ಟ್ರೇಲಿಯಾದಲ್ಲಿ 35, ಉಕ್ರೇನ್‌ನಲ್ಲಿ 21, ಜರ್ಮನಿಯಲ್ಲಿ 20, ಸೈಪ್ರಸ್‌ನಲ್ಲಿ 14, ಇಟಲಿಯಲ್ಲಿ 10 ಮತ್ತು ಫಿಲಿಪೈನ್ಸ್‌ನಲ್ಲಿ 10 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಜುಲೈ 2023, 24 ವರ್ಷದ ಗುರ್ವಿಂದರ್ ನಾಥ್ ಮತ್ತು 23 ವರ್ಷದ ಪೊಲುಕೊಂಡ ಲೆನಿನ್ ನಾಗ ಕುಮಾರ್ ಎಂಬ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಕೆನಡಾದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಸಾವನ್ನಪ್ಪಿದರು. 2022 ರಲ್ಲಿ 21 ವರ್ಷದ ಕಾರ್ತಿಕ್ ವಾಸುದೇವ್ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ನೀಡಬೇಕಾದ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಸಚಿವ ಮುರಳೀಧರನ್ ಒತ್ತಿ ಹೇಳಿದ್ದು, ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳ ಮುಖ್ಯಸ್ಥರು ಮತ್ತು ಇತರ ಹಿರಿಯ ಅಧಿಕಾರಿಗಳು ಕಾಲೇಜು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ನಿರಂತರ ಮಾತುಕತೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
“ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ರಕ್ಷಣೆ ಭಾರತ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ… ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಘಟನೆಯನ್ನು ಖಚಿತಪಡಿಸಿಕೊಳ್ಳಲು ಆತಿಥೇಯ ದೇಶದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣವೇ ಮಾತುಕತೆ ನಡೆಸಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ,” ಎಂದು ಸಚಿವರು ತಿಳಿಸಿದ್ದಾರೆ.